Sunday, September 8, 2024

ಗೋಕಾಕ ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

ಬೆಳಗಾವಿ: ಜಿಲ್ಲೆಯ ಗೋಕಾಕ ನಗರದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ, ಇಡೀ ದಿನ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈಗಾಗಲೇ ದರೋಡೆ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಗೆ ಹುಡುಕಾಟ ನಡೆದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ನೇತೃತ್ವದಲ್ಲಿ ಗೋಕಾಕ ಪೊಲೀಸರು, ಸ್ವಯಂ ಪ್ರೇರಣೆಯಿಂದ ತನಿಖೆ ಕೈಗೊಂಡು ಈ ಪ್ರಕರಣ ಪತ್ತೆ ಮಾಡಿದ್ದಾರೆ.

ಗೋಕಾಕ ತಾಲ್ಲೂಕಿನ ಬೆನಚಿನಮರಡಿ ಗ್ರಾಮದ ರಮೇಶ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮಲಿಂಗ ವಡ್ಡರ, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣ ಪ್ರಕಾಶ ಪೂಜೇರಿ, ರಾಮಸಿದ್ಧ ಗುರುಸಿದ್ಧಪ್ಪ ತಪಸಿ ಬಂಧಿತರು. ಇನ್ನೊಬ್ಬ ಆರೋಪಿ ಬಸವರಾಜ ಖಿಲಾರಿ ಪರಾರಿಯಾಗಿದ್ದಾನೆ ಎಂದು ನಗರದಲ್ಲಿ ಸೋಮವಾರ ಎಸ್ಪಿ ಡಾ.ಭೀಮಾಶಂಕರ ಮಾಹಿತಿ ನೀಡಿದರು.

ಸೆಪ್ಟೆಂಬರ್‌ 5ನೇ ತಾರೀಖು (ಶಿಕ್ಷಕರ ದಿನಾಚರಣೆಯ ದಿನ) ಸಂತ್ರಸ್ತ ಮಹಿಳೆ ತಮ್ಮ ಹಳ್ಳಿಯಿಂದ ಗೋಕಾಕ ನಗರಕ್ಕೆ ಬಂದಿದ್ದರು. ಅವರೊಂದಿಗೆ ಇನ್ನೊಬ್ಬ ವ್ಯಕ್ತ ಕೂಡ ಇದ್ದರು. ಇಬ್ಬರೂ ಮಾರುಕಟ್ಟೆಗೆ ಹೋಗಲು ಬೆಳಿಗ್ಗೆಯೇ ನಗರಕ್ಕೆ ಬಂದಿದ್ದರು. ಸದ್ಯ ತಲೆಮರೆಸಿಕೊಂಡ ಆರೋಪಿ ಬಸವರಾಜ ಖಿಲಾರಿ ಈ ಇಬ್ಬರ ಮುಖಪರಿಚಯ ಹೊಂದಿದ್ದ. ತಮ್ಮ ಮನೆಗೆ ಬಂದು ಚಹಾ ಕುಡಿದು ಹೋಗಬೇಕು ಎಂದು ಪುಸಲಾಯಿಸಿ ಮಹಿಳೆ ಹಾಗೂ ಪುರುಷನನ್ನು ಕರೆದುಕೊಂಡು ಹೋದ. ನಗರದ ಹೃದಯಭಾಗದಲ್ಲಿರುವ ಮನೆಯಲ್ಲೇ ಇಬ್ಬರನ್ನೂ ಕೂಡಿಹಾಕಿದ.

ನಂತರ ಮನೆಗೆ ಬಂದ ಐವರು ಆರೋಪಿಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಅವರಲ್ಲಿದ್ದ ₹2,000 ಹಣ, ಚಿನ್ನಾಭರಣ ಕಸಿದುಕೊಂಡರು. ಎಟಿಎಂ ಬಳಸಿ ಹಣ ಡ್ರಾ ಮಾಡಿಕೊಂಡರು. ಕೊನೆಗೆ ಸಂತ್ರಸ್ತೆ ಹಾಗೂ ಅವರೊಂದಿಗೆ ಬಂದಿದ್ದ ಪುರುಷನನ್ನು ಜೊತೆಯಾಗಿ ನಿಲ್ಲಿಸಿ ‘ಖಾಸಗಿತನ’ದ ಫೋಟೊ ತೆಗೆದರು. ಅತ್ಯಾಚಾರ ಸಂಗತಿಯನ್ನು ಪೊಲೀಸರಿಗೆ ತಿಳಿಸಿದರೆ ಮರಿಯಾದೆ ಹಾಳು ಮಾಡುವುದಾಗಿ ಬೆದರಿಸಿದ್ದರು ಎಂದು ಎಸ್ಪಿ ತಿಳಿಸಿದರು.

ಪತ್ತೆಯಾಗಿದ್ದು ಹೇಗೆ?: ಸೆ.14ರಂದು ಮಹಿಳೆಯೊಬ್ಬರನ್ನು ಬೆದರಿಸಿ ಹಣ, ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರ ಹಿನ್ನೆಲೆ ಜಾಲಾಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಗೋಕಾಕ ಭಾಗದಲ್ಲಿ ಕುಖ್ಯಾತ ‘ಖಿಲಾರಿ ಗ್ಯಾಂಗ್‌’ ಹಾಗೂ ‘ಎಸ್‌.ಪಿ. ಸರ್ಕಾರ್‌ ಗ್ಯಾಂಗ್‌’ ಎಂಬ ಎರಡು ದರೋಡೆಕೋರರ ಗುಂಪಿನ ಸದಸ್ಯರೇ ಆಗಿದ್ದರು. ಪ್ರತಿಯೊಬ್ಬರ ಮೇಲೂ ಬೇರೆಬೇರೆ ಠಾಣೆಗಳಲ್ಲಿ 6ರಿಂದ 8 ಪ್ರಕರಣಗಳು ದಾಖಲಾಗಿವೆ.

ಆರೋಪಿಗಳ ವಿಚಾರಣೆ ನಡೆಸಿದಾಗ ಈ ಗ್ಯಾಂಗಿನ ಐವರು ಸೇರಿಕೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು ಗೊತ್ತಾಗಿದೆ. ಭಯದಿಂದ ಮಹಿಳೆ ದೂರು ನೀಡಿರಲಿಲ್ಲ. ಅವರಿಗೆ ಮನವರಿಕೆ ಮಾಡಿದ ಪೊಲೀಸರು ಸೆ.29ರಂದು ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಮಹಿಳೆ ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಡಾ.ಭೀಮಾಶಂಕರ ತಿಳಿಸಿದರು.

ಈ ಪ್ರಕಣದ ಪ್ರಮುಖ ಆರೋಪಿ ರಮೇಶ ಉದ್ದಪ್ಪ ಖಿಲಾರಿಯನ್ನು ಬಂಧಿಸಲು ಭಾನುವಾರ ರಾತ್ರಿ 2ರ ಸುಮಾರಿಗೆ ಪೊಲೀಸರು ದಾಳಿ ಮಾಡಿದರು. ಇದನ್ನರಿತ ಆರೋಪಿ ಬೈಕಿನಲ್ಲಿ ಪರಾರಿಯಾಗುವಾಗ ಅಪಘಾತಕ್ಕೀಡಾಗಿ ಗಾಯಗೊಂಡ. ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಧಾರಿಸಿಕೊಂಡ ಬಳಿಕ ವಶಕ್ಕೆ ಪಡೆಯಲಾಗುವುದು ಎಂದೂ ಎಸ್ಪಿ ಹೇಳಿದರು.

ಹೆಚ್ಚುವರಿ ಎಸ್ಪಿ ವೇಣುಗೋಪಾಲ ಅವರ ಮಾರ್ಗದರ್ಶನದಲ್ಲಿ ಗೋಕಾಕ ಡಿಎಸ್ಪಿ ಡಿ.ಎಂ. ಮುಲ್ಲಾ, ಸಿಪಿಐ ಗೋಕಾಲ ರಾಠೋಡ ನೇತೃತ್ವದ ತಂಡ ಈ ಪ್ರಕರಣ ಭೇದಿಸಿದೆ.

ಜಿಲ್ಲೆ

ರಾಜ್ಯ

error: Content is protected !!