ಚನ್ನಮ್ಮನ ಕಿತ್ತೂರು: ಮಾಜಿ ಸಚಿವ ಡಿ.ಬಿ. ಇನಾಮದಾರ ಇತ್ತಿಚೆಗೆ ನ್ಯುಮೋನಿಯಾ ಹಾಗೂ ಶ್ವಾಸಕೋಶ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಏ 25 ರಂದು ಲಿಂಗೈಕ್ಯರಾದರು ಅವರ ಅಂತ್ಯಸಂಸ್ಕಾರದಲ್ಲಿ ಕಿತ್ತೂರು ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಭಾಗಿಯಾಗಿರುವುದು ಇದೀಗ ರಾಜಕೀಯ ಪಡಸಾಲೆಯಲ್ಲಿ ತುಂಬಾನೇ ಸದ್ದು ಮಾಡ್ತಿದೆ.
ಮಾಜಿ ಸಚಿವರಾಗಿರುವ ಕಾರಣದಿಂದಾಗಿ ಜಿಲ್ಲಾಡಳಿತ ಸರ್ಕಾರಿ ಗೌರವಗಳೊಂದಿಗೆ ಇನಾಮದಾರ ಅವರ ಅಂತ್ಯಸಂಸ್ಕಾರ ಸಂದರ್ಭ ಗೌರವ ಸೂಚಿಸಿತ್ತು. ಸುದ್ದಿ ತಿಳಿದ ತಕ್ಷಣ ಸಿಎಂ ಬಸವರಾಜ ಬೊಮ್ಮಾಯಿ ಸಂಸದ ಈರಣ್ಣ ಕಡಾಡಿ ಹಾಗೂ ಸ್ಥಳೀಯ ಶಾಸಕ ಮಹಾಂತೇಶ ದೊಡ್ಡಗೌಡರ ಜೊತೆಗೆ ನೇಗಿನಹಾಳ ಇನಾಮದಾರ ಅವರ ಮನೆಗೆ ಭೇಟಿ ನೀಡಿದ್ದರು ಮಾಧ್ಯಗಳ ಮೂಲಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದರು. ಅದರಂತೆ ಶಾಸಕ ದೊಡ್ಡಗೌಡರ ಇಡೀ ದಿನ ಅಂತ್ಯಸಂಸ್ಕಾರ ಕಾರ್ಯದಲ್ಲಿ ಬ್ಯುಸಿ ಆಗುವ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದರು.
ಇನಾಮದಾರ ಅವರು ಕೈ ಟಿಕೇಟ್ ಆಕಾಂಕ್ಷಿ, ಟಿಕೇಟ್ ಕೈ ತಪ್ಪಿದ ಸಂದರ್ಭವನ್ನೇ ಸದುಪಯೋಗ ಪಡಿಸಿಕೊಂಡು ಸ್ಥಳೀಯ ಕಾಂಗ್ರೆಸ್ ಪಕ್ಷದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ದೂರ ಉಳಿದ ಇನಾಮದಾರ ಬೆಂಬಲಿಗರ ಮತಗಳನ್ನು ನಯವಾಗಿ ಸೆಳೆಯುವ ತಂತ್ರಕ್ಕೆ ಮುಂದಾಗಿದ್ದಾರೆ ದೊಡ್ಡಗೌಡರ ಎಂದು ಮತಕ್ಷೇತ್ರದ ಪ್ರಬುದ್ಧ ಮತದಾರರು ತಮ್ಮ ತಮ್ಮೋಳಗೆ ಮಾತನಾಡಿಕೊಳ್ಳುವುದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸುದ್ದಿ ಹರಿಬಿಟ್ಟದ್ದಾರೆ.
ಈ ಹಿಂದೆ ಇದೇ ಕ್ಷೇತ್ರದ ಮಾಜಿ ಕೇಂದ್ರ ಸಚಿವರಾದ ಬಾಬಾಗೌಡ ಪಾಟೀಲ ಅವರು ಮೃತರಾದ ಸಂದರ್ಭದಲ್ಲಿ ಸೌಜನ್ಯಕ್ಕೂ ಅವರ ಕುಟುಂಬದವರಿಗೆ ಸಾಂತ್ವನ ಹೇಳುವುದಾಗಲಿ ಅಥವಾ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಾಗಲಿ ಮಾಡದ ಶಾಸಕರು ಚುನಾವಣೆಯ ಈ ಸಂದರ್ಭದಲ್ಲಿ ಇಷ್ಟೊಂದು ಉತ್ಸುಕತೆ ತೋರಿದ್ದು ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಎಂ.ಕೆ.ಹುಬ್ಬಳ್ಳಿ ರೋಡ್ ಶೋ ರದ್ದುಪಡಿಸುವ ಮೂಲಕ ಇನಾಮದಾರ ಬೆಂಬಲಿಗರ ಮನಸ್ಸು ಗೆದ್ದು ಸೌಜನ್ಯದ ಆಯುಧ ಬೀಸಿ ಮತ ಬೇಟೆಗೆ ಮುಂದಾದ್ರಾ ಶಾಸಕ ದೊಡ್ಡಗೌಡರ ಅನ್ನೋ ಚರ್ಚೆ ನೆನ್ನೆಯಿಂದ ಶುರುವಾಗಿದೆ.
ಹಿರಿಯ ಮುತ್ಸದ್ದಿ ರಾಜಕಾರಣಿಗೆ ಗೌರವ ಸಲ್ಲಿಸಬೇಕಾಗಿರುವುದು ಶಾಸಕರ ಆದ್ಯ ಕರ್ತವ್ಯ ಸರಿ ಆದರೂ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮಾಜಿ ಕೇಂದ್ರ ಸಚಿವ ಬಾಬಾಗೌಡ್ರು ಪಾಟೀಲ ನಿಧನರಾದಾಗ ಅವರಿಗೆ ಸರ್ಕಾರಿ ಗೌರವ ಸಲ್ಲಿಸುವಲ್ಲಿ ತೋರದ ಸೌಜನ್ಯ ಇದೀಗ ಇನಾಮದಾರ ಅವರ ವಿಷಯದಲ್ಲಿ ತೋರಿರುವುದು ಕೇವಲ ಎಲೆಕ್ಷನ್ ಗಿಮಿಕ್ ಎಂಬ ವಿಷಯ ಸಾರ್ವಜನಿಕ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ.