Sunday, September 8, 2024

ಹಿರೇಬಾಗೇವಾಡಿ ಢಾಬಾಗಳಲ್ಲಿ ಅಕ್ರಮ ಸಾರಾಯಿ ಮಾರಾಟ: ಕ್ಯಾರೇ ಎನ್ನದ ಪೊಲೀಸರು, ಅಬಕಾರಿ ಅಧಿಕಾರಿಗಳು

ಹಿರೇಬಾಗೆವಾಡಿ: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೂ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ದಂಧೆಗೆ ಕಡಿವಾಣ ಹಾಕದೇ ನಿದ್ರೆಗೆ ಜಾರಿರುವ ಹಾಗೆ ಕಾಣಿಸುತ್ತಿದೆ.

ಹಿರೇಬಾಗೇವಾಡಿ ಗ್ರಾಮದಲ್ಲಿ 3 ಮದ್ಯದ ಅಂಗಡಿಗಳು ಪರವಾನಗಿ ಪಡೆದು ಕೊಂಡಿವೆ.ಆದರೆ, ಪರವಾನಗಿ ಇಲ್ಲದೇ ಅನೇಕ ಢಾಬಾ, ಮನೆಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 4 ಅಂಟಿಕೊಂಡಿರುವ ಹಿರೇಬಾಗೇವಾಡಿಯ ಸಣ್ಣ ಪುಟ್ಟ ಢಾಬಾ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದೆ.ಅಲ್ಲದೇ ಸಮೀಪದ ಮುತ್ನಾಳ, ಬೆಂಡಿಗೇರಿ, ಕೆಕೆ ಕೊಪ್ಪ ಗ್ರಾಮಗಳು ಸೇರಿದಂತೆ ಇತರೆಡೆ ಅಕ್ರಮ ಸಾರಾಯಿ ಮಾರಾಟ ಆಗುತ್ತದೆ. ಆದರೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗದಿರುವುದು ಅಚ್ಚರಿ ಮೂಡಿಸಿದೆ.

ಮಾಂಸಾಹಾರಿ ಹೋಟೆಲ್‌ಗಳಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ದಂಧೆಯಿಂದ ಸರಕಾರದ ಬೊಕ್ಕಸಕ್ಕೆ ಬಾರಿ ನಷ್ಟವಾಗುತ್ತಿದೆ. ಅಕ್ರಮ ಸಾರಾಯಿ ಮಾರಾಟ ಮಾಡುವವರು, ಗೋವಾದಿಂದ ಕಡಿಮೆ ಬೆಲೆಯ ಮದ್ಯ ತರಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲ ಪ್ರಭಾವಿಗಳು ಎಮ್ ಎಸ್ ಐ ಎಲ್ ಮದ್ಯದಂಗಡಿ ಯಿಂದ ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.ಜೊತೆಗೆ ಸಮಯ ಪಾಲನೆ ಕೊಡ ಸರಿಯಾಗಿ ಮಾಡುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ 4 ಹಿರೇಬಾಗೇವಾಡಿ ಪೊಲೀಸ್ ಠಾಣಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ತಡೆದು ಅಬಕಾರಿ ಇಲಾಖೆಗೆ ಆಗುತ್ತಿರುವ ನಷ್ಟ ಸರಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಢಾಬಾ ಅಂಗಡಿಗಳಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಕ್ರಮ ಸಾರಾಯಿ ಮಾರಾಟ ದೊಂದಿಗೆ ಕಳಪೆ ಗುಣಮಟ್ಟದ ಮಾಂಸಾಹಾರ ಅಡುಗೆ ತಯಾರಿಸಿ ಊಟ ಕೊಡುವುದರಿಂದ ನಾನಾ ರೀತಿ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅಲ್ಲದೆ ಆರೋಗ್ಯ ಇಲಾಖೆ ಹಾಗೂ ಆಹಾರ ಇಲಾಖೆಯ ಪರವಾನಿಗೆ ಇಲ್ಲದ ಸಾಕಷ್ಟು ಅಂಗಡಿಗಳು ತೆಲೆ ಎತ್ತಿದರೂ ಕ್ಯಾರೇ ಅನ್ನದ ಅಧಿಕಾರಿಗಳು ಅವರ ಎಂಜಲು ಕಾಸಿಗೆ ಕೈಯೊಡ್ಡಿ ಸುಮ್ಮನಿದ್ದಾರೆ.

ಇದಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ಅಕ್ರಮ ವ್ಯವಹಾರದಿಂದ ದರೋಡೆ, ಗಲಭೆ, ಗಲಾಟೆ ಸೇರಿದಂತೆ
ಅನೇಕ ಅಹಿತಕರ ಘಟನೆ ನಡೆದರೂ ಪೊಲೀಸ ಅಧಿಕಾರಿಗಳು ಕಂಡು ಕಾಣದಂತೆ ಜಾನ ಮೌನ ವಹಿಸಿದ್ದಾರೆ. ಪೊಲೀಸರು, ಅಬಕಾರಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಆಡಳಿತ ಅಧಿಕಾರಿಗಳು ಪ್ರತಿ ತಿಂಗಳು ಮಾಮೂಲಿ ವಸೂಲಿ ಮಾಡುವುದರಿಂದ ಅಂಗಡಿಗಾರರ ಕೈಗೊಂಬೆ ಆಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

 

 

ಜಿಲ್ಲೆ

ರಾಜ್ಯ

error: Content is protected !!