ಬೆಳಗಾವಿ,ಮಾ.07 : ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರ್ಕಾರದ ಯೋಜನೆಗಳು ಸಮರ್ಪಕ ಬಳಕೆ ಆಗಬೇಕು ಹಾಗೂ ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಲೋಕಸಭಾ ಸಂಸದೆ ಮಂಗಳಾ ಅಂಗಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ (ಮಾ.7) ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಯ 2021-22ನೇ ಸಾಲಿನ ಮೂರನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಕಾಮಗಾರಿಗಳು ಬಾಕಿ ಇದಲ್ಲಿ, ನಿಗದಿತ ಸಮಯಕ್ಕೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿವಿಧ ಯೋಜನೆಗಳಿಗೆ ಸರ್ಕಾರ ನೀಡಿದ ಅನುದಾನವನ್ನು ಸಮರ್ಪಕ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.
ಕುಡಿಯುವ ನೀರಿನ ಟ್ಯಾಂಕ್ ದುರಸ್ಥಿಗೆ ಸೂಚನೆ: ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಟ್ಯಾಂಕ್ ಗಳ ವ್ಯವಸ್ಥೆ ಕಲ್ಪಿಸಬೇಕು ಹಾಗೂ ದುರಸ್ತಿ ಹಂತದಲ್ಲಿ ಇರುವ ನೀರಿನ ಟ್ಯಾಂಕ್ ಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಗ್ರಾಮದ ಪ್ರತಿ ಮನೆಗೆ ನೀರು ಸರಬರಾಜು ಮಾಡಲು ತೊಂದರೆ ಆಗಬಾರದು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಮನೆಗಳಿಗೂ ಕುಡಿಯುವ ನೀರು ದೊರಕಬೇಕು. ನೀರಿನ ಟ್ಯಾಂಕ್, ಪೈಪ್ ಲೈನ್, ಸೇರಿದಂತೆ ಬಾಕಿ ಇರುವ ದುರಸ್ತಿ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಫಲಾನುಭವಿಗಳಿಗೆ ಉಜ್ವಲ ಯೋಜನೆ ದೊರೆಯಬೇಕು: ಜಿಲ್ಲೆಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಬ್ಸಿಡಿ ಸಿಲಿಂಡರ್ ಒದಗಿಸಬೇಕು. ಈಗಾಗಲೇ ಸಿಲಿಂಡರ್ ಪಡೆಯಲು ಬೇಡಿಕೆ ಇದ್ದು, ಅರ್ಹ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಿಲಿಂಡರ್ ನೀಡಬೇಕು ಎಂದು ಸಂಸದೆ ಅಂಗಡಿ ತಿಳಿಸಿದರು.
ಸ್ಮಾರ್ಟ್ ಸಿಟಿ ಪ್ರಗತಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ: ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ 930 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ. ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 392 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 396.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿಗಳಿಗೆ ಒಟ್ಟು 647.53 ಕೋಟಿ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ವಿವರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 104 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಒಟ್ಟು 213.31 ಕೋಟಿ ಮೊತ್ತದ 46 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ. 715.57 ಕೋಟಿ ಮೊತ್ತದ 57 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ 1.12 ಕೋಟಿ ಮೊತ್ತದ 1 ಕಾಮಗಾರಿ ಟೆಂಡರ್ ಹಂತದಲ್ಲಿದ್ದು ಬಾಕಿ ಇರುವ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಶೀಘ್ರಗೊಳಿಸಬೇಕು: ಸರ್ವ ಶಿಕ್ಷಣ ಅಭಿಯಾನದಡಿ, ಶಾಲೆಗಳ ಕೊಠಡಿ ನಿರ್ಮಾಣ ಮಾಡಲಾತಿದ್ದು, ಚಿಕ್ಕೋಡಿ ತಾಲೂಕಿನ ಅನೇಕ ಕಾಮಗಾರಿಗಳು ಬಾಕಿ ಇವೆ. ಈಗಾಗಲೇ ನಿಗದಿತ ಸಮಯ ಮೀರಿದ್ದು, ಪ್ರಾರಂಭ ಹಂತದಲ್ಲಿರುವ ಕೊಠಡಿ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಂಡು ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.
ಬೆಳಗಾವಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಎಲ್ಲ ಕಾಮಗಾರಿಗೆ ಪೂರ್ಣಗೊಂಡಿದ್ದು, ಉಳಿದಿರುವ 2 ಶಾಲೆಯ 10 ಕೊಠಡಿಗಳು ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿದೆ. ಅದೇ ರೀತಿಯಲ್ಲಿ ಬೈಲಹೊಂಗಲ ಖಾನಾಪೂರ ತಾಲೂಕಿನ ಯಾವುದೇ ಶಾಲಾ ಕೊಠಡಿ ಕಾಮಗಾರಿಗಳು ಇರಬಾರದು ಸರ್ಕಾರದ ಅನುದಾನ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದು ಈರಣ್ಣ ಕಡಾಡಿ ತಿಳಿಸಿದರು.
ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಇನ್ನಿತರ ಕಾಮಗಾರಿಗಳು ಪ್ರಾರಂಭ:
ನರೇಗಾ ಯೋಜನೆಯ ವ್ಯಾಪ್ತಿಯಲ್ಲಿ ಕೆರೆಗಳು, ಡಿಜಿಟಲ್ ಗ್ರಂಥಾಲಯಗಳ ಪ್ರಾರಂಭ, ಗ್ರಾಮ ಪಂಚಾಯಿತಿಗಳ ಹೊಸ ಕಟ್ಟಡ ನಿರ್ಮಾಣ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಟದ ಮೈದಾನ, ಕೊಠಡಿಗಳ ನಿರ್ಮಾಣ, ಹಾಗೂ ಕಿಚನ್ ಶೆಡ್ ಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಹೆಚ್ ವಿ ಅವರು ವಿವರಿಸಿದರು.
ಪೋಷಣೆ ಅಭಿಯಾನದಡಿ ಜಿಲ್ಲೆಗೆ ಪ್ರಥಮ ಸ್ಥಾನ:
ಪ್ರತಿ ಮಗುವಿಗೆ ಪೋಷಣೆ ಅಭಿಯನದಡಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ ಜೊತೆಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ, ಮೊಟ್ಟೆ, ವಿವಿಧ ಪೌಷ್ಟಿಕ ಪದಾರ್ಥಗಳನ್ನು ಮಾತೃಪೂರ್ಣ ಯೋಜನೆ ಅಡಿ ನೀಡಲಾಗುತ್ತಿದೆ. ಪೋಷಣೆ ಅಭಿಯಾನದಡಿ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಮಕ್ಕಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಬಸವರಾಜ ವರವಟ್ಟೆ ತಿಳಿಸಿದರು.
ನರೇಗಾ, ಫಸಲ್ ಭಿಮಾ, ಪಿಎಂ ಆವಾಸ್ ಯೋಜನೆ, ವಾಟರ್ ಟ್ಯಾಂಕ್ ನಿರ್ಮಾಣ, ಕೃಷಿ ಬೋರವೆಲ್, ವ್ಯವಸ್ಥಿತ ಶಾಲೆ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೋಷಣ್ ಅಭಿಯಾನ, ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ, ಆಯುಷ್ ಅಧಿಕಾರಿ ಸುಣಧೋಳಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು