Saturday, July 27, 2024

ಕಾರ್ತಿಕ ಕತ್ತಲೆಯಲ್ಲಿ ಆಕಾಶದೀಪವಾಗಿ ಬಂದವರು ಬಸವಣ್ಣನವರು; ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿ ಅಭಿಮತ

ಸುದ್ದಿ ಸದ್ದು ನ್ಯೂಸ್‌

ಚನ್ನಮ್ಮನ ಕಿತ್ತೂರು: ಬಸವಣ್ಣನವರು ಕಾರ್ತಿಕ ಕತ್ತಲೆಯಲ್ಲಿ ಆಕಾಶದೀಪವಾಗಿ ಈ ನಾಡಿಗೆ ಬಂದವರು. 12 ನೇ ಶತಮಾನದ ಪೂರ್ವದಲ್ಲಿ ಜಾತಿ ಮತ ಪಂಥಗಳಿಂದ ಮನುಷ್ಯ ಮನುಷ್ಯರಲ್ಲಿ ಬೇದಭಾವದ ಜೊತೆಗೆ ದೊಡ್ಡವರು ಸಣ್ಣವರು ಎಂಬ ಮನೋಭಾವ ಇತ್ತು. ವಿಶ್ವಗುರು ಬಸವಣ್ಣನವರು ನಮಗೆ ಜಾತಿ ಮತ ಪಂಥವನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಮೂಲಕ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟರು ಎಂದು ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮಂಗಳವಾರ ನಡೆದ ಕೂಡಲಸಂಗಮದಲ್ಲಿ ಜನೆವರಿ 12 ರಿಂದ 14 ರ ವರಗೆ ನಡೆಯುವ 37 ನೇ ಶರಣ ಮೇಳದ ಪ್ರಚಾರಸಭೆಯ ಸಾನಿದ್ಯ ವಹಿಸಿ ಮಾತನಾಡಿದರು.

ಅನುಭವ ಮಂಟಪದ ಮುಖಾಂತರ ಇಡಿ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಟ್ಟವರು ಬಸವಣ್ಣವರು. ಅವರು ಮಾಡಿದ ಕಾಯಕ ದಾಸೋಹ ತತ್ವಗಳನ್ನು ಅವರ ವಾರಸುದಾರರಾದ ನಾವುಗಳು ಉಳಿಸಿ ಬೆಳಸಬೇಕಾಗಿದೆ. ಅತಿ ದೊಡ್ಡ ಸಮಾಜವಾದ ಲಿಂಗಾಯತರಲ್ಲಿ ಒಗ್ಗಟ್ಟು ಇಲ್ಲದ ಕಾರಣ ಸಮಾಜಕ್ಕೆ ಕೂಡಲು ಸ್ಥಳ ಇರಲಿಲ್ಲ ಇದನ್ನು ಅರಿತು 36 ವರ್ಷಗಳ ಹಿಂದೆ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ಹಾಗೂ ಮಹಾದೇವಿ ಮಾತೆ ಅವರು ಶರಣ ಮೇಳ ಎಂಬ ಅದ್ಬುತ ಕಲ್ಪನೆಯನ್ನು ತಂದು ಕೊಡುವ ಮೂಲಕ ಮತ್ತೆ 12 ನೇ ಶತಮಾನದ ಅನುಭವ ಮಂಟಪದ ಕಲ್ಪನೆಯನ್ನು 21 ನೇ ಶತಮಾನದ ಶರಣರಿಗೆ ತಂದು ಕೊಟ್ಟರು ಎಂದರು.

ದಿವ್ಯ ಸಾನಿಧ್ಯ ವಹಿಸಿ ಪರಮ ಪೂಜ್ಯ ಡಾ. ಮಾತೆ ಗಂಗಾದೇವಿ ಮಾತನಾಡಿ ಶರಣ ಮೇಳ ಒಂದು ಜಾತಿಗ ಮತ ಪಂಥಕ್ಕೆ ಸಂಭಂದಪಟ್ಟದ್ದಲ್ಲ 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಜಾತ್ಯಾತೀತ ಧರ್ಮ ಸ್ಥಾಪನೆ ಮಾಡಿದರು ಮೂಲಕ ಈಗ ನಡೆಯು ಶರಣ ಮೇಳಕ್ಕೆ ಜಾತಿ ಮತ ಪಂಥ ಪಕ್ಷವನ್ನು ತೊರೆದು ಅಂಗದ ಮೇಲೆ ಲಿಂಗ ಕಟ್ಟಿಕೊಂಡ ಎಲ್ಲಾ ಶರಣ ಶರಣೆಯರು ಸೇರುತ್ತಾರೆ. ಬಸವಣ್ಣನವರ ವಚನ  ಸಾಹಿತ್ಯದಂತೆ ಯಾವ ರೀತಿ ಕಲ್ಲೊಳಗೆ ಹೊನ್ನು, ಮರದೊಳಗೆ ಅಗ್ನಿ ಮತ್ತು ಹಾಲೊಳಗೆ ತುಪ್ಪವುಂಟೊ ಹಾಗೆಯೇ ನಮ್ಮೆಲ್ಲರ  ಅಂತರ್ಯಾಮಿಯಲ್ಲಿ ಶಿವನಿರುತ್ತಾನೆ. ಗುರು ಬಸವಣ್ಣನವರು ಈ ಲೋಕ ಕಂಡ ವಿಸ್ಮಯ, ಕಾಯಕ ಸೂತ್ರದ ತಾಯಿ ಬೇರು, ದೀನ ದಲಿತರ ಜೀವನದುಸಿರಾಗಿ ಭಂಡಾಯದ ಭಾವುಟವನೆತ್ತಿದ ಪ್ರಥಮ ಬಂಡಾಯಗಾರ ವಿಶ್ವಗುರು ಬಸವಣ್ಣನವರು.  ಅಜ್ಞಾನದ ಕತ್ತಲೆಯಿಂದ ನಮ್ಮಲ್ಲಿರುವ ಶಿವತತ್ವ ಅರಿವಿಗೆ ಬರುವುದಿಲ್ಲ. ಆದರೆ ಸಮರ್ಥ ಗುರು ಸಿಕ್ಕರೆ, ನಮ್ಮ ನಿಜ ಸ್ವರೂಪ ಶಿವಸ್ವರೂಪ ಎಂಬುವುದನ್ನು ತೋರಿಸಿಕೊಡಬಲ್ಲನು. ಶಿವಜ್ಞಾನವಿರುವ ಶರಣರಿಗೆ ಒಳಗೂ ಹೊರಗೂ ಎತ್ತೆತ್ತ ನೋಡಿದಡೆಯೂ ಶಿವನೇ ಕಾಣುತ್ತಾನೆ ಎಂದು ಹೇಳಿದ ಅವರು 2024 ಜನೇವರಿ 12 ರಿಂದ 14 ರ ವರೆಗೆ ಕೂಡಲ ಸಂಗಮದಲ್ಲಿ ನಡೆಯುವ ಮಹತ್ವಪೂರ್ಣವಾದ  ಐತಿಹಾಸಿಕ ಚಾರಿತ್ರಿಕವಾದ 12 ನೇ ಶತಮಾನದ ಶರಣರ ಸತ್ಸಂಕಲ್ಪದಂತೆ ನಡೆಯುವ 37 ನೇ ಶರಣ ಮೇಳ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕು ಎಂದು ಮನವಿ ಮಾಡಿದರು.

 ಕಸಾಪ ತಾಲೂಕಾಧ್ಯಕ್ಷ ಎಸ್. ಬಿ. ದಳವಾಯಿ ಅವರು ಬಸವ ಧ್ವಜಾರೋಹಣ ನೆರವೇರಿಸಿದರು

ಕನ್ನಡ  ಸಾಹಿತ್ಯ ಪರಿಷತ್ತ ತಾಲೂಕಾ ಘಟಕದ ಅಧ್ಯಕ್ಷ ಎಸ್‌. ಬಿ. ದಳವಾಯಿ ಅವರು ಬಸವ  ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಅಳ್ನಾವರ ನಿರೂಪಿಸಿದರು. ಮಡಿವಾಳೆಪ್ಪ ಕೋಟಿ ಸ್ವಾಗತಿಸಿದರು.ಮಡಿವಾಳಪ್ಪ ಅಸುಂಡಿ ವಂದಿಸಿದರು.

ಈ ಸಂದರ್ಭದಲ್ಲಿ 37 ನೇ ಶರಣ ಮೇಳದ ಪ್ರಚಾರ ಸಲಕರಣೆಗಳನ್ನು ಉದ್ಘಾಟನೆ ಮಾಡಲಾಯಿತು.

ಈ ವೇಳೆ ಪತ್ರಕರ್ತರಾದ ಸುರೇಶ ಮುರಡಿಮಠ, ವಿರೇಶ ಹಿರೇಮಠ, ವಿಠ್ಠಲ ಮಿರಜಕರ, ಪ್ರವೀಣ ಗಿರಿ, ಮಡಿವಾಳಪ್ಪ ಕೋರಿಶೆಟ್ಟಿ, ಬಸವರಾಜ ಕಡೆಮನಿ, ಚಂದ್ರಗೌಡ ಪಾಟೀಲ ಸೇರಿದಂತೆ ಕಿತ್ತೂರು ತಾಲೂಕಾ ಬಸವ ದಳದ ಶರಣ ಶರಣೆಯರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!