Friday, April 19, 2024

ಗಾಂಧೀಜಿ ಅವರನ್ನು ಗುಂಡಿಕ್ಕಿಕೊಂದವರನ್ನು ಆರಾಧಿಸುವವರು, ಪೂಜಿಸುವವರ ಬಗ್ಗೆ ಎಚ್ಚರದಿಂದ ಇರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು (ಅ.3) : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಗುಂಡಿಕ್ಕಿಕೊಂದವರನ್ನು ಆರಾಧಿಸುವವರು, ಪೂಜಿಸುವವರ ಬಗ್ಗೆ ಜನತೆ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಧ್ವಜ ತಯಾರಿಸುವ ಧಾರವಾಡದ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಗಾಂಧೀಜಿ ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಆದರೆ ಗಾಂಧೀಜಿ ಅವರನ್ನು ಗುಂಡಿಟ್ಟುಕೊಂದ ಮತಾಂಧ ನಾಥೂರಾಮ್‌ ಗೂಡ್ಸೆಯನ್ನೂ ಪೂಜಿಸುವವರು, ಆರಾಧಿಸುವವರು ಈ ದೇಶದಲ್ಲಿ ಇದ್ದಾರಲ್ಲಾ ಎಂಬ ನೋವಿದೆ. ಇಂತಹವರ ಬಗ್ಗೆ ಜನರು ಎಚ್ಚರದಿಂದ ಇರಬೇಕು ಎಂದು ಕರೆ ನೀಡಿದರು.

ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿದ್ದು ಅಲ್ಲಿ ವರ್ಣಬೇಧ ನೀತಿ ವಿರುದ್ಧ ಹೋರಾಟ ನಡೆಸಿದ್ದರು. ಆಗ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರ ಮನವಿಯ ಮೇರೆಗೆ ಭಾರತಕ್ಕೆ ಆಗಮಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ರೈಲಿನ ಮೂರನೇ ದರ್ಜೆ ಬೋಗಿಗಳಲ್ಲಿ ದೇಶಾದ್ಯಂತ ಸಂಚರಿಸಿ ದೇಶ, ಸಮಾಜ, ಜನರ ಬದುಕು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ಬಳಿಕ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು ಎಂದು ಸ್ಮರಿಸಿದರು.

ಗ್ಯಾರಂಟಿಗೆ ಗಾಂಧೀಜಿ ಚಿಂತನೆಯೇ ಪ್ರೇರೇಪಣೆ:

ಹಳ್ಳಿಗಳ ಉದ್ಧಾರವಾಗದೇ ದೇಶ ಉದ್ಧಾರ ಆಗುವುದಿಲ್ಲ. ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಮಹಿಳಾ ಸ್ವಾವಲಂಬನೆಗೆ ಒತ್ತು ನೀಡಬೇಕು ಎಂದು ಗಾಂಧೀಜಿ ಕರೆ ನೀಡಿದ್ದರು. ಆದರೆ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ದಾರಿಯಲಲ್ಲಿ ನಡೆಯುವ ಪ್ರಯತ್ನವನ್ನು ನಾವು ಮಾಡಲಿಲ್ಲ. ಆದರೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ 2 ಸಾವಿರ ರು. ನೀಡಿಕೆ, ಉಚಿತ ಪಡಿತರ ವಿತರಣೆ ಕಾರ್ಯಕ್ರಮಗಳು ಗಾಂಧೀಜಿಯವರ ಚಿಂತನೆಗಳಿಂದ ಪ್ರೇರೇಪಿತವಾಗಿ ಮಾಡಿದ ಯೋಜನೆಗಳಾಗಿವೆ ಎಂದು ಪ್ರತಿಪಾದಿಸಿದರು.

ಗಾಂಧೀಜಿವರ ಮಾತು-ಕೃತಿಯಲ್ಲಿ ವ್ಯತ್ಯಾಸ ಇರಲಿಲ್ಲ. ನುಡಿದಂತೆ ನಡೆದರು, ನಡೆದಂತೆ ಬದುಕಿದರು. ಸಮಾಜವೂ ಹೀಗೇ ಇರಬೇಕು ಎಂದು ಆಶಿಸಿದ್ದರು. ಮನುಷ್ಯ-ಮನುಷ್ಯನನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಸಂದೇಶ ಸಾರಿದರು. ಇದನ್ನು ಪಾಲಿಸಿದರೆ ಅದೇ ನಾವು ಅವರಿಗೆ ನೀಡುವ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದು ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಜನ್ಮದಿನವೂ ಆಗಿದ್ದು ಭಾರತ ಕಂಡ ಪ್ರಾಮಾಣಿಕ ರಾಜಕಾರಣಿ ಆಗಿದ್ದರು ಎಂದು ಸ್ಮರಿಸಿದ ಅವರು, ಖಾದಿ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಒಳ್ಳೆಯ ಕಾರ್ಯವನ್ನು ಗರಗ ಕ್ಷೇತ್ರೀಯ ಸೇವಾ ಸಂಘ ಮಾಡುತ್ತಿದೆ. ಇಲ್ಲಿ ನಿಯಮಾನುಸಾರ ರಾಷ್ಟ್ರಧ್ವಜ ತಯಾರಿಸುತ್ತಿದ್ದು ದೇಶದ ಇತರ ಭಾಗಗಳಿಗೂ ಸರಬರಾಜು ಮಾಡಲಾಗುತ್ತದೆ. ಪ್ರಶಸ್ತಿಗೆ ಈ ಸಂಘವನ್ನು ಆಯ್ಕೆಮಾಡಿರುವುದು ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿಯು ಫಲಕ ಮತ್ತು 5 ಲಕ್ಷ ರು. ನಗದು ಒಳಗೊಂಡಿದೆ. ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ಎಂ.ನಿಂಬಾಳ್ಕರ್‌, ಕಾರ್ಯದರ್ಶಿ ಎನ್‌.ಜಯರಾಮ್‌ ಉಪಸ್ಥಿತರಿದ್ದರು.

ಅರ್ಜಿ ಸಲ್ಲಿಸದಿದ್ದರೂ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ

60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 25 ವರ್ಷ ಸೇವೆ ಸಲ್ಲಿಸಿದ ಸಂಘ-ಸಂಸ್ಥೆಗಳಿಗೆ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು 18 ವ್ಯಕ್ತಿಗಳು, 12 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಆದರೆ ಅರ್ಜಿ ಸಲ್ಲಿಸದಿದ್ದರೂ ಧಾರವಾಡದ ಗರಗ ಕ್ಷೇತ್ರೀಯ ಸೇವಾ ಸಂಘದ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಅವರು ತಿಳಿಸಿದರು.

 

 

ಕೃಪೆ:ಸುವರ್ಣಾ.

ಜಿಲ್ಲೆ

ರಾಜ್ಯ

error: Content is protected !!