Wednesday, September 18, 2024

ಶಾಸಕ ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಕೋರಿದ್ದ ಅರ್ಜಿ ವಜಾ.

ಬೆಂಗಳೂರು(ಸೆ​​.23): ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ಶಾಸಕ ವಿನಯ್ ಕುಲಕರ್ಣಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ಶನಿವಾರ ಹೈಕೋರ್ಟ್ ವಜಾಗೊಳಿಸಿದೆ. ನ್ಯಾ. ಎಂ. ನಾಗಪ್ರಸನ್ನರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಶಾಸಕನಾಗಿರುವ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿಗೆ ಅವಕಾಶ ಕೋರಿದ್ದರು. ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದಾಗಲೂ ಷರತ್ತು ಸಡಿಲಿಸಿಲ್ಲ. ಚುನಾವಣೆ ವೇಳೆಯೂ ಕ್ಷೇತ್ರ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ.

ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಗುರುತರ ಆರೋಪ ಶಾಸಕ ವಿನಯ್ ಕುಲಕರ್ಣಿ ಮೇಲಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಸಿಬಿಐ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದರು.

ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯನಾಗಿದ್ದ ಯೋಗೀಶ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಬರಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಕಾರಣಗಳನ್ನು ನಮೂದಿಸಿ ಇತ್ತೀಚಿಗೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಅಲ್ಲದೇ ಈ ಬಗ್ಗೆ ಕೆಳಹಂತದ ನ್ಯಾಯಾಲಯದಲ್ಲಿಯೇ ಅನುಮತಿ ಕೇಳಿ ಅಂತಾನೂ ಹೇಳಿತ್ತು.

ಇದೇ ಕಾರಣಕ್ಕೆ ಕಳೆದ ವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿನಯ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಇದೇ ಕಾರಣಕ್ಕೆ ವಿನಯ ಕುಲಕರ್ಣಿ ಹೈಕೋರ್ಟ್​ಗೆ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಅವರ ಮನವಿಯನ್ನು ತಳ್ಳಿ ಹಾಕಿ, ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ವಿನಯ ಕುಲಕರ್ಣಿ ಚುನಾವಣೆಗೆ ಕ್ಷೇತ್ರಕ್ಕೆ ಬಾರದಂತಾಗಿತ್ತು.

ಪ್ರಕರಣದ ಹಿನ್ನಲೆ?

ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ್ ಅವರನ್ನು ಜೂನ್ 2016 ರಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2020 ರಲ್ಲಿ ಕಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ವೇಳೆ ಧಾರವಾಡಕ್ಕೆ ತೆರಳಿದರೆ ಜಾಮೀನು ರದ್ಧಪಡಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು.

 

 

 

ಕೃಪೆ:ಟಿವಿ9.

ಜಿಲ್ಲೆ

ರಾಜ್ಯ

error: Content is protected !!