ಸುದ್ದಿ ಸದ್ದು ನ್ಯೂಸ್
ಬೈಲಹೊಂಗಲ: ಮಕ್ಕಳಿಗೆ ಮಹಾತ್ಮರ ಹೆಸರಿಡಿ ಬಸವಣ್ಣನನ್ನು ಜಪಿಸಿದರೆ ಪಾಪ ಕರ್ಮಗಳು ಕಡಿಮೆಯಾಗುತ್ತವೆ. ಚನ್ನಬಸವಣ್ಣನನ್ನು ಜ್ಞಾಪಿಸಿಕೊಂಡರೆ ಜ್ಞಾನ ಪ್ರಾಪ್ತಿಯಾಗುತ್ತದೆ. ಅಕ್ಕಮಹಾದೇವಿಯನ್ನು ನೆನೆದರೆ ವೈರಾಗ್ಯದ ಮಹತ್ವ ತಿಳಿಯುತ್ತದೆ. ಈ ಮೊದಲು ಮಕ್ಕಳಿಗೆ ಮಹಾತ್ಮರ ಹೆಸರುಗಳನ್ನು ಇಡುತ್ತಿದ್ದರು. ಆದರೆ ಇದೀಗ ಅರ್ಥವೇ ಇಲ್ಲದ ವಿಚಿತ್ರ ಹೆಸರುಗಳನ್ನು ಇಡುತ್ತಿದ್ದಾರೆ. ಇನ್ನು ಮುಂದೆ ಮಕ್ಕಳಿಗೆ ಮಹಾತ್ಮರ ಹೆಸರುಗಳನ್ನು ಇಡುವ ಸಂಸ್ಕೃತಿ ಮತ್ತೆ ಬೆಳೆಯಬೇಕು. ಮನೆಯಲ್ಲಿ ಪ್ರತಿಯೊಬ್ಬರೂ ವಿಭೂತಿ ಧರಿಸಿ ಪ್ರಾರ್ಥನೆ ಮಾಡುವಂತಾಗಬೇಕು.
ಮನೆಗಳಲ್ಲಿ ಟಿವಿ, ಮೊಬೈಲ್ ನೋಡುವುದನ್ನು ಬೇರೆಯವರ ವಿಷಯಗಳನ್ನು ಚರ್ಚಿಸುವುದನ್ನು ಬಿಟ್ಟು ಬದುಕಿನ ಬಗ್ಗೆ ಚರ್ಚಿಸಬೇಕು. ಈಗ ಹಳ್ಳಿಗಳು ಕೆಟ್ಟು ಹೋಗಿವೆ. ಯಾರಾದರೂ ನಿಧನರಾದರೆ ಜನರಿಗೆ ಸಾರಾಯಿ, ಹಣ ನೀಡಿ ಭಜನೆ ಮಾಡಿಸುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ. ಸಾವಿನ ಮನೆಯಲ್ಲಿ ಪಟಾಕಿ ಸಿಡಿಸುವುದು ಬೇಡ. ಇತ್ತೀಚೆಗೆ ಆಚಾರ-ವಿಚಾರಗಳು ಕಡಿಮೆಯಾಗುವುದಷ್ಟೇ ಅಲ್ಲ, ಮನುಷ್ಯನ ಬೆಲೆಯೂ ಕಡಿಮೆಯಾಗಿದೆ. ಹಿರಿಯರನ್ನು ಕಂಡಾಗ ನಮಸ್ಕರಿಸುವ ಪದ್ಧತಿ ಬೆಳೆಯಬೇಕು. ನಾಲಿಗೆಗಳು ಶುಚಿಯಾಗಬೇಕು. ನಮ್ಮ ಪರಂಪರೆಯನ್ನು ಮಕ್ಕಳು ಅರಿಯಬೇಕು. ಭಕ್ತರು ಮಹಾತ್ಮರಿಗೆ, ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು. ನಾವು ಬದುಕಲು ಹಲವಾರು ದಾರಿಗಳಿವೆ. ನಮ್ಮ ಜತೆ ಇತರರಿಗೂ ಬದುಕಲು ಅವಕಾಶ ಕೊಡಬೇಕು. ಎಂದು ಮುಂಡರಗಿ ತೋಂಟದಾರ್ಯ ಮಠ ಹಾಗೂ ಬೈಲೂರ ನಿಷ್ಕಲ ಮಂಟಪದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು