ಚನ್ನಮ್ಮ ಕಿತ್ತೂರು: ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಜಲಜೀವನ ಮಿಷನ್ ಯೋಜನೆಯಡಿ 2 ಕೋಟಿ 14 ಲಕ್ಷದ ಸಂಪೂರ್ಣ ಕಾಮಗಾರಿ ಕಳಪೆಯಾಗಿದ್ದು ಕ್ರೀಯಾ ಯೋಜನೆ ಇದ್ದಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಗುತ್ತಿಗೆದಾರ ರಮೇಶ ಹಂಚಿನಮನಿ ವಿರುದ್ಧ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಕಾಮಗಾರಿ ವಿವರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ ಮಿಷನ್ ಯೋಜನೆಯಡಿ ಉತ್ತಮ ಗುಣಮಟ್ಟದ ಪೈಪು ಅಳವಡಿಸಿ ನೆಲದಲ್ಲಿ ಪೈಪು ಹೂತು ಎರಡು ಬದಿಯಲ್ಲಿ ಕವಲಿ ಮಾಡಿ ಮಳೆ ನೀರು ಕವಲಿಗಳ ಮುಖಾಂತರ ಹರಿದು ಚರಂಡಿ ಸೇರಬೇಕು. ಆದರೆ ಗುತ್ತಿಗೆದಾರ ಗುಣಮಟ್ಟದ ಪೈಪು ಅಳವಡಿಸದೆ ಪೈಪುಗಳನ್ನು ನೆಲದಲ್ಲಿ ಹೂಳದೆ ಮೇಲಿಂದ ಮೇಲೆ ಮುಚ್ಚಲಾಗಿದ್ದು ಎರಡು ಬದಿ ನೀರು ಕವಲಿ ಸೇರದೆ ನಡು ರಸ್ತೆಯಲ್ಲಿ ಎರಡ್ಮೂರು ಇಂಚು ತಗ್ಗು ಮಾಡಿ ರಸ್ತೆ ಮಧ್ಯೆ ನೀರು ಹರಿಯುವಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಕಳಪೆ ಕಾಮಗಾರಿ ಕುರಿತು ಗುತ್ತಿಗೆದಾರ ರಮೇಶ ಹಂಚಿನಮನಿ ವಿರುದ್ಧ ಆರೋಪ ಮಾಡುವುದಷ್ಟೇ ಅಲ್ಲದೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಇತರೆ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ಕೊಡುವ ಮುಖಾಂತರ ಕ್ರಿಯಾ ಯೋಜನೆಗೆ ತಕ್ಕಂತೆ ವೈಜ್ಞಾನಿಕ ಮತ್ತು ಗುಣಮಟ್ಟದ ಕಾಮಗಾರಿ ನಡೆಸದ ಹೊರತು ಅನುದಾನ ಬಿಡುಗಡೆ ಮಾಡಕೂಡದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಸದರಿ ಕಾಮಗಾರಿಗೆ ಕಳಪೆ ಗುಣಮಟ್ಟದ ಸಿಮೆಂಟು ಹುಡಿ ಉಸುಕು ಮಾತ್ರ ಬಳಸಲಾಗಿದೆ ಒಂದಿಂಚು ಕಬ್ಬಿಣ ಬಳಸಿಲ್ಲ. ಜನಜೀವನ ಮಿಷನ್ ಅಡಿಯಲ್ಲ ಕುಡಿಯುವ ನೀರು ಸರಬರಾಜು ಆಗುವ ಪೈಪು ಸಹ ಕಳಪೆಯಾಗಿದ್ದು ಅದಕ್ಕೆ ಅಳವಡಿಸುವ ಮೀಟರ್ ಮೇಲು ಹೊದಿಕೆಯಾಗಿ ಅಳವಡಿಸುವ ಬಾಕ್ಸ್ ಸೇರಿದಂತೆ ಎಲ್ಲವೂ ಕಳಪೆಯಾಗಿವೆ”ಸುಭಾನ್ ಚೌರಿ, ಯುವನಾಯಕರು ಹುಣಸಿಕಟ್ಟಿ.