ಅಧಿವೇಶನ ಸಿದ್ಧತೆ ಪರಿಶೀಲಿಸಿದ ಡಿಪಿಎಆರ್ ಕಾರ್ಯದರ್ಶಿ ಪಿ.ಹೇಮಲತಾ

ಬೆಳಗಾವಿ: ವಿಧಾನಮಂಡಳದ ಚಳಿಗಾಲ ಅಧಿವೇಶನ ಇದೇ ಡಿಸೆಂಬರ್13 ರಿಂದ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ಅವರು ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಬುಧವಾರ (ಡಿ.1) ಭೇಟಿ ನೀಡಿದ ಅವರು ಎಲ್ಲ ಸಿದ್ಧತೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ವಿಧಾನಸಭೆ, ಸಭಾಧ್ಯಕ್ಷರ ಕೊಠಡಿ, ಬ್ಯಾಂಕ್ವೆಟ್ ಸಭಾಂಗಣ, ಶಾಸಕರ ಹಾಗೂ ವಿರೋಧ ಪಕ್ಷದ ಮೊಗಸಾಲೆ, ಸೆಂಟ್ರಲ್ ಹಾಲ್, ಊಟದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯನ್ನು, ಕಾರ್ಯದರ್ಶಿಗಳ ಕ್ಯುಬಿಕಲ್ಸ್ ಗಳನ್ನು ಪರಿಶೀಲಿಸಿದರು.
ಊಟದ ಸಮಯದಲ್ಲಿ ದಟ್ಟಣೆ ನಿಯಂತ್ರಿಸಲು ಊಟದ ಸಮಯವನ್ನು ಹೆಚ್ಚಿಗೆ ಕಲ್ಪಿಸಬೇಕು. ಆದಷ್ಟು ಬೇಗನೆ ಊಟದ ವ್ಯವಸ್ಥೆ ಆರಂಭಿಸಿದರೆ ಅನುಕೂಲವಾಗಲಿದೆ. ಈ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು.

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಆರ್.ಟಿ.ಪಿ.ಸಿ.ಆರ್. ಕಡ್ಡಾಯಗೊಳಿಸಿದಾಗ ಜನಪ್ರತಿನಿಧಿಗಳಿಗೆ ಪರೀಕ್ಷೆಗೆ ಅನುಕೂಲ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಮುಂಚಿತವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಸದ್ಯಕ್ಕೆ ಸುವರ್ಣ ವಿಧಾನಸೌಧದಲ್ಲಿ ಕಾರ್ಯಾರಂಭಿಸಿರುವ ಕಚೇರಿಗಳಿಗೆ ಅಧಿವೇಶನ ಮುಕ್ತಾಯದವರೆಗೆ ನೆಲಮಹಡಿಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿರುವುದನ್ನು ಕೂಡ ಕಾರ್ಯದರ್ಶಿ ಹೇಮಲತಾ ಅವರು ಪರಿಶೀಲಿಸಿದರು.

ಪ್ರತಿವರ್ಷದಂತೆ ಸಚಿವರು, ಶಾಸಕರುಗಳಿಗೆ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು.
ಬಫೆಟ್ ಹಾಲ್ ನಲ್ಲಿ ಸಚಿವಾಲಯದ ಅಧಿಕಾರಿಗಳು/ಸಿಬ್ಬಂದಿ, ಮಾರ್ಷಲ್ ಗಳು ಹಾಗೂ ಮಾಧ್ಯಮದವರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ವಿವರಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ಅವರು, ಊಟೋಪಹಾರ, ಆಸನ‌ ವ್ಯವಸ್ಥೆ, ಸ್ವಚ್ಛತೆ, ಇಂಟರ್ನೆಟ್ ಸೌಲಭ್ಯ ಸೇರಿದಂತೆ ಪ್ರತಿಯೊಂದು ಸಿದ್ಧತೆ ಕುರಿತು ವಿವರಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಧಿವೇಶನದ ವಿಶೇಷಾಧಿಕಾರಿ ಡಾ.ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಕ್ಯಾಳ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನರನಾಥ್ ರೆಡ್ಡಿ, ಅಪರ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತರಾದ ಶೋಭಾ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ, ವಾರ್ತಾಧಿಕಾರಿ ಗುರುನಾಥ ಕಡಬೂರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಬಾಲಕೃಷ್ಣ ತುಕ್ಕಾರ ಸೇರಿದಂತೆ ಸಮಿತಿಯ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";