ಬೈಲೂರು ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ: ಸೂಕ್ತ ಭದ್ರತೆಗೆ ಭಕ್ತರ ಆಗ್ರಹ

ಚನ್ನಮ್ಮನ ಕಿತ್ತೂರು: ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ಮಹಾ ಸ್ವಾಮಿಗಳಿಗೆ ಮೇಲಿಂದ ಮೇಲೆ ಜೀವ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳಿಗೆಗೆ ಸೂಕ್ತ ಬಿಗಿ ಭದ್ರತೆ ಒದಗಿಸಬೇಕು ಹಾಗೂ ದುಷ್ಕರ್ಮಿಗಳನ್ನು ಪತ್ತೆಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಿತ್ತೂರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಅರಳಿಕಟ್ಟಿ ಸರ್ಕಲ್ಲಿನಿಂದ ಗುರವಾರ ಪೇಠೆ, ರಾಣಿ ಚನ್ನಮ್ಮನ ಸರ್ಕಲ್ಲ ಮೂಲಕ ಮೌನ ಮೆರವಣೆಗೆಯೊಂದಿಗೆ ತೆರಳಿ ಸಾಮೂಹಿಕವಾಗಿ ಕಿತ್ತೂರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಭಕ್ತರು, ಸ್ವಾಮೀಜಿಯ ಅಭಿಮಾನಿಗಳು ಶ್ರೀಗಳಿಗೆ 28 ದಿನಗಳ ಹಿಂದೆ ಜೀವಬೇದರಿಕೆ ಪತ್ರ ಬಂದಿದೆ. ಸರ್ಕಾರ ಈ ಬಗ್ಗೆ ಶೀಘ್ರಗತಿಯಲ್ಲಿ ತನಿಖೆಯನ್ನು ನಡೆಸಿ, ತಪ್ಪಿತಸ್ಥ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೌನ ಮೆರವಣೆಗೆಯಲ್ಲಿ ಪಾಲ್ಗೊಂಡ ಭಕ್ತರು

ಈ ವೇಳೆ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ ಬುದ್ದ, ಬಸವ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳನ್ನು ಜನರಲ್ಲಿ ಬಿತ್ತರಿಸುವ ಮೂಲಕ ಸಮಾಜದಲ್ಲಿಯ ಹರಡಿರುವ ಮೂಢನಂಬಿಕೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಿ ವಚನ ಸಾಹಿತ್ಯದೊಂದಿಗೆ ಸಮಾಜದಲ್ಲಿ ಸಮಾನತೆ ಮೂಡಿಸುತ್ತಿರುವ ನಿಜಗುಣಾನಂದ ಮಹಾಸ್ವಾಮಿಗಳ ವಿರುದ್ಧ ಈ ರೀತಿಯ ಜೀವ ಬೆದರಿಕೆ ಸಂಸ್ಕೃತಿ ಹೇಯ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಕಿತ್ತೂರು ತಾಲೂಕ ಘಟಕದ ಮುಖಂಡ ಚಂದ್ರಗೌಡ ಪಾಟೀಲ ಮಾತನಾಡಿ ಸಮಾಜ ಸುಧಾರಕರ ಮೇಲೆ ಮೇಲಿಂದ ಮೇಲೆ ಇಂತಹ ಬೆದರಿಕೆ ಪತ್ರಗಳು ಬರುತ್ತಿದ್ದು ಇವುಗಳಿಗೆ ನಾವುಗಳು ಆತಂಕ ಪಡಬೇಕಾಗಿಲ್ಲ. ಚಿಂತಕರನ್ನು ನಾಶ ಮಾಡಲು ಹೊರಟ ಸಂಪ್ರದಾಯಗಳ ವಿರುದ್ಧ ಇಂತಹ ಅನೇಕ ಚಿಂತಕರು ಸಮಾಜ ಸುಧಾರಕರು ಹುಟ್ಟಿಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಸೇರಿದ ಬೈಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಬಸವ ಅನುಯಾಯಿಗಳು ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳ ವಿರುದ್ಧ ಕಿಡಿ ಕಾರಿದರು.

ಈ ವೇಳೆ ಗ್ರಾ ಪಂ ಅಧ್ಯಕ್ಷ ಬಸವರಾಜ ಲದ್ದಿಮಠ, ರಾಣಿ ಶುಗರ್ ನಿರ್ದೇಶಕ ಶಂಕರಗೌಡ ಪಾಟೀಲ, ಶಿವಾನಂದ ಹಣಮಸಾಗರ, ನಾಗೇಶ ಬೆಣ್ಣಿ, ಹಣಮಂತ ಗುಂಡಗಾವಿ, ಗುಲಾಬ ಬಾಳೇಕುಂದ್ರಿ, ಚಂದ್ರು ಮಾಳಗಿ, ಸಂತೋಷ ಸಂಬಣ್ಣವರ, ಸಂಜೀವ ಲೋಕಾಪೂರ, ಕಲ್ಲಪ್ಪ ಕಟಗಿ, ರವೀಂದ್ರ ಅಗ್ನಿಹೋತ್ರಿ, ರುದ್ರಪ್ಪ ಇಟಗಿ, ನಿಜಗುಣ ಬಾಗೇವಾಡಿ, ರಾಜು ಜೋಡಂಗಿ, ರಾಚಯ್ಯ ಕೆಂಜಡಿಮಠ, ಸಂಗಮೇಶ ಹಿರೇಮಠ, ಶಿವಾನಂದ ಕಾಪೋಲಿ, ವಿಜಯ ಸಾಣಿಕೊಪ್ಪ, ರವಿಗೌಡ ಪಾಟೀಲ, ಶಿವಾನಂದ ಮೇಟ್ಯಾಲ ಸೇರಿದಂತೆ ಇನ್ನೂ ಅನೇಕರು ಇದ್ದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";