Saturday, June 15, 2024

ಪಂಚಾಯಿತಿಗೊಂದು ಸಾರಾಯಿ ಅಂಗಡಿ ಪ್ರಸ್ತಾಪ; ಪಾಪದ ದುಡ್ಡಲ್ಲಿ ಸರ್ಕಾರ ನಡೆಯೋದು ಬೇಡ: ಕಾಂಗ್ರೆಸ್‌ ಶಾಸಕ ಬಿ ಆರ್‌ ಪಾಟೀಲ್‌ ಕಿಡಿ

ಬೆಂಗಳೂರು: ಆದಾಯ ಕ್ರೋಡೀಕರಣಕ್ಕಾಗಿ ಗ್ರಾಮ ಪಂಚಾಯಿತಿಗೊಂದು ಮದ್ಯದಂಗಡಿ ತೆರೆಯುವ ರಾಜ್ಯ ಸರಕಾರದ ಪ್ರಸ್ತಾವನೆಗೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ.

”ಸರಕಾರ ನಡೆಸಲು ಹಣ ಕಡಿಮೆ ಬಿದ್ದರೆ ಜೋಳಿಗೆ ಹಿಡಿದು ಹಣ ಹೊಂದಿಸಿ ಕೊಡುತ್ತೇವೆ. ಆದರೆ, ಗ್ರಾಮ ಪಂಚಾಯಿತಿಗೊಂದು ಮದ್ಯದಂಗಡಿ ತೆರೆಯುವ ನಿರ್ಧಾರ ಮರುಪರಿಶೀಲನೆ ಮಾಡಬೇಕು,” ಎನ್ನುವ ಮೂಲಕ ಆಳಂದ ಶಾಸಕ ಬಿ ಆರ್‌ ಪಾಟೀಲ್‌ ಅವರು ತಮ್ಮದೇ ಪಕ್ಷದ ಸರಕಾರಕ್ಕೆ ಚಾಟಿ ಬೀಸಿದ್ದಾರೆ.

ಕಲಬುರಗಿಯಲ್ಲಿ ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”ಇಲ್ಲಿವರೆಗೆ ಮದ್ಯದಂಗಡಿ ಕಡಿಮೆಯಾಗಿವೆ ಎಂದು ಯಾವ ಸಾರ್ವಜನಿಕರೂ ಅರ್ಜಿ ಅಥವಾ ಮನವಿ ಸಲ್ಲಿಸಿಲ್ಲ. ಆದರೂ ರಾಜ್ಯ ಸರಕಾರ 1,000 ಹೊಸ ಅಂಗಡಿ ತೆಗೆಯುತ್ತಿರುವುದು ಏಕೆ? ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು,” ಎಂದು ಆಗ್ರಹಿಸಿದರು.

”ಹಿಂದೆ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ದೇಶದಲ್ಲಿಆಹಾರ ಕೊರತೆಯಾದಾಗ ವಾರಕ್ಕೊಮ್ಮೆ ಉಪವಾಸ ಮಾಡುವಂತೆ ಕರೆ ನೀಡಿದ್ದರು. ಈಗ ಸರಕಾರ ಸಂಕಷ್ಟದಲ್ಲಿದೆ ಎಂದರೆ ಜೋಳಿಗೆ ಹಿಡಿದು ಹಣ ಹೊಂದಿಸಿ ಕೊಡುತ್ತೇವೆ. ಆದರೆ, ಮದ್ಯ ಮಾರಾಟದಿಂದ ಬಂದ ಪಾಪದ ಹಣದಿಂದ ಸರಕಾರ ನಡೆಸುವುದು ಬೇಡ. ಇಂದು ರಾಜ್ಯದ ಯಾವುದೇ ಹಳ್ಳಿಗೆ ಹೋದರೂ ಜನ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಅಕ್ಕಿ, ಗೋಧಿ, ಹಣ ನೀಡುವ ಬದಲು ಮೊದಲು ಮದ್ಯ ನಿಷೇಧ ಮಾಡಿ ಎಂಬುದು ಮಹಿಳೆಯರ ಬೇಡಿಕೆಯಾಗಿದೆ,” ಎಂದರು.

ಸಂಘ-ಸಂಸ್ಥೆಗಳ ವಿರೋಧ

ಸೂಪರ್‌ ಮಾರ್ಕೆಟ್‌, ಮಾಲ್‌ಗಳಲ್ಲಿ ಮದ್ಯ ಮಾರಾಟ ಮಾಡುವ ಸರಕಾರದ ಯೋಜನೆಗೆ ಮಕ್ಕಳ ಹಕ್ಕುಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ವಿಚಾರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದು ಮಕ್ಕಳ ಹಿತದೃಷ್ಟಿಯಿಂದ ಪ್ರಸ್ತಾವನೆ ಕೈಬಿಡುವಂತೆ ಮನವಿ ಮಾಡಲು ತೀರ್ಮಾನಿಸಿದೆ.

ಅಬಕಾರಿ ಇಲಾಖೆಯು ತನ್ನ ಆದಾಯ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಸೂಪರ್‌ ಮಾರ್ಕೆಟ್‌, ಮಾಲ್‌ಗಳಲ್ಲಿ ಮಾರಾಟಕ್ಕೆ ಅವಕಾಶ ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದಕ್ಕೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳು, ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಪತ್ರ ಬರೆದು ಪ್ರಸ್ತಾವನೆಯನ್ನು ಕೈ ಬಿಡುವಂತೆ ಮನವಿ ಮಾಡಲು ಮುಂದಾಗಿವೆ.

 

 

 

ಕೃಪೆ:ವಿಕ

ಜಿಲ್ಲೆ

ರಾಜ್ಯ

error: Content is protected !!