Saturday, July 27, 2024

ಲಿಂಗಾಯತರಿಗೆ ಡಿಸಿಎಂ ಬೇಡ ಬದಲಾಗಿ ಸಿಎಂ ಸ್ಥಾನವೇ ನೀಡಿ:ಶ್ಯಾಮನೂರು ಶಿವಶಂಕರಪ್ಪ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯಕ್ಕೆ ಸೇರಿದವರನ್ನು ಸಿಎಂ ಮಾಡಬೇಕು ಎಂಬ ಚರ್ಚೆಯ ಬೆನ್ನಲ್ಲೇ ಲಿಂಗಾಯತ ಮುಖ್ಯಮಂತ್ರಿ ಚರ್ಚೆಯೂ ಮುನ್ನಲೆಗೆ ಬಂದಿದೆ. ಲಿಂಗಾಯತ ಸಮುದಾಯದ ಪರವಾಗಿ ಹಿರಿಯ ಕಾಂಗ್ರೆಸ್ ಮುಖಂಡ ಶ್ಯಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಕಾಂಗ್ರೆಸ್‌ನಲ್ಲಿ ಹೊಸತೊಂದು ಕಿಡಿಯನ್ನು ಹೊತ್ತಿಸಿದೆ.

ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದಕ್ಕೆ ಸೇರಿದವರನ್ನು ಸಿಎಂ ಮಾಡಬೇಕು ಎಂಬ ಬೇಡಿಕೆ ತೀವ್ರವಾಗಿತ್ತು. ಡಾ.ಜಿ ಪರಮೇಶ್ವರ್‌ ಪದೇ ಪದೇ ಇಂತಹ ಅರ್ಥದಲ್ಲಿ ಹೇಳಿಕೆಯನ್ನು ನೀಡಿದ್ದರು. ಅಷ್ಟೇ ಅಲ್ಲದೆ, ಹಲವು ದಲಿತ ನಾಯಕರು ಇದಕ್ಕೆ ಪರೋಕ್ಷವಾಗಿ ಧ್ವನಿಗೂಡಿಸಿದ್ದರು. ದಲಿತರಿಗೆ ಡಿಸಿಎಂ ಅಥವಾ ಸಿಎಂ ಪಟ್ಟವನ್ನು ಕೊಡಬೇಕು ಎಂಬ ಚರ್ಚೆಯನ್ನು ಪದೇ ಪದೇ ಮುನ್ನಲೆಗೆ ತರಲಾಗುತ್ತಿದೆ.
ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಕೂಡಾ ಮತ್ತೊಂದು ಆರೋಪವನ್ನು ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಾಡಿದ್ದು. ಕಾಂಗ್ರೆಸ್‌ನಲ್ಲಿ ಅತೀ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಬಿಲ್ಲವ ಈಡಿಗರ ಸಮಾವೇಶದಲ್ಲಿ ಬಹಿರಂಗವಾಗಿ ತಮ್ಮ ಆಕ್ಷೇಪವನ್ನು ಹೊರಹಾಕಿದ್ದರು. ಅಲ್ಲದೆ, ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಆಕ್ರೋಶವನ್ನು
ವ್ಯಕ್ತಪಡಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಶಾಮನೂರು ಶಿವಶಂಕರಪ್ಪ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿರುವ ಅವರು, ಲಿಂಗಾಯತರಿಗೆ ಡಿಸಿಎಂ ಬೇಡ ಬದಲಾಗಿ ಸಿಎಂ ಸ್ಥಾನವೇ ನೀಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲು ಮಾಡಿದ್ದಾರೆ.
ಶಾಮನೂರು ಬೆಂಬಲಕ್ಕೆ ಬಿ ಎಸ್‌ ಯಡಿಯೂರಪ್ಪ

ಲಿಂಗಾಯತ ಸಮುದಾಯದ ಪರವಾಗಿ ಬೇಡಿಕೆ ಇಟ್ಟಿರುವ ಶಾಮನೂರು ಬೆಂಬಲಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿಂತಿದ್ದಾರೆ. ಲಿಂಗಾಯತ ಸಮುದಾಯದ ಸರ್ಕಾರಿ ಅಧಿಕಾರಿಗಳು ದೊಡ್ಡ ಸಂಖ್ಯೆಯಲ್ಲಿದ್ದು, ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಶ್ಯಾಮನೂರು ಹೇಳಿಕೆಗೆ ಬೆಂಬಲವನ್ನು ಸೂಚಿಸಿದ್ದಾರೆ.

ಒಟ್ಟಿನಲ್ಲಿ ಶಾಮನೂರು ಹಚ್ಚಿದ ಕಿಡಿ ಕಾಂಗ್ರೆಸ್‌ನಲ್ಲಿ ಮತ್ತೊಂದು ಆಯಾಮದ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಭವಿಷ್ಯದಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬುವುದನ್ನು ಕಾದನೋಡಬೇಕಿದೆ.

ಕೃಪೆ:ವಿಕ

ಜಿಲ್ಲೆ

ರಾಜ್ಯ

error: Content is protected !!