Friday, April 19, 2024

ಇನ್ಸ್​ಟಾಗ್ರಾಮ್​ ಚಾಟಿಂಗ್ ಜಗಳ ಕೊಲೆಯಲ್ಲಿ ಅಂತ್ಯ.

ಚನ್ನಮ್ಮನ ಕಿತ್ತೂರು: ಇನ್ಸ್​ಟಾಗ್ರಾಮ್​ನಲ್ಲಿ ಚಾಟಿಂಗ್ ಮಾಡುತ್ತಿದ್ದಾಗ ಒಂದೇ ಊರಿನ ಬಾಲಕರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ಓರ್ವ ಬಾಲಕನ ಜೀವ ತೆಗೆಯುವ ಮಟ್ಟಕ್ಕೂ ಹೋಗಿರುವ ಘಟನೆ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ ಸುಂಕದ (16) ಮೃತ ಬಾಲಕ.

ಮಲ್ಲಪ್ಪ ಹಾಗೂ ಮಲ್ಲವ್ವ ದಂಪತಿಯ ಎರಡನೇ ಮಗನಾದ ಪ್ರಜ್ವಲ್, ಈಗತಾನೇ ಕಾಲೇಜು ಮೆಟ್ಟಿಲು ಹತ್ತಿದ್ದ. ಇತ್ತೀಚೆಗೆ ತಮ್ಮದೇ ಊರಿನ ಗೆಳೆಯರ ಜೊತೆಗೆ ಇನ್ಸ್​ಟಾಗ್ರಾಮ್​ನಲ್ಲಿ ಜಗಳವಾಗಿತ್ತು. ಇದು ಕೇವಲ ವಾಗ್ವಾದಕ್ಕೆ ಸಿಮೀತವಾಗದೇ ಆತನ ಜೀವ ತೆಗೆಯುವ ಹಂತಕ್ಕೂ ಹೋಗಿದೆ.

ಮಂಗಳವಾರ ಸಾಯಂಕಾಲ 6 ಗಂಟೆ ಸುಮಾರಿಗೆ ತಮ್ಮ ಮನೆ ಮುಂದೆ ನಿಂತಿದ್ದ ಪ್ರಜ್ವಲ್ ಮೇಲೆ ಐವರು ಬಾಲಕರ ತಂಡ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜ್ವಲ್​ನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಉಸಿರು ಚೆಲ್ಲಿದ್ದಾನೆ.

ಈ ಕೃತ್ಯದಲ್ಲಿ ಭಾಗಿಯಾದ ವಿಶಾಲ ಕಲ್ಲವಡ್ಡರ (18) ಸೇರಿದಂತೆ 4 ಬಾಲಾಪರಾಧಿಗಳನ್ನು ಕಿತ್ತೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಘಟನೆ ಬಗ್ಗೆ ಮೃತ ಪ್ರಜ್ವಲ್ ಸಂಬಂಧಿಕ ಬಸಪ್ಪ ದೊಡಮನಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವದ ಮಹಾಪ್ರಸಾದವಿತ್ತು‌. ಈ ವೇಳೆ ಕೆಲವರು ಏಕಾಏಕಿ ಬಂದು ಹೊಡೆದಿದ್ದಾರೆ. ಈ ಹುಡುಗರ ನಡುವೆ ಏನು ಗಲಾಟೆ ಇತ್ತೋ ಗೊತ್ತಿಲ್ಲ. ಸಣ್ಣಪುಟ್ಟ ಜಗಳ ಇದ್ದರೂ ಇರಬಹುದು. ಏನೇ ಇದ್ದರೂ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಕೊಲೆ ಮಾಡೋ ಹಂತಕ್ಕೆ ಹೋಗಬಾರದಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಈ ರೀತಿ ಮಚ್ಚು ತಗೊಂಡು ಹೊಡೆದಾಡಿದವರು ಮುಂದೆ ಏನಾಗಬಹುದು ಎಂದರು.

ಮೃತ ಬಾಲಕನ ಮಾವ ಬಸಪ್ಪ ಹಣಮಂತಪ್ಪ ದುಬ್ಬನಮರಡಿ ಮಾತನಾಡಿ, ಅಳಿಯನನ್ನು ಕಳೆದುಕೊಂಡು ಹೊಟ್ಟೆ ಉರಿಯುತ್ತಿದೆ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಕಣ್ಣೀರು ಹಾಕಿದರು. 

 

ಜಿಲ್ಲೆ

ರಾಜ್ಯ

error: Content is protected !!