Thursday, September 12, 2024

ಮೂರು ಕೋಟಿ ಅನುದಾನ,ಮೂರು ದಿನಗಳ ಅದ್ಧೂರಿ ಉತ್ಸವ: ಸಚಿವ ಸತೀಶ್ ಜಾರಕಿಹೊಳಿ

ಸುದ್ದಿ ಸದ್ದು ನ್ಯೂಸ್

ನ್ನಮ್ಮನ ಕಿತ್ತೂರು: “ಕಿತ್ತೂರು ಉತ್ಸವವನ್ನು ಈ ಬಾರಿ ಅ.23 ರಿಂದ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕನಿಷ್ಠ ಮೂರು ಕೋಟಿ ರೂಪಾಯಿ‌ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು” ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂರು ದಿನಗಳ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕನಿಷ್ಠ ಮೂರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಇದಕ್ಕಾಗಿ ಪ್ರಯತ್ನಿಸಲಾಗುವುದು. ಈಗಾಗಲೇ ಐದು ಕೋಟಿ ರೂಪಾಯಿ ನೀಡುವಂತೆ ಪ್ರಸ್ತಾವನೆ ಕಳಿಸಲಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಐದು ಕೋಟಿ ಖರ್ಚು: ಲೋಕೋಪಯೋಗಿ ಇಲಾಖೆಯಿಂದ ಮುಂದಿನ ಉತ್ಸವದ ವೇಳೆಗೆ ಕನಿಷ್ಠ ಐದು ಕೋಟಿ ರೂಪಾಯಿ ಅನುದಾನ‌ವನ್ನು ಕಿತ್ತೂರು ಪಟ್ಟಣದಲ್ಲಿ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು. ಈ ಹಣದಲ್ಲಿ ವೀರ ಹೋರಾಟಗಾರರ ಭಾವಚಿತ್ರಗಳ ಅನಾವರಣ, ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಲಾಗುವುದು ಎಂದು ಸತೀಶ್ ಜಾರಕಿಹೊಳಿ ಅವರು ಘೋಷಿಸಿದರು.

ಕಿತ್ತೂರು ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುವುದು. ದಸರಾ ಮಾದರಿಯಲ್ಲಿ ಉತ್ಸವ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಿತ್ತೂರು ಇತಿಹಾಸದ ಮೆರಗು ಸಾರುವಂತಹ ಛಾಯಾಚಿತ್ರಗಳ ಪ್ರದರ್ಶನವನ್ನು ಮುಂದಿನ‌ ವರ್ಷದಿಂದ ಆರಂಭಿಸಲಾಗುವುದು.

ಸ್ಥಳೀಯ ಕಲಾವಿದರಿಗೆ ಹಾಗೂ ನಿರೂಪಕರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

50 ಶೌಚಾಲಯಗಳ ನಿರ್ಮಾಣ- ಕೆರೆ ಅಭಿವೃದ್ಧಿ ಭರವಸೆ: ಕಿತ್ತೂರು ಪ್ರವಾಸಿ ತಾಣವಾಗಿರುವುದರಿಂದ ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಿ ಕೊಡಲಾಗುವುದು. ಇದಕ್ಕಾಗಿ ಪಟ್ಟಣ ಪಂಚಾಯತಿ ಸೂಕ್ತ ಜಾಗೆಯನ್ನು ಒದಗಿಸಬೇಕು. ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಐತಿಹಾಸಿಕ ಪ್ರಾಮುಖ್ಯತೆ ಇರುವ ರಣಗಟ್ಟಿ ಕೆರೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಅರ್ಹ ಹಾಗೂ ಪ್ರತಿಭಾವಂತ ಸ್ಥಳೀಯ ಕಲಾವಿದರಿಗೆ ಹಾಗೂ ನಿರೂಪಕರಿಗೆ ಮೊದಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.‌ ಉತ್ಸವಕ್ಕೆ ಇನ್ನಷ್ಟು ಮೆರುಗು ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸವನ್ನು ಮಾಡೋಣ ಎಂದು ಹೇಳಿದರು.

ಕಿತ್ತೂರು ಸಮಗ್ರ ಅಭಿವೃದ್ಧಿಗೆ ಯೋಜನೆ ಅಗತ್ಯ:

ಕಿತ್ತೂರು ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಖರ್ಚು ಮಾಡಲಾಗಿದೆ. ಆದಾಗ್ಯೂ ನಿರೀಕ್ಷಿತವಾದ ಸುಧಾರಣೆಯನ್ನು ಕಿತ್ತೂರು ಕಂಡಿಲ್ಲ. ಆದ್ದರಿಂದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದಿಷ್ಟ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಚನ್ನಮ್ಮನ ಜನ್ಮಸ್ಥಳ ಕಾಕತಿ ಖಾಸಗಿಯವರ ಜಾಗೆ ಆಗಿರುವುದರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನಡೆಯಾಗಿದೆ. ಆದ್ದರಿಂದ ಚನ್ನಮ್ಮನ ಕೋಟೆ ಹಾಗೂ ಜನ್ಮಸ್ಥಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕಳೆದ 25 ವರ್ಷಗಳಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿಬಾರಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಲಹೆ ಸೂಷನೆಗಳು ಪಾಲನೆಯಾಗಬೇಕು ಎಂದು ಹೇಳಿದರು.

ಶಾಸಕ ಬಾಬಾಸಾಹೇಬ್ ಪಾಟೀಲ ಮಾತನಾಡಿ ಕೋಟೆಯ ಆವರಣದಲ್ಲಿ ಮಾಹಿತಿ ಫಲಕಗಳ ಅಳವಡಿಕೆ ಮಾಡುವುದರ ಜತೆಗೆ ಧ್ವನಿಬೆಳಕು ಕಾರ್ಯಕ್ರಮವನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಪ್ರವೇಶ ಮಾರ್ಗಗಳಲ್ಲಿ ದೊಡ್ಡದಾದ ಫಲಕಗಳನ್ನು ಹಾಗೂ ಹೈ ಮಾಸ್ಕ್‌ ಲೈಟುಗಳನ್ನು ಅಳವಡಿಸಲು ಈಗಾಗಲೇ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಗಳು ಆಗುತ್ತವೆ ಎಂದ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊರಗಿನವರು ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಐದು ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವನೆ ಸರಕಾರಕ್ಕೆ ಕಳಿಸಲಾಗಿದೆ ಎಂದು ಉತ್ಸವದ ಸಿದ್ಧತೆಗಾಗಿ ಈಗಾಗಲೇ ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಹದಿನಾರು ಉಪ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ಕಾರ್ಯಪ್ರವೃತ್ತವಾಗಿವೆ. ಕಳೆದ ಬಾರಿಯಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಸಂಕಿರಣ, ಕ್ರೀಡೆ, ಕುಸ್ತಿ, ಸೈಕ್ಲಿಂಗ್, ದೋಣಿವಿಹಾರ ಸೇರಿದಂತೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದ ಅವರು ಕಿತ್ತೂರು ಉತ್ಸವದ ಪೂರ್ವದಲ್ಲಿ ಕಿತ್ತೂರು ಕೋಟೆಯ ಸಂರಕ್ಷಣಾ ಗೋಡೆಗಳನ್ನು ದುರಸ್ತಿ ಮಾಡಲು ಕ್ರಮ‌ ಕೈಗೊಳ್ಳಲು ಅವರು ತಿಳಿಸಿದರು.

ಮಾಜಿ ಜಿಪಂ ಸದಸ್ಯ ಬಿ ಎಮ್ ಚಿಕ್ಕನಗೌಡ್ರ ಸಲಹೆ ಸೂಚನೆ ನೀಡಿದರು.

 

ಸಾರ್ವಜನಿಕರ ನೀಡಿದ ಸಲಹೆಗಳು:

ಕಿತ್ತೂರು ಚನ್ನಮ್ಮನವರ ಸಾಹಸಗಾಥೆಯನ್ನು ಪರಿಚಯಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಸರದಾರ ಗುರುಸಿದ್ದಪ್ಪ. ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಭರಮಣ್ಣ ಸೇರಿದಂತೆ ಇನ್ನುಳಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೆಳಕು ಚೆಲ್ಲಬೇಕು.

ಕೋಟೆಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಮಾಹಿತಿ‌ ನೀಡಲು ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸಬೇಕು.

ಚನ್ನಮ್ಮನ ಜನ್ಮಸ್ಥಳದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು; ಪಟ್ಟಣ ಸ್ವಚ್ಛತೆ, ವಿದ್ಯುತ್ ದೀಪಾಲಂಕಾರ ಮಾಡಬೇಕು; ಕೋಟೆ ಗೋಡೆ ರಕ್ಷಣೆ ಮಾಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಲಹೆಗಳನ್ನು ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅವರು, ಕಳೆದ ವರ್ಷ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿದಿಗಳು. ಕಿತ್ತೂರು ನಾಡಿನ ನಾಗರಿಕರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

ಬೈಲಹೊಂಗಲ ಉಪವಿಭಾಗ ಅಧಿಕಾರಿ ಪ್ರಭಾವತಿ ಫಕೀರಪೂರ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಕದಮ ನಿರೂಪಿಸಿ ವಂದಿಸಿದರು

 

ಜಿಲ್ಲೆ

ರಾಜ್ಯ

error: Content is protected !!