Sunday, September 8, 2024

ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ: ಶಾಸಕರ ಸಂಧಾನ ವಿಫಲ್.

ಖಾನಾಪುರ : ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದಲ್ಲಿ ಶುಕ್ರವಾರ ಮರಾಠಾ ಮತ್ತು ಪರಿಶಿಷ್ಟ ಸಮುದಾಯದ ಯುವಕರ ಮಧ್ಯೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮಾಡಲಾಗಿದೆ. ಕೆಲವರಿಗೆ ಗಾಯಗಳಾಗಿದ್ದು, ಪೊಲೀಸರು ಲಾಠಿ ಪ‍್ರಹಾರ ಮಾಡಿದ್ದಾರೆ. ಘಟನೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

‘ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಗುಂಪುಗಳ ತಲಾ 40 ಯುವಕರ ವಿರುದ್ಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಗಣೇಶ ಚತುರ್ಥಿ ಪ್ರಯುಕ್ತ ಪರಿಶಿಷ್ಟ ಸಮುದಾಯದ ಯುವಕರು ಬುಧವಾರ (ಸೆಪ್ಟೆಂಬರ್ 20) ಹುಂದರಿ ಹಬ್ಬ (ಇಲಿ ಹಬ್ಬ) ಆಚರಿಸಿದ ಬಳಿಕ, ರಾತ್ರಿ ಮರಾಠಾ ಸಮುದಾಯದ ಸ್ಮಶಾನ ಭೂಮಿ ಬಳಿ ಗುಂಪಾಗಿ ಸೇರಿದ್ದರು. ಸ್ಥಳಕ್ಕೆ ಬಂದ ಮರಾಠಾ ಯುವಕರು ‘ನಮ್ಮ ಸ್ಮಶಾನದ ಬಳಿ ಏಕೆ ನಿಂತಿದ್ದೀರಿ’ ಎಂದು ತಕರಾರು ತೆಗೆದರು. ಇದರಿಂದ ಎರಡೂ ಕಡೆಯ ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ ಪರಿಶಿಷ್ಟ ಸಮುದಾಯದ ಯುವಕರು ಹಲಗೆ ಬಾರಿಸುತ್ತ ಮರಾಠಾ ಯುವಕರ ವಿರುದ್ಧ ಘೋಷಣೆ ಕೂಗಿದರು. ಜಿಲ್ಲೆಯ ವಿವಿಧೆಡೆಯಿಂದ ಹಲವರು ಬಂದು ಸೇರಿದರು. ಇದಕ್ಕೆ ವಿರುದ್ಧವಾಗಿ ಮರಾಠಾ ಸಮುದಾಯದವರೂ ನೂರಾರು ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶನಕ್ಕೆ ಮುಂದಾದರು.

ವಿಷಯ ತಿಳಿದ ಶಾಸಕ ವಿಠ್ಠಲ ಹಲಗೇಕರ, ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ಎರಡೂ ಗುಂಪಿನ ಮುಖಂಡರ ಜೊತೆ ಮಾತುಕತೆ ನಡೆಸಿದರು. ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸುವಾಗಲೇ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಆರಂಭಿಸಿದರು. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

‘ಲಾಠಿ ಬೀಸಿದ ಗುಂಪುಗಳನ್ನು ಚದುರಿಸಬೇಕಾಯಿತು. ಶಾಸಕರ ರಕ್ಷಣೆಗೆ ಪೊಲೀಸರು ಮುಂದಾದಾಗ, ಅವರನ್ನು ಎರಡೂ ಕಡೆಯವರು ಅತ್ತಿತ್ತ ಎಳೆದಾಡಿದರು. ಈ ವೇಳೆ ಶಾಸಕರಿಗೆ ಮೈಕೈ ನೋವಾಯಿತು. ಪ್ರಾಥಮಿಕ ಚಿಕಿತ್ಸೆ ಪಡೆದ ಅವರು, ಚೇತರಿಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಪರಿಸ್ಥಿತಿ ಹತೋಟಿಗೆ ತಂದರು. ಎಲ್ಲೆಡೆ ಬಿಗಿ ಬಂಬೋಬಸ್ತ್ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ತೋಪಿನಕಟ್ಟಿಯಲ್ಲಿ ಸಣ್ಣ ಕಾರಣಕ್ಕೆ ನಡೆದ ಘಟನೆಯನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಹುಟ್ಟಿ ಬೆಳೆದ ಊರಿದು. ಎಲ್ಲ ಸಮಾಜದವರು ಸಹಬಾಳ್ವೆ ನಡೆಸುತ್ತಿದ್ದಾರೆ. ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡಬಾರದು. ಶಾಂತವಾಗಿದ್ದ ನನ್ನ ಊರಲ್ಲಿ ಈಗ ದ್ವೇಷ ಭುಗಿಲೆದ್ದಿದೆ’ ಎಂದು ಶಾಸಕ ವಿಠ್ಠಲ ಹಲಗೇಕರ ಪ್ರತಿಕ್ರಿಯಿಸಿದರು.‘ನನ್ನ ಮಾತಿಗೆ ಬೆಲೆ ಕೊಟ್ಟು ಮರಾಠಾ ಸಮುದಾಯದ ಮೌನವಾಗಿದ್ದಾರೆ. ಪರಿಶಿಷ್ಟರು ಹೋರಾಟ ಮುಂದುವರಿಸಿದ್ದಾರೆ. ಶಾಂತಿ ಕಾಪಾಡಲು ಪ್ರಯತ್ನಿಸಲಾಗಿದೆ. ಉಳಿದದ್ದನ್ನು ಪೊಲೀಸ್ ಇಲಾಖೆ ಗಮನಿಸಲಿದೆ’ ಎಂದರು

ಜಿಲ್ಲೆ

ರಾಜ್ಯ

error: Content is protected !!