Thursday, September 19, 2024

ಮಾಜಿ ಮುಖ್ಯಮಂತ್ರಿಗಳಿಗೆ ಆರ್ ಎಸ್ ಎಸ್ ನ ಭಯವೇ….?

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಆಗಾಗ್ಗೆ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಟೀಕಿಸುವುದು ಎಲ್ಲರಿಗೂ ಗೊತ್ತಿದೆ. ಚುನಾವಣಾ ಸಮಯ ಹತ್ತಿರ ಬಂದರಂತೂ ಈ ಟೀಕೆ ಅವ್ಯಾಹತವಾಗಿ ನಡೆಯುತ್ತದೆ. ಹಾಗಾದರೆ ಏನಿರಬಹುದು ಈ ಟೀಕೆಯ ಹಿಂದಿನ ಗುಟ್ಟು?

ಸಿದ್ದರಾಮಯ್ಯನವರು ಆಗಾಗ್ಗೆ ಕುಮಾರಸ್ವಾಮಿಯವರನ್ನ ಕೆಣಕುವುದು ಕೂಡಲೇ ಕುಮಾರಸ್ವಾಮಿಯವರು ಸರಿಯಾಗಿಯೇ ತಿರುಗೇಟು ನೀಡುವುದು, ಆ ತಿರುಗೇಟಿಗೆ ಮತ್ತೆ ಸಿದ್ಧರಾಮಯ್ಯನವರು ಪ್ರತಿಕ್ರಿಯಿಸುವುದು, ಆ ಪ್ರತಿಕ್ರಿಯೆಗೆ ಮತ್ತೆ ಕುಮಾರಸ್ವಾಮಿಯವರು ತಿವಿಯುವುದು ಇದು ಕಳೆದ ಒಂದು ದಶಕದಿಂದ ಕನ್ನಡ ನಾಡಿನ ಎಲ್ಲರಿಗೂ ತಿಳಿದಿರುವ ವಿಷಯ.

ಬಹಳಷ್ಟು ವೇಳೆ ಸಿದ್ದರಾಮಯ್ಯನವರೇ ಸುಮ್ಮನಾಗುತ್ತಾರೆ. ಎರಡು ರಾಜಕೀಯ ಪಕ್ಷಗಳ ಮುಖಂಡರ ಈ ದಾಳಿ- ಪ್ರತಿದಾಳಿ ಮಾಮೂಲಿಯಂತಾಗಿದೆ. ತಮ್ಮ ಪಕ್ಷಗಳ ಅಸ್ತಿತ್ವಕ್ಕಾಗಿ ತಮ್ಮ ನಾಯಕತ್ವದ ಗಟ್ಟಿತನಕ್ಕಾಗಿ ಈ ರೀತಿಯ ಕೂಗಾಟ- ಕಾದಾಟ ಮಾಮೂಲಿ ವರಸೆ.

ಕುಮಾರಸ್ವಾಮಿಯವರು ಅಷ್ಟೆ, ತಮ್ಮನ್ನು ಕೆಣಕಿದವರಿಗೆ ಸರಿಯಾಗಿಯೇ ತಿರುಗೇಟು ನೀಡುತ್ತಾರೆ.ಆದರೆ ಕುಮಾರಸ್ವಾಮಿಯವರ ವೀಕ್ನೆಸ್ ಇರುವುದು, ತಾವೇ ಇನ್ನೊಬ್ಬರನ್ನು ಮೊದಲ್ಗೊಂಡು ಟೀಕೆ ಮಾಡಲು ಹೋದಾಗ. ಬಹಳಷ್ಟು ವೇಳೆ ಅವರು ಹೇಳಿದ ಮಾತುಗಳಿಗೆ ಬದ್ಧರಾಗದೆ, ಹಿಟ್ & ರನ್ ವ್ಯಕ್ತಿತ್ವದವರೆಂದು ಕರೆಯಿಸಿಕೊಳ್ಳುತ್ತಾರೆ.

ಆದರೆ ಆರೆಸ್ಸೆಸ್ ಸಂಘಟನೆಯನ್ನು ಟೀಕಿಸುವುದರಲ್ಲಿ ಇಬ್ಬರೂ ಸಮಾನ ಸ್ನೇಹಿತರು. ಒಬ್ಬರಿಗಿಂತ ಒಬ್ಬರು ಕಟುವಾಗಿ ಸಂಘಟನೆಯನ್ನು ಆಗಾಗ್ಗೆ ಟೀಕಿಸುತ್ತಿರುತ್ತಾರೆ.ಚುನಾವಣೆ ಸಂದರ್ಭದಲ್ಲಂತೂ ಇದು ಅತಿರೇಕಕ್ಕೆ ಹೋಗುವುದುಂಟು. ಇವರಿಗಿರುವ ಒಂದು ಧನಾತ್ಮಕ ಅಂಶ ಏನೆಂದರೆ ಯಾರು ಏನೇ ಕೂಗಾಡಿದರೂ ಆರೆಸ್ಸೆಸ್ ಸಂಘಟನೆ ಅವುಗಳಿಗೆ ಪ್ರತಿಕ್ರಿಯಿಸುವುದಿಲ್ಲ.ಹಾಗೆಂದು ತಮ್ಮ ಕೆಲಸವನ್ನು ನಿಲ್ಲಿಸುವುದೂ ಇಲ್ಲ. ತಮ್ಮ ಪಾಡಿಗೆ ತಾವು ದೇಶಸೇವೆಯ ಕೈಂಕರ್ಯದಲ್ಲಿ ಸದಾ ನಿರತರಾಗಿರುತ್ತಾರೆ. ಹಾಗಾದರೆ ಆ ಸಂಘಟನೆಯ ಬಗ್ಗೆ ಅವರಿಗೇಕೆ ಅಷ್ಟೊಂದು ಭಯ?

ಕಳೆದ ಒಂದು ದಶಕದಿಂದ ಯುವ ಮತದಾರರ ಒಲವಿನಲ್ಲಿ ಬಹಳ ಬದಲಾವಣೆಯನ್ನು ಕಾಣುತ್ತೇವೆ. ಮೋದಿಯವರ ಪ್ರಾಮಾಣಿಕತೆ, ಭ್ರಷ್ಟಾಚಾರ ರಹಿತ ಆಡಳಿತ,ಸದೃಢ ಭಾರತ ಕಟ್ಟಲು ಶ್ರಮಿಸುತ್ತಿರುವ ಪರಿ, ಗಡಿಯಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕುತ್ತಾ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ  ಕಲಿಸುತ್ತಿರುವುದು, ಕಾಶ್ಮೀರದ ಬದಲಾವಣೆಯ ಚಿತ್ರಣ – ಇವೆಲ್ಲ ಯುವಕರನ್ನು ಮೋದಿಯವರೆಡೆಗೆ ಸೂಜಿಗಲ್ಲಿನಂತೆ ಸೆಳೆಯುತ್ತಿರುವುದoತೂ ದಿಟ. ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸಿದರೆ ಇದು ಎಲ್ಲರಿಗೂ ವೇದ್ಯವಾಗುತ್ತದೆ. ಹಾಗೆಯೇ ಅಂತಹ ಯುವಕರು ತಮ್ಮ ಸುತ್ತಮುತ್ತಲಿನ ಆರೆಸ್ಸೆಸ್ ಶಾಖೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು, ವಿರೋಧ ಪಕ್ಷದ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಒಂದು ಕಾಲವಿತ್ತು. ಸಿದ್ದರಾಮಯ್ಯನವರು ಹಿಂದೂ ದೇವಾಲಯಗಳ ಹುಂಡಿಯಿಂದ ಸಂಗ್ರಹವಾದ ಹಣವನ್ನು ಮಸೀದಿ, ಚರ್ಚುಗಳಿಗೆ ಧಾರಾಳವಾಗಿ ಹಂಚುತ್ತಿದ್ದ ಕಾಲವದು. ಈ ಗುಟ್ಟು ಹೇಗೋ ರಟ್ಟಾಗಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರನ್ನು ಇನ್ನಿಲ್ಲದಂತೆ ಜಾಡಿಸಿದರು. ಇದು ಚುನಾವಣೆ ಮೇಲೂ ಪರಿಣಾಮ ಬೀರಿ, 120 ಸ್ಥಾನದಲ್ಲಿದ್ದ ಅವರ ಪಕ್ಷ 70 ಸ್ಥಾನಕ್ಕಿಳಿದಿತ್ತು. ಹಾಗೆಯೇ ಉಗ್ರಗಾಮಿಗಳ ದಾಳಿಯ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ, ಮುಸ್ಲಿಮರ ಪುಂಡಾಟಗಳ ಬಗ್ಗೆಯೂ ಬಾಯಿ ಬಿಡದೆ, ಸದಾ ಅವರನ್ನೇ ಹಾಡಿ ಹೊಗಳುತ್ತಿದ್ದದ್ದು ಕೂಡ ಹಿಂದೂ ಯುವಕರ ಕೋಪಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಅವರ ಆಡಳಿತಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇದ್ದದ್ದು ಕೂಡ, ಈ ಕೊಲೆಗಳಿಗೆ ಸಿದ್ದರಾಮಯ್ಯನವರೇ ಪರೋಕ್ಷ ಕಾರಣ ಎಂಬಷ್ಟರ ಮಟ್ಟಿಗೆ ಅವರ ವಿರುದ್ಧ ಹಿಂದೂ ಯುವಶಕ್ತಿ ಕೆಂಡಾಮಂಡಲವಾಗಲು ಕಾರಣವಾಗಿತ್ತು.

ಗೋಮಾಂಸ ತಿನ್ನುವ ಬಗ್ಗೆ ಅವರ ಭಂಡತನದ ಮಾತುಗಳು, ಹನುಮ ಜಯಂತಿಯ ಬಗ್ಗೆ ಅವರ ಕುಹಕದ ಮಾತುಗಳು, ರಾಮಜನ್ಮಭೂಮಿ ಬಗ್ಗೆ ಅವರ ವಿವಾದಾತ್ಮಕ ಮಾತುಗಳು, ರಾಮಮಂದಿರ ನಿಧಿಸಮರ್ಪಣಾ ಅಭಿಯಾನದ ಸಂದರ್ಭದಲ್ಲಿ ದೇಣಿಗೆ ನೀಡಬೇಡಿರೆಂದು ಕರೆಕೊಟ್ಟದ್ದು – ಹೀಗೆ ಪದೇ ಪದೇ ಹಿಂದೂ ಜನಾಂಗವನ್ನು ಮತ್ತು ನಂಬಿಕೆಗಳನ್ನು ಮಾತ್ರ ಕೆಣಕುತ್ತಿದ್ದ ಸಿದ್ದರಾಮಯ್ಯನವರ ನಡೆಯೇ ಅವರ ಪತನಕ್ಕೂ ಕಾರಣವಾಯಿತು ಎಂದರೆ ಅತಿಶಯೋಕ್ತಿಯಾಗಲಾರದೆನೋ.

ಹಾಗಾಗಿಯೇ ಹಂದಿಮಾಂಸ ತಿಂದು ಮಸೀದಿ ಒಳಗೆ ಪ್ರವೇಶಿಸುವ ತಾಕತ್ತಿದೆಯೇ? ಎಂದು ಯುವ ಜನಾಂಗ ಗಟ್ಟಿದನಿಯಲ್ಲೇ ಸಿದ್ದರಾಮಯ್ಯನವರನ್ನು ಛೇಡಿಸಿತ್ತು. ತಲೆಗೆ ಮುಸ್ಲಿಂ ಟೋಪಿ ಧರಿಸಿ ಮಸೀದಿಗೆ ಪ್ರವೇಶಿಸುವ ನಿಮ್ಮ ಯೋಗ್ಯತೆಗೆ, ಒಬ್ಬನೇ ಒಬ್ಬ ಮುಸ್ಲಿಂ ಯುವಕನ ಹಣೆಗೆ ತಿಲಕ ಇಡಲು ಸಾಧ್ಯವೇ? ಎಂದು ನೇರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ನೀವುಗಳು, ನಿಮ್ಮ ಯೋಗ್ಯತೆಗೆ ಎಂದಾದರೂ ಮುಸ್ಲಿಂರಿಂದ ದಸರಾ ಕೂಟ ಅಥವಾ ದೀಪಾವಳಿ ಕೂಟವನ್ನು ಏರ್ಪಡಿಸಿಕೊಂಡಿದ್ದೀರಾ? ಎಂದು ಸಿದ್ದರಾಮಯ್ಯನವರನ್ನು ನೇರವಾಗಿಯೇ ಜನ್ಮ ಜಾಲಾಡಿಸಿತ್ತು. ಈ ಕಾರಣಕ್ಕಾಗಿಯೇ ಸಿದ್ಧರಾಮಯ್ಯನವರ ಮೇಲಿನ ಕೋಪವನ್ನು, ಕರ್ನಾಟಕದ ಜೋಕರ್ ಲಾಲು ಪ್ರಸಾದ್ ಯಾದವ್ ಎಂದು ಕಿಚಾಯಿಸಿ ಯುವಜನಾಂಗ ಶಮನ ಮಾಡಿಕೊಂಡಿತ್ತು ಕೂಡ. ಬಡತನದಲ್ಲಿ ಓದಿದ್ದೇನೆಂಬುದೇ ಮನುಷ್ಯನ ಟ್ರೇಡ್ ಮಾರ್ಕ್ ಆಗುವುದಿಲ್ಲ.ವಿದ್ಯೆಯ ಜೊತೆ ಸಂಸ್ಕಾರವೂ ಬೇಕು.ಅದು ನಿಮ್ಮಲ್ಲಿ ಕಿಂಚಿತ್ತೂ ಇಲ್ಲವೆಂಬ ಸಿದ್ದರಾಮಯ್ಯನವರ ಫೋಟೋ ಪಕ್ಕದ ಕಾಮೆಂಟ್ ಗಳನ್ನು ಎಲ್ಲರೂ ಗಮನಿಸಿರಬಹುದು.

ತಾನು ಮಾಡುವುದ್ದೆಲ್ಲವನ್ನೂ ನೋಡುತ್ತಾ , ಎಲ್ಲರೂ ತನ್ನನ್ನು ಹಾಡಿ ಹೊಗಳುತ್ತಾರೆಂದು ಭಾವಿಸುವ ಸಿದ್ಧರಾಮಯ್ಯನವರಿಗೆ ಈ ರೀತಿಯ ಯುವಜನಾಂಗದ ಪ್ರಶ್ನೆಗಳು ಇರಿಸುಮುರಿಸು ಉಂಟುಮಾಡಿರುವುದoತೂ ನಿಜ. ಇದಕ್ಕೆಲ್ಲಾ ಕಾರಣ ಯುವಕರಲ್ಲಿ ಈ ಬಗ್ಗೆ ಅರಿವು ಮೂಡಿಸುತ್ತಿರುವ ಆರೆಸ್ಸೆಸ್ ಎಂಬುದು ಅವರ ಗುಮಾನಿ. ಆರೆಸ್ಸೆಸ್ ಬಲ ಪಡೆದಷ್ಟುೂ ನಾವು ಬಲಹೀನರಾಗುತ್ತೇವೆಂಬುದು ಅವರ ಆತಂಕಕ್ಕೆ ಕಾರಣ. ಹೀಗಾಗಿಯೇ ಆರೆಸ್ಸೆಸ್ ಮೇಲೆ ಸದಾ ಅವರ ಕೆಂಗಣ್ಣು. ಆರೆಸ್ಸೆಸ್ ಅನ್ನು ಏನೂ ಮಾಡಲು ಸಾಧ್ಯವಿಲ್ಲ, ಹಾಗಾಗಿ ಆರೆಸ್ಸೆಸ್ ಬಗ್ಗೆ ಅವಹೇಳನ ಮಾಡುತ್ತಾ, ಯುವಕರನ್ನು ಆ ಸಂಘಟನೆಯಿಂದ ವಿಮುಖಗೊಳಿಸಬಹುದೆಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.

ಇನ್ನೊಬ್ಬ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರದ್ಧೂ ಹೆಚ್ಚು ಕಮ್ಮಿ ಇದೇ ಹಾಡು- ಪಾಡು. ಎಲ್ಲೆಡೆ ಬಹು ದೊಡ್ಡ ಮಟ್ಟದಲ್ಲಿ ಯುವಕರು ಆರೆಸ್ಸೆಸ್ ನ ದೇಶ ಪ್ರೇಮದ ಸಿದ್ಧಾಂತದೆಡೆಗೆ ಆಕರ್ಷಿತರಾಗುತ್ತಿರುವುದು ಇವರ ನಿದ್ದೆಗೆಡಿಸಿರಬಹುದು. ಒಮ್ಮೆ ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಂಡವರು ಎಂದಿಗೂ ಅದರಿಂದ ಹೊರಬರಲಾರರು ಎಂಬ ಕಟುಸತ್ಯ ಕೂಡ ಇವರ ತಲೆಬೇನೆಗೆ ಕಾರಣವಾಗಿರಬಹುದು. ಹಾಗಾಗಿ ತಮ್ಮ ತಮ್ಮ ಪಕ್ಷಗಳ ಅಥವಾ ತಮ್ಮ ತಮ್ಮ ಜನಾಂಗಗಳ ಯುವಕರನ್ನಾದರೂ ಅತ್ತ ಸುಳಿಯದಂತೆ ಮಾಡುವುದು ಇವರ ಮುಂದಿರುವ ಜರೂರತ್ತಾಗಿದೆ.ಅದಕ್ಕಾಗಿ ದಿನವೂ ಇವರದು ಆರೆಸ್ಸೆಸ್ ಟೀಕಾ ಮಂತ್ರ.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಆರೆಸ್ಸೆಸ್ ನವರು ಗುರುತು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಮಾರಸ್ವಾಮಿಯವರು ನಗೆಪಾಟಲಿಗೀಡಾಗಿದ್ದರು. ಆರ್ ಎಸ್ ಎಸ್ ಕೋಮು ದ್ವೇಷ ಹರಡುತ್ತಿದೆ ಎಂದು ಆರೋಪಿಸುವ ಇವರುಗಳು, ಸ್ವಯಂಸೇವಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆಯೇ? ಇಲ್ಲಿಯವರೆಗೂ ಆರೆಸ್ಸೆಸ್ ಎಷ್ಟು ಕೋಮುಗಲಭೆಗಳನ್ನು ಸೃಷ್ಟಿಸಿದೆ? ಇತರ ಧರ್ಮದ ಸಂಘಟನೆಗಳು ಕೋಮುದ್ವೇಷ ಹರಡಲು ಮಾಡುತ್ತಿರುವ ತಂತ್ರಗಳೇನು? ಕ್ರಿಶ್ಚಿಯನ್ ಮಿಷನರಿಗಳು ಅವ್ಯಾಹತವಾಗಿ ನಡೆಸುತ್ತಿರುವ ಮತಾಂತರದ ಬಗ್ಗೆ ನೀವೇಕೆ ತುಟಿ ಬಿಚ್ಚುತ್ತಿಲ್ಲ? ಆರೆಸ್ಸೆಸ್ ಎಷ್ಟು ಜನರನ್ನು ಮತಾಂತರಗೊಳಿಸಿದೆ?– ಎಂಬುದರ ಬಗ್ಗೆ ಈ ಯುವಕರು ಜಾಲತಾಣಗಳಲ್ಲಿ ಮಾಡುವ ಚರ್ಚೆಗಳು ಅರ್ಥಗರ್ಭಿತವಾಗಿವೆ.

ಮೂರು ಜಿಲ್ಲೆಗಳಿಗೆ ಸೀಮಿತವಾಗಿರುವ ಅಪ್ಪ-ಮಕ್ಕಳ ಪಕ್ಷದ ನಾಯಕರಿಗೆ, ದೇಶಾದ್ಯಂತವಿರುವ , 95 ವರ್ಷಗಳ ಇತಿಹಾಸವಿರುವ,ದೇಶ ಸೇವೆಗೆಂದೇ ತನ್ನನ್ನು ಸಮರ್ಪಿಸಿಕೊಂಡಿರುವ ಆರೆಸ್ಸೆಸ್ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ? ಎಂಬುದು ಯುವಕರ ಪ್ರಶ್ನೆಯಾಗಿದೆ. ಪಾದರಾಯನಪುರ, ಕೆಜಿ ಹಳ್ಳಿಗಳಲ್ಲಿ ಗಲಭೆ ಸೃಷ್ಟಿಸಿದವರು ಯಾರು? ಎಂಬುದು ಯುವಶಕ್ತಿಯ ಇನ್ನೊಂದು ಪ್ರಶ್ನೆ. ಗಾಂಧಿಯನ್ನು ಕೊಂದ ಗೋಡ್ಸೆಯ ಸಂಘಟನೆಯೆಂದು ಕಳೆದ 75 ವರ್ಷಗಳಿಂದ ತಿಪ್ಪರಲಾಗ ಹಾಕುತ್ತಾ ಹೇಳುತ್ತಲೇ ಇರುವ ತಕತಕಿಥ ಕಥೆಗೆ ಯುವಕರು ಕೊಡುವ ಟಾಂಗ್ ಈ ರೀತಿ ಇದೆ. ದೇಶದ ಪರಮೋಚ್ಚ ನಾಯಕಿ ಎಂದು ಕರೆಸಿಕೊಂಡ ಇಂದಿರಾಗಾಂಧಿಯವರನ್ನು ಕೊಂದದ್ದು ಯಾರು?ಸಿಖ್ ಎಂಬ ಕಾರಣಕ್ಕೆ ಇಡೀ ಸಿಖ್ ಜನಾಂಗವನ್ನೇ ಟೀಕಿಸುತ್ತೀರಾ? ಹಾಗೆಯೇ ರಾಜೀವ್ ಗಾಂಧಿಯನ್ನು ಕೊಂದದ್ದು ಯಾರು?ತಮಿಳಿಗ ಎಂಬ ಕಾರಣಕ್ಕೆ ಇಡೀ ತಮಿಳು ಜನಾಂಗವನ್ನೇ ದ್ವೇಷಿಸುತ್ತೀರಾ? ಎಂಬುದು ಯುವಕರ ಪ್ರಶ್ನೆಯಾಗಿದೆ.

ಚುನಾವಣಾ ಸಂದರ್ಭದಲ್ಲಿ ಎರಡೂ ಪಕ್ಷಗಳ ಮುಖಂಡರಿಗೆ ಆರೆಸ್ಸೆಸ್ ಟೀಕೆಯೇ ಬಂಡವಾಳ.ಇಂತಹ ಟೀಕೆಗಳನ್ನು ಮುಸ್ಲಿಂ ಜನರನ್ನು ತಮ್ಮೆಡೆಗೆ ಸೆಳೆಯುವ ಸ್ಲೋಗನ್ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದರೆ ಇತ್ತೀಚಿನ ವರ್ಷಗಳ ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಿಸಿದಾಗ, ಈ ರೀತಿಯ ಆರೆಸ್ಸೆಸ್ ವಿರುದ್ಧದ ಟೀಕೆಗಳಿಂದ ಪಡೆಯಬಹುದಾದ ಮುಸ್ಲಿಂ ಮತಗಳ ಸಂಖ್ಯೆಗಿಂತ, 3 ಪಟ್ಟು ಹೆಚ್ಚು ಮತಗಳನ್ನು ಹಿಂದೂಗಳ ಮತಗಳಿಂದ ಕಳೆದುಕೊಳ್ಳುತ್ತಾರೆoಬುದು ಕೂಡ ಕಟುಸತ್ಯವಾಗಿದೆ. ಅದಕ್ಕೆ ಸಾಕ್ಷಿ, 120 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ 70ಕ್ಕೆ ಕುಸಿದದ್ದು. 70-80 ಸ್ಥಾನಗಳನ್ನು ಪಡೆಯುತ್ತಿದ್ದ ಜೆಡಿಎಸ್ 30 -40 ಸೀಟುಗಳಿಗೆ ಮಾತ್ರ ಸೀಮಿತವಾಗಿರುವುದು.

ಇವುಗಳಿಗೆಲ್ಲಕ್ಕಿಂತ ಹೆಚ್ಚಿನ ಚಾಲೆಂಜಿಂಗ್ ಪ್ರಶ್ನೆ ಇಲ್ಲಿದೆ. ಮುಸ್ಲಿಂ ಬಹುಸಂಖ್ಯಾತರಾಗಿರುವ ಕ್ಷೇತ್ರವೊಂದರಲ್ಲಿ ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿಯವರು ಚುನಾವಣೆಗೆ ನಿಲ್ಲಲಿ. ಎದುರಾಳಿಯಾಗಿ ಓವೈಸಿ ನಿಲ್ಲಲಿ. ಆಗ ಆ ಕ್ಷೇತ್ರದ ಮುಸ್ಲಿಂ ಜನಾಂಗ ಯಾರನ್ನು ಗೆಲ್ಲಿಸುತ್ತಾರೆ ನೋಡೋಣ ಎಂಬುದು ಯುವಕರ ಸವಾಲ್. ಒಂದು ವೇಳೆ ನಿಜಕ್ಕೂ ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿಯವರು ಗೆದ್ದು ಬಂದರೆ, ನಾವು ನಮ್ಮ ಸಂಘಟನೆಯನ್ನು ಬಿಟ್ಟು ನಿಮ್ಮ ಸೇವೆ ಮಾಡುತ್ತೇವೆ ಎಂಬುದು ಯುವಶಕ್ತಿಯ ನೇರಾನೇರ ಸವಾಲಾಗಿದೆ. ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಈ ಸವಾಲು ಸ್ವೀಕೃತಾರ್ಹವೇ? ಕಾದು ನೋಡೋಣ.

ಇದೀಗ ಒಬ್ಬ ಪತ್ರಕರ್ತನಾಗಿ ನನ್ನ ಅನಿಸಿಕೆ ಏನೆಂದರೆ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಅಧಿಕಾರವಧಿಯಲ್ಲಿ ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಿರುವವರು. ಹಾಗೆಯೇ ಮುಂದೆ ಮತ್ತೊಮ್ಮೆ ಮುಖ್ಯಮಂತ್ರಿ ಅವಕಾಶಕ್ಕಾಗಿ ಕಾಯುತ್ತಿರುವವರು. ಅದಕ್ಕಾಗಿಯೇ ಇವರ ಓಡಾಟ ಹೋರಾಟ ನಿರಂತರವಾಗಿ ಸಾಗಿದೆ. ಇದೀಗ ಈ ಇಬ್ಬರು ನಾಯಕರು ಮಾಡಬೇಕಿರುವುದು, ತಾವು ಮತ್ತೊಮ್ಮೆ ಮುಖ್ಯಮಂತ್ರಿ ಯಾಕಾಗಬೇಕು? ಎಂದು ಜನರಿಗೆ ವಿವರಣೆ ನೀಡುವುದು. ಹಾಗೂ ತಾವುಗಳು ಮುಖ್ಯಮಂತ್ರಿಯಾದರೆ ಈ ನಾಡಿಗೆ ಮಾಡಬಹುದಾದ ಯೋಜನೆ, ಯೋಚನೆಗಳೇನು? ಎಂಬುದನ್ನು ಜನರ ಮುಂದೆ ತಿಳಿಸುವುದು.ಹೀಗೆ ಮಾಡುವುದರಿಂದ ಮಾತ್ರ ನಿಮ್ಮ ಘನತೆ ಗೌರವ ಹೆಚ್ಚಾಗುತ್ತದೆ ಹಾಗೂ ಚುನಾವಣೆಗೆ ಜನರು ಮತ ನೀಡುವಾಗ ನಿಮ್ಮ ಜನಪರ ಕಾಳಜಿ ಗಣನಗೆ ಬರುತ್ತದೆಯೇ ಹೊರತು ಈ ರೀತಿಯ ಗುರಿ ಇಲ್ಲದೆಡೆಗೆ ಕಲ್ಲೊಡೆಯುವ ಕೆಟ್ಟ ಬುದ್ದಿಯಿಂದಲ್ಲ ಎಂಬುದನ್ನು ನೀವುಗಳೇ ಅರ್ಥಮಾಡಿಕೊಂಡರೆ ಒಳಿತು. ಹಾಗಾದಾಗ ಮಾತ್ರ ನೀವು ಮಾಜಿ ಮುಖ್ಯಮಂತ್ರಿಗಳು ಎಂಬ ಗೌರವ ಭಾವ ಎಲ್ಲರಲ್ಲೂ ಉಳಿಯುತ್ತದೆ. ಇಲ್ಲದಿದ್ದರೆ ಇಂಥವರೂ ನಮ್ಮನ್ನಾಳಿದರೆ? ಎಂದು ಎಲ್ಲರೂ ಪ್ರಶ್ನೆ ಕೇಳುವಂತಾಗುತ್ತದೆ. ಆಯ್ಕೆ ನಿಮ್ಮದು.

 

ವಿಶೇಷ ಲೇಖನ:ಮಣ್ಣೆ ಮೋಹನ
(M) 6360507617
[email protected]

 

ಜಿಲ್ಲೆ

ರಾಜ್ಯ

error: Content is protected !!