ಹಿರೇಬಾಗೇವಾಡಿಯಲ್ಲಿ ರಾಶಿ ರಾಶಿ ಕಸ ! ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು.

ಸರಕಾರಿ ಶಾಲಾ ಕಂಪೌಂಡ್ ಬಳಿ ಕಸದ ರಾಶಿ

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಛತೆ ಮಾಯವಾಗಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬುನಾರುತ್ತಿದೆ

ಕೇಂದ್ರ ಸರಕಾರ ಸ್ವಚ್ಛ ಭಾರತ್‌ ಯೋಜನೆ ಜಾರಿ ಮಾಡಿದೆಯಾದರೂ ಇಲ್ಲಿನ ಪಿಡಿಒ, ಸಿಬ್ಬಂದಿ ತಾತ್ಸರ ಮನೋಭಾವದಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಸಮೀಪದ ಅಂಗಡಿ ಮನೆಗಳಿಂದ ಹೊರ ಬೀಳುವ ತ್ಯಾಜ್ಯ ಮುಖ್ಯ ರಸ್ತೆ ಅಕ್ಕ ಪಕ್ಕ ಹಾಗೂ ಗಟಾರಗಳಲ್ಲಿ ಹಾಕುವುದು ಸಾಮಾನ್ಯ.

ಹಾಕಿರುವ ಕಸದಲ್ಲಿ ಆಹಾರ ಹೆಕ್ಕಲು ಹಂದಿ, ನಾಯಿಗಳು ಬಂದು ಇರುವ ಕಸವೆನ್ನಲ್ಲಾ ಚರಂಡಿಗೆ ರಸ್ತೆಗೆ ಚೆಲ್ಲುತ್ತವೆ. ಇದರಿಂದ ವಾಹನ ಸಂಚಾರಕ್ಕೆ ಫುಟ್ಪಾತ್‌ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡವಾಗಿ ತಿಪ್ಪೆ ಬೆಳೆದಿದೆ. ಸರಕಾರ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿದೆಯಾದರೂ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಸ್ವಚ್ಛತೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.

ಪೋಲಿಸ್ ಠಾಣೆಯ ಮುಂದಿನ ಕಲಾರಕೊಪ್ಪ ರಸ್ತೆ ಬದಿಯ ಕಸದ ರಾಶಿ

ಹಿರೇಬಾಗೇವಾಡಿ ಪೋಲಿಸ್ ಠಾಣೆಯ ಮುಂದಿನ ಕಲಾರಕೊಪ್ಪ ರಸ್ತೆಯ ಗಟಾರಗಳಲ್ಲಿ ಮುಖ್ಯ ರಸ್ತೆ ಅಕ್ಕ ಪಕ್ಕ ,ನೆಮ್ಮದಿ ಕೇಂದ್ರ , ಖಾಸಗಿ ಹಾಗೂ ಸರಕಾರಿ ಆಸ್ಪತ್ರೆ ಬಳಿ ಸೇರಿದಂತೆ ಸಂತೆ ಓಣಿ ಹಾಗೂ ಬಸ್ ನಿಲ್ದಾಣಗಳಲ್ಲಿ ಸುಮಾರು ದಿನಗಳಿಂದ ಸುರಿದ ಕಸ ತಿಪ್ಪೆಗುಂಡಿಯಾಗಿ ಬೆಳೆದಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಚಕಾರ ಎತ್ತದಿರುವುದನ್ನು ನೋಡಿದರೆ ಅವರ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.

ಪಂಚಾಯಿತಿ ಕೇಂದ್ರದಲ್ಲಿ 18000 ಜನ ಸಂಖ್ಯೆ ವಾಸವಾಗಿದ್ದು, ಇಲ್ಲಿ ಜಾನುವಾರು ಕುರಿ, ಮೇಕೆ, ಕೋಳಿ, ತರಕಾರಿ, ದಿನಸಿ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಮಂಗಳವಾರ ಸಂತೆ ನಡೆಯುತ್ತದೆ. ಸಂತೆ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ನಡೆಯುವುದರಿಂದ ಪಂಚಾಯಿತಿಗೆ ಸಂತೆಯಿಂದ ಗೇಟ್‌ ಕರ ವಸೂಲಿಯಾಗಿ ಹೆಚ್ಚು ತೆರಿಗೆ ಬರುವ ಕೇಂದ್ರವಾಗಿದೆ. ಬರುವ ಆದಾಯ ಪಡೆಯುವ ಅಧಿಕಾರಿಗಳು ಸ್ವಚ್ಚತೆ ಮಾತ್ರ ನಮಗೆ ಸಂಬಂಧವಿಲ್ಲ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ.

ಇದೀಗ ಸುರಿದ ಅಕಾಲಿಕ ಮಳೆಯಿಂದಾಗಿ ತ್ಯಾಜ್ಯ ಕೊಳೆತು ಹಾದು ಹೋಗುವವರಿಗೆ ಗಬ್ಬು ದುರ್ವಾಸನೆ ಸಾಮಾನ್ಯವಾಗಿದೆ. ಸಾರ್ವಜನಿಕರು ಗಬ್ಬು ವಾಸನೆಯಲ್ಲೇ ಕಾಲ ಕಳೆಯಬೇಕಾ ಎಂಬ ಪ್ರಶ್ನೆಯೂ ಎದುರಾಗಿದೆ.

ಈಗಾಗಲೇ ಹವಾಮಾನ ವೈಪರೀತ್ಯದಿಂದಾಗಿ ಸಾರ್ವಜನಿಕರಿಗೆ ಕೆಮ್ಮು ನೆಗಡಿ ಮೈಕೈ ನೋವುಗಳಂಥ ಕಾಯಿಲೆಗಳು ಕಾಡುತ್ತಿವೆ. ಅಂಥದರಲ್ಲಿ ಈ ಕಸದ ಕೊಳೆಯಿಂದ ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತ ಸಾಂಕ್ರಾಮಿಕ ಕಾಯಿಲೆಗಳನ್ನೂ ತಳ್ಳಿ ಹಾಕುವಂತಿಲ್ಲ.ಆದಷ್ಟು ಬೇಗ ಸಂಬಂಧಿತರು ಇದಕ್ಕೊಂದು ಮಾರ್ಗೋಪಾಯ ಕಂಡುಕೊಳ್ಳಬೇಕಿದೆ.

ಸ್ವಚ್ಛತೆ ಬಗ್ಗೆ ಜಿಪಂ ಸಿಇಒ ಜಿಲ್ಲಾಧಿಕಾರಿಗಳು ತಿಂಗಳಲ್ಲಿ ನಾಲ್ಕೈದು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ನಡೆಸುವ ಸಭೆಗೆ ಬೆಲೆ ಇಲ್ಲದಂತಾಗಿದೆ. ಇಲ್ಲಿನ ಪಿಡಿಒ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕರ ವಸೂಲಿ ಮತ್ತು ಸರಕಾರ ಅಭಿವೃದ್ಧಿಗೆ ಬಿಡುಗಡೆ ಮಾಡುವ ಹಣ ಲೆಕ್ಕ ತೋರಿಸಿ ಖಾತೆಯಿಂದ ಖಾಲಿ ಮಾಡಲು ಮಾತ್ರ ಪಂಚಾಯಿತಿಗೆ ಬರುತ್ತಾರೆಂದು ಸಾರ್ವಜನಿಕರು ದೂರಿದ್ದಾರೆ.

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";