ರಾಜ್ಯ ರಾಜಕಾರಣದಲ್ಲಿ ಕಿತ್ತೂರು ‘ಧಣಿ’ ಎಂದೇ ಖ್ಯಾತಿ ಹೊಂದಿದ ಮಾಜಿ ಸಚಿವ ಡಿ.ಬಿ.ಇನಾಮದಾರ ಪಂಚಭೂತಗಳಲ್ಲಿ ಲೀನವಾದರು. ಅವರ ತೋಟದಲ್ಲಿ ಲಿಂಗಾಯತ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅದಕ್ಕೂ ಮುನ್ನ ಬಿ.ಡಿ.ಇನಾಮದಾರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅವರ ಪಾರ್ಥಿವ ಶರೀರವನ್ನು ಸುಮಾರು ಐದು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಸಂಜಯ ಪಾಟೀಲ ಮುಂತಾದವರು ನೆನ್ನೆಯಷ್ಟೇ ಅವರ ಸ್ವಗೃಹಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.
ಇಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಅವರ ಅಸಂಖ್ಯಾತ ಅಭಿಮಾನಿಗಳು ಕಾರ್ಯಕರ್ತರು ಅಚ್ಚುಕಟ್ಟಾಗಿ ಅಂತಿಮ ದರ್ಶನಕ್ಕೆ ಸಜ್ಜು ಮಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ಮಾಜಿ ಸಂಸದ ಪ್ರಭಾಕರ ಕೋರೆ, ಶಾಸಕರಾದ ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ, ಮಹಾಂತೇಶ ದೊಡ್ಡಗೌಡರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಕಾಶೀಮನವರ ಮಾಜಿ ಶಾಸಕರು ಗಣ್ಯ ಮಾನ್ಯರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡು ಗೌರವ ಸೂಚಿಸಿದರು.
ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ:
ಜಿಲ್ಲಾಡಳಿತ ಪರವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಬಾರಿ ತುಪಾಕಿ ಹಾರಿಸಿ ಪೋಲಿಸ್ ಇಲಾಖೆಯಿಂದ ಗೌರವ ಸೂಚಿಸಲಾಯಿತು. ಮಧ್ಯಾಹ್ನ 2.00 ಗಂಟೆಗೆ ಮೆರವಣಿಗೆ ಮೂಲಕ ಅವರ ತೋಟದಲ್ಲಿ ಲಿಂಗಾಯತ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಭಿಮಾನಿಗಳ ಆಕ್ರಂದನ:
ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ಶಾಸಕರಾಗಿ ಹಲವಾರು ಇಲಾಖೆಗಳ ಸಚಿವರಾಗಿ ಪ್ರಾಮಾಣಿಕ ಮತ್ತು ಶುದ್ದ ಹಸ್ತದ ರಾಜಕಾರಣ ಮಾಡಿದ ಡಿ.ಬಿ.ಇನಾಮದಾರ ಅವರಿಗೆ ಕ್ಷೇತ್ರದಲ್ಲಿ ಅವರದೇಯಾದ ವರ್ಚಸ್ಸು ಇದ್ದು ಅವರದೇ ವೋಟ್ ಬ್ಯಾಂಕ್ ಕಾಯ್ದಿರಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಅವರಿಲ್ಲ ಅನ್ನೋ ನೋವಿನಲ್ಲಿ ದುಃಖ ತಪ್ತರಾಗಿದ್ದು ಇಡೀ ನೇಗಿನಹಾಳ ಗ್ರಾಮ ನಿಜಕ್ಕೂ ಶೋಕ ಸಾಗರದಲ್ಲಿ ಮುಳುಗಿದ್ದು ಕಂಡು ಬಂದಿತು.
ಮಕ್ಕಳಾದ ವಿಕ್ರಮ ಹಾಗೂ ಬಸನಗೌಡ ಸೊಸೆಯಂದಿರಾದ ಲಕ್ಷ್ಮೀ ಹಾಗೂ ನೂಪುರ ಅವರು ದುಃಖ ತಪ್ತರಾಗಿದ್ದು ಅವರ ಇಡೀ ಕುಟುಂಬಕ್ಕೆ ಸೇರಿದ ಎಲ್ಲ ಗಣ್ಯಮಾನ್ಯರು ಸಾಂತ್ವನ ಹೇಳುವ ಮೂಲಕ ಸಮಾಧಾನ ಮತ್ತು ಧೈರ್ಯ ತುಂಬಿದರು.
ಅತ್ಯಂತ ಹಿರಿಯ ಚೇತನ ಡಿ.ಬಿ ಇನಾಮದಾರ ರಾಜ್ಯ ರಾಜಕಾರಣದಲ್ಲಿ ಈ ವರೆಗೆ ಮಾಡಿದ ಸೇವೆಯನ್ನು ಕುರಿತಾಗಿ ಹಲವಾರು ಗಣ್ಯರು ಅವರಿಗೆ ಸಂತಾಪ ಸೂಚಿಸಿದರು. ಧಣಿ ಇನ್ನಿಲ್ಲ ಅನ್ನೋ ಮಾತು ಅರಗಿಸಿಕೊಳ್ಳದ ಅಭಿಮಾನಿಗಳು ಅವರ ಕಾರ್ಯ ವೈಖರಿಯನ್ನು ನೆನೆದು ಭಾವುಕರಾದರು.
ಕಿತ್ತೂರು ಕ್ಷೇತ್ರದ ಸಹಸ್ರಾರು ಜನತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.