ಬೆಳಗಾವಿ (ಅ.21): ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗೆ ನಾನು ಅಧ್ಯಕ್ಷನಾದ ವೇಳೆ ಆಹ್ವಾನ ನೀಡಿಲ್ಲ ಎಂದು ಶಾಸಕರು ಹೇಳಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಹೇಳಿದರು.
ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ನಮ್ಮ ಸರಕಾರ ಇರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎನ್ನುವ ಉದ್ದೇಶ ನಂದು. ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕರೆದಾಗ ಆಯುಕ್ತರ ಮೂಲಕ ಶಾಸಕರ ಅನುಮತಿ ಪಡೆದೆ ಸಭೆ ಆಯೋಜನೆ ಮಾಡಲಾಗುತ್ತಿತ್ತು. ಅದಕ್ಕೆ ಶಾಸಕರು ಸಹ ಸಹಿ ಮಾಡಿದ್ದಾರೆ. ಅಲ್ಲದೆ ಸ್ವತಃ ನಾನೇ ಮೆಸೇಜ್ ಮಾಡಿ ಆಹ್ವಾನ ಮಾಡಿದ್ದೇನೆ ಮಾಡಿದ್ದೇನೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಬುಡಾ ಅಧ್ಯಕ್ಷನಾಗಿದ್ದ ವೇಳೆ ಸ್ಥಳೀಯ ಬಿಜೆಪಿ ಶಾಸಕರೇ ಸಹಕಾರ ನೀಡಲಿಲ್ಲ. ಬುಡಾ ಯೋಜನೆ ಅನುಷ್ಠಾನಗೊಳಿಸಲು ರೈತರು, ಸಾರ್ವಜನಿಕರು ಸಹಕಾರ ನೀಡಿದ್ದಾರೆ ಅವರಿಗೆ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದರು.
ನಾನು ಬಿಜೆಪಿ, ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಶ್ಚಾಪುರಕ್ಕೆ ಬಂದ ವೇಳೆಯಲ್ಲಿ ನಾನು ಬಿಜೆಪಿ ಸೇರ್ಪಡೆಗೊಂಡು ಪಕ್ಷ ಸಂಘಟನೆ ಮಾಡಿದೆ.
ಪಕ್ಷ ಸಂಘಟನೆ, ಸಂಘ ಪರಿವಾರದ ಮೂಲದವನಾದ ನನಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷನಾಗಿ ನೇಮಕ ಮಾಡಿದರು.
ಒಂದೂವರೆ ವರ್ಷದ ನನ್ನ ಅವಧಿಯಲ್ಲಿ ಕೊರೊನಾದಲ್ಲಿ ಬೆಂಗಳೂರಿಗೆ ಹೋಗಿ ನನೆಗುದಿಗೆ ಬಿದ್ದ ಬುಡಾ ಯೋಜನೆಗಳನ್ನು ಸರಕಾರದಿಂದ ಅನುಷ್ಠಾನ ಮಾಡಿಕೊಂಡು ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಕನಸು ಎಲ್ಲರಿಗೂ ಸೂರು ನೀಡುವುದಕ್ಕೆ ಸಹಕಾರ ನೀಡಿದ ತೃಪ್ತಿ ನನಗೆ ಇದೆ. ಹೊಸ ಬುಡಾ ಅಧ್ಯಕ್ಷರು ಅದನ್ನು ಸಾಕಾರಗೊಳಿಸಲಿ ಎಂದು ಶುಭ ಹಾರೈಸಿದರು.
ಬೆಳಗಾವಿ ನಗರದಲ್ಲಿ ಹಾಕಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ 8 ಎಕರೆಯಲ್ಲಿ ನಿರ್ಮಾಣ ಮಾಡಲು ಸರಕಾರದಿಂದ ಮಂಜೂರು ಮಾಡಿಸಿಕೊಂಡು ಬಂದೆ. ಆ ಸಂದರ್ಭದಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದ್ದರು ಎಂದರು.