ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಚನ್ನಮ್ಮನ ಕಿತ್ತೂರ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ತಾಲೂಕಿನಾದ್ಯಂತ ಕಿತ್ತೂರು ತಾಲೂಕಿನಾದ್ಯಂತ ಶಾಲೆ ಪ್ರಾರಂಭೋತ್ಸವಕ್ಕೆ ಚೇತರಿಕೆ ನೀಡಲು “ಕಲಿಕಾ ಚೇತರಿಕೆ ವರ್ಷ” ಕಾರ್ಯಕ್ರಮ ಹಾಗೂ ಅಧಿಕಾರಿಗಳ ನಡಿಗೆ ಮಕ್ಕಳ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಜರಗಿತು.
ಮಹಾಮಾರಿ ಕೋವಿಡ-19 ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ನಿರೀಕ್ಷೀತ ಪ್ರಮಾಣದಲ್ಲಿ ಕಲಿಕೆಯಾಗದ ಹಿನ್ನಲೆಯಲ್ಲಿ ಈ ವರ್ಷ ಕಲಿಕಾ ವರ್ಷವನ್ನು ಭರಿಸುವ ಉದ್ದೇಶದಿಂದ ಘನ ಸರಕಾರ 2022-23 ನೇ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ” ವರ್ಷ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಮೇ 16 ರಿಂದ ಪ್ರಾರಂಭಿಸಿದೆ. ಆದ್ದರಿಂದ ಇಂದು ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ ಬಳಿಗಾರ ಹಾಗೂ ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ವಿಷಯ ಪರಿವೀಕ್ಷಕಿ ಆರ.ಎಸ್ ಉಪ್ಪಾರ, ಬಿ.ಆರ್.ಪಿ. ಅಶೋಕ ಪಾಗಾದ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ವಿವಿಧ ಶಾಲೆಗಳಲ್ಲಿ ಮಿಂಚಿನ ಸಂಚಾರ ಮಾಡುವ ಮೂಲಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು
ಮೊದಲಿಗೆ ಎಂ.ಕೆ.ಹುಬ್ಬಳ್ಳಿಯ ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಮಕ್ಕಳಿಗೆ ಹೂವು, ಹಣ್ಣು ಹಾಗೂ ಸಿಹಿ ಹಂಚುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡು ಎಲ್ಲ ಅಧಿಕಾರಿಗಳು ತಾವು ಅಧಿಕಾರಿಗಳು ಎಂಬ ಹಮ್ಮು ಮತ್ತು ಬಿಮ್ಮು ತೊರೆದು ಶಾಲಾ ಮಕ್ಕಳೊಂದಿಗೆ ಬೆರೆತು ಅವರು ಆಡುವ ಮುದ್ದು ಮಾತುಗಳನ್ನ ಆಲಿಸಿ ಭರವಸೆಯ ಮಾತುಗಳಿಂದ ಹುರುದುಂಬಿಸಿ ನಂತರ ಶಾಲೆಯ ಶೈಕ್ಷಣಿಕ ಮಾಹಿತಿಗಳನ್ನು ಪರಿಶೀಲಿಸಿದರು.
ಹಿರಿಯ ಪ್ರಾಥಮಿಕ ಶಾಲೆ ದಾಸ್ತಿಕೊಪ್ಪದಲ್ಲಿ ಊರ ನಾಗರಿಕರು ಹಾಗೂ ಶಾಲೆಯ ಸಿಬ್ಬಂದಿ ಸೇರಿ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕರಡಿ ಮಜಲು, ಡೊಳ್ಳು ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ಸದ್ದು ಸಮೇತ ಮದುವಣಗಿತ್ತಿಯಂತೆ ಶೃಂಗಾರಗೊಂಡ ಚಕ್ಕಡಿಯಲ್ಲಿ ಶಾಲಾಪ್ರಾರಂಭೋತ್ಸವದ ಘೋಷಣೆಗಳನ್ನು ಕೂಗುತ್ತಾ ಶಾಲೆಗೆ ಬರಮಾಡಿಕೊಳ್ಳುವ ಕರಪತ್ರಗಳನ್ನು ವಿತರಿಸುತ್ತ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು.
ಇನ್ನೂ ಕಾದರವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮದ ಗಣ್ಯರು ಮತ್ತು ಜನಪ್ರತಿನಿಧಿಗಳು ಮಕ್ಕಳಿಗೆ ಉಚಿತ ನೊಟ್ ಪುಸ್ತಕ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಟಿ. ಬಳಿಗಾರ ಅವರ ಈ ವಿನೂತನ ಕಾರ್ಯಕ್ರಮಗಳು ಶೈಕ್ಷಣಿಕ ವಲಯದಲ್ಲಿ ಹೊಸ ಭರವಸೆಯನ್ನು ತುಂಬುದವುದರ ಜೊತೆಗೆ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಈ ವೇಳೆ ಹೊಸ ಕಾದರವಳ್ಳಿ ಪ್ರೌಢಶಾಲೆಯ ಹಾಗೂ ದಾಸ್ತಿಕೊಪ್ಪ ಮತ್ತು ಎಂ. ಕೆ. ಹುಬ್ಬಳ್ಳಿ ಹೆಣ್ಣು ಮತ್ತು ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಊರಿನ ನಾಗರಿಕರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸಿ.ಆರ್.ಪಿ. ವಿನೋದ ಪಾಟೀಲ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡಿದ್ದರು