ಬೈಲಹೊಂಗಲ: ಸಮಯಕ್ಕೆ ಸರಿಯಾಗಿ ಬಾರದ ಬಸ್ಸಿಗೆ ಕಾದುನಿಂತ ವಿದ್ಯಾರ್ಥಿಗಳು ಲೇಟಾಗಿ ಗ್ರಾಮಕ್ಕೆ ಬಂದ ಬಸ್ ಮುಂದೆ ಪ್ರತಿಭಟನೆ ಮಾಡಿದ ಘಟನೆ ತಾಲೂಕಿನ ಸಿದ್ದಸಮುದ್ರ ಗ್ರಾಮದಲ್ಲಿ ನಡೆದಿದೆ.
ಪ್ರತಿನಿತ್ಯ ಸಿದ್ಧ ಸಮುದ್ರದಿಂದ ಬೆಳವಡಿ, ಬೈಲಹೊಂಗಲ, ಧಾರವಾಡ ಹೀಗೆ ಬೇರೆ ಬೇರೆ ಕಡೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ.ಪ್ರತಿನಿತ್ಯ 9:30 ಗಂಟೆಗೆ ಬರಬೇಕಾದ ಚಿಕ್ಕ ಬೆಳ್ಳಿಕಟ್ಟಿ ಬಸ್ ಕಳೆದ ಎರಡು ಮೂರು ದಿನಗಳಿಂದ 11:30 ಗಂಟೆಗೆ ಬರುತ್ತಿದೆ.
ಇದರಿಂದ ಬೇಸತ್ತ ವಿದ್ಯಾರ್ಥಿಗಳು ಯಾಕೆ ಬಸ್ ಇಷ್ಟೊಂದು ಲೇಟಾಗಿ ಬರುತ್ತಿದೆ ಎಂದು ನಿರ್ವಾಹಕರನ್ನು ಕೇಳಿದಾಗ ಅವರು ಚಿಕ್ಕ ಬೆಳ್ಳಿಕಟ್ಟಿಯಿಂದ ಬುಡರಕಟ್ಟಿ, ಬೀದರಗಡ್ಡಿ, ಹಿರೇಬೆಳ್ಳಿಕಟ್ಟಿ, ಸುತ್ತಿ ಸಿದ್ದಸಮುದ್ರ ಗ್ರಾಮಕ್ಕೆ ಬರುವ ಅಷ್ಟರಲ್ಲಿ ಟೈಮ್ ಆಗುತ್ತೆ ಅಂತಾ ಹೇಳುತ್ತಾರೆ. ಹಾಗಾದರೆ ಶಾಲಾ ಕಾಲೇಜಿನ ಸಮಯಕ್ಕೆ ವಿದ್ಯಾರ್ಥಿಗಳು ಹೋಗುವುದಾದರು ಹೇಗೆ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಇನ್ನಾದರು ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಟ ಆಡದೇ ಸಮಯಕ್ಕೆ ಸರಿಯಾಗಿ ಬಸ್ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.ಇದಕ್ಕೆ ಸಾರಿಗೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಸ್ಪಂದಿಸದೆ ಹೋದರೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಳವಡಿ ಧಾರವಾಡ ರಸ್ತೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ನಡೆಸಲು ಸಿದ್ದರಿದ್ದೇವೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.