Sunday, September 8, 2024

ಉಗ್ರರ ಜತೆ ನಂಟು ಹೊಂದಿದ ಜಮ್ಮು ಮತ್ತು ಕಾಶ್ಮೀರದ ಡಿಎಸ್​ಪಿ ಪೊಲೀಸ್ ಬಂಧನ.

ಶ್ರೀನಗರ: ಉಗ್ರರ ಜತೆ ನಂಟು ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಡಿಎಸ್​ಪಿ ಆಗಿರುವ ಶೇಖ್ ಆದಿಲ್ ಮುಷ್ತಾಕ್ ಭಯೋತ್ಪಾದಕರಿಗೆ ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ, ಜತೆಗೆ ಅವರಿಂದ 5 ಲಕ್ಷ ರೂ ಹಣ ಪಡೆದಿರುವ ಆರೋಪವಿದೆ. ಆದಿಲ್​ ಅವರನ್ನು ಶ್ರೀನಗರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಜುಲೈನಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರನ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಆರೋಪಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಎನ್ನಲಾಗಿದೆ. ಹಿರಿಯ ಅಧಿಕಾರಿಗಳ ಪ್ರಕಾರ ಆದಿಲ್ ಮುಷ್ತಾಕ್ ಟೆಲಿಗ್ರಾಂ ಆ್ಯಪ್​ನಲ್ಲಿ ಆರೋಪಿಗಳೊಂದಿಗೆ ಮಾತನಾಡುತ್ತಿದ್ದ, ಸುಮಾರು 40 ಕರೆಗಳನ್ನು ಈತ ಮಾಡಿದ್ದ ಎನ್ನಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳುವುದು, ಕಾನೂನು ನೆರವು ಪಡೆಯುವುದು ಹೇಗೆ ಎನ್ನುವ ಮಾರ್ಗದರ್ಶನ ನೀಡುತ್ತಿದ್ದ ಎನ್ನಲಾಗಿದೆ.

ಆರೋಪಿಯಿಂದ ಆದಿಲ್ ಮುಷ್ತಾಕ್ 5 ಲಕ್ಷ ರೂ. ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಹಣಕಾಸು ನಿರ್ವಹಣೆಗಾಗಿ ಸೋಪೋರ್‌ನಲ್ಲಿ ನಕಲಿ ದಾಖಲೆಗಳ ಮೇಲೆ ಬ್ಯಾಂಕ್ ಖಾತೆ ತೆರೆದಿದ್ದ ಮುಝಾಮಿಲ್ ಜಹೂರ್‌ನೊಂದಿಗೆ ನಿಕಟ ಸಂಪರ್ಕದಲ್ಲಿದ್ದರು.

ಫೆಬ್ರವರಿಯಲ್ಲಿ ಶ್ರೀನಗರ ಪೊಲೀಸರು ಮೂವರು ಲಷ್ಕರ್ ಕಾರ್ಯಕರ್ತರನ್ನು ಬಂಧಿಸಿ ಅವರಿಂದ 31 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದರು. ಬಂಧಿತ ಅಧಿಕಾರಿಯ ವಿರುದ್ಧ ಈಗ ಹಲವಾರು ಮಂದಿ ದೂರು ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ವಿರುದ್ಧ ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ದೂರುಗಳೂ ಇವೆ. ಅಂತಹ ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಉನ್ನತ ಅಧಿಕಾರಿಯೊಬ್ಬರನ್ನು ಬಂಧಿಸಿರುವುದು ಇದು ಎರಡನೇ ಪ್ರಕರಣವಾಗಿದೆ. 2020 ರಲ್ಲಿ, ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಆಶ್ರಯ ನೀಡಿ ದೆಹಲಿಗೆ ಕಳುಹಿಸಿದ ಆರೋಪದ ಮೇಲೆ ಮತ್ತೊಬ್ಬ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.

 

 

 

ಕೃಪೆ:ಟಿವಿ9.

ಜಿಲ್ಲೆ

ರಾಜ್ಯ

error: Content is protected !!