ಸುಳ್ಳು ಆರೋಪ ಮಾಡಿದ ರೈತ ಮುಖಂಡನ ಮೇಲೆ ಕಾನೂನು ಕ್ರಮ; ಶಾಸಕ ದೊಡ್ಡಗೌಡ್ರ

ಚನ್ನಮ್ಮನ ಕಿತ್ತೂರು: ಸಾಕ್ಷಾಧಾರಗಳು ಇಲ್ಲದೆ ಆರೋಪ ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಗುಡುಗಿದರು.
ಅವರು ಸ್ಥಳಿಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ನ 24 ರಂದು ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಹೇಬ ಇನಾಮದಾರ ಎಂಬವರ ಪಹಣಿ ಪತ್ರಿಕೆಯಲ್ಲಿ ಖಾತಾ ಬದಲಾವಣೆ ಮಾಡಲು ರೂ 5 ಲಕ್ಷ ಲಂಚ ಹಾಗೂ ಅದರ ಶೂರಿಟಿಗಾಗಿ ರೂಂ 20 ಲಕ್ಷ ಮೊತ್ತದ ಖಾಲಿ ಚೆಕ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಶುಕ್ರವಾರ ತಹಶೀಲ್ದಾರರು ಹಾಗೂ ಭೂ ಸುಧಾರಣಾ ವಿಷಯಗಳ ಅಧಿಕಾರಿ 2 ಲಕ್ಷ ರೂ ಲಂಚದ ಹಣ ಹಾಗೂ ಖಾಲಿ ಚೆಕ್ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಲೊಕಾಯುಕ್ತರ ಬಲೆಗೆ ಸಿಕ್ಕಿಹಾಕಿಕೊಂಡ ವಿಷಯವಾಗಿ ಅಖಂಡ ಕರ್ನಾಟಕ ರೈತ ಸಂಘದ ಕೆಲವು ವ್ಯಕ್ತಿಗಳು ಭ್ರಷ್ಟ ಅಧಿಕಾರಿಗಳನ್ನು ಶಾಸಕರು ಸಾಕುತ್ತಿದ್ದಾರೆ ಹಾಗೂ ಇಂಥ ಅಧಿಕಾರಿಗಳ ಮೂಲಕ ತಾವು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ತಳಬುಡ ಇಲ್ಲದ ಇಂಥ ಆಧಾರ ರಹಿತ ಆರೋಪವನ್ನು ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ತಾಲೂಕಿನಲ್ಲಿ 28 ಸರಕಾರಿ ಕಚೇರಿಗಳು ಕೆಲಸ ಮಾಡುತ್ತಿದ್ದು ಒಬ್ಬನೆ ಒಬ್ಬ ಅಧಿಕಾರಿಯ ಬಳಿ ನಾನು ಅನಧಿಕೃತವಾಗಿ ಹಣ ವಸೂಲಿ ಮಾಡಿದ್ದನ್ನು ನನ್ನ ವಿರೋಧಿಗಳು ಆದಾರ ಸಹಿತ ಸಿದ್ಧ ಮಾಡಿ ತೋರಿಸಬೇಕು. ಸುಮ್ಮನೆ ತೇಜೋವಧೆ ಮಾಡಬಾರದು ತೇಜೋವಧೆ ಮಾಡಿದ ವ್ಯಕ್ತಿಗಳಿಗೆ ಬುದ್ಧಿ ಕಲಿಸಲಾಗುವುದು. ಚುನಾವಣೆ ಸಮೀಪಿಸುತ್ತಿರುವುದುರಿಂದ ನಿರಾಧಾರವಾದ ಇಂಥ ಆರೋಪಗಳು ಸಾಮಾನ್ಯ. ನನ್ನ ಅಧಿಕಾರ ಅವಧಿಯಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸುತ್ತ ಸಾಗಿದ್ದೇನೆ. ತಹಸೀಲ್ದಾರ ದುರಾಸೆಗೆ ಬಲಿಯಾಗಿ ಲೋಕಾಯುಕ್ತರ ಬಲೆಗೆ ಬಿದ್ದರೆ ನಾನೇನು ಮಾಡಲಿ. ತಪ್ಪು ಮಾಡಿದವನು ಶಿಕ್ಷೆ ಅನುಭವಿಸುತ್ತಾನೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ತಹಸೀಲ್ದಾರ ಕಿತ್ತೂರು ತಾಲೂಕಿನ ವ್ಯಕ್ತಿಯಾಗಿದ್ದರಿಂದ ನಾನೇ ಪತ್ರ ನೀಡಿ ಕಿತ್ತೂರಿಗೆ ಕರೆಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸಲು ಹೇಳಿದ್ದೇನು. ಆತನ ದುರದೃಷ್ಟ ಉಪ್ಪ ತಿಂದ ಮೇಲೆ ನೀರು ಕುಡಿಯಲೇಬೇಕು ಎಂದರು.
ಈ ವೇಳೆ  ಪಟ್ಟಣ ಪಂಚಾಯತ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ಕಾಯಕರ್ತರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";