Tuesday, September 17, 2024

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮೊಬೈಲ್‌ ಬಳಕೆ ವಿಚಾರಕ್ಕೆ ಕೈದಿಗಳ ನಡುವೆ ಮಾರಾಮಾರಿ!

ಬೆಳಗಾವಿ(ಸೆ.19): ತಿಂಗಳ ಹಿಂದೆಯಷ್ಟೇ ಇಬ್ಬರು ಕೈದಿಗಳ ನಡುವೆ ಜಗಳ ನಡೆದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಗೃಹದಲ್ಲಿ  ಮತ್ತೆ ಮಾರಾಮಾರಿ ನಡೆದಿದೆ. ಮೊಬೈಲ್‌ ಫೋನ್‌ ಬಳಕೆ ವಿಚಾರಕ್ಕೆ ಇಬ್ಬರು ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ವಿಚರಣಾಧೀನ ಕೈದಿ ವಾಸುದೇವ ನಾಯ್ಕ್ (34) ಗಾಯಗೊಂಡಿದ್ದಾನೆ. ಈತನಿಗೆ ಹಿಂಡಲಗಾ ಜೈಲಿನರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಳ್ಳತನ ಪ್ರಕರಣದಲ್ಲಿ ವಾಸುದೇವ ಎಂಟು ತಿಂಗಳ ಹಿಂದೆ ಜೈಲು ಸೇರಿದ್ದ. ಈತನಿದ್ದ ಸೆಲ್​ನಲ್ಲಿ ಮತ್ತೊಬ್ಬ ಕೈದಿ ಮೊಬೈಲ್ ಬಳಕೆ ಮಾಡುತ್ತಿದ್ದ. ಇದನ್ನ ಪ್ರಶ್ನಿಸಿದ್ದಕ್ಕೆ ವಾಸುದೇವ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ, ಜೈಲಿನಲ್ಲಿರುವ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಅಂತಾ ವಾಸುದೇವ ತಾಯಿ ಸುನಂದಾ ಆರೋಪ ಮಾಡಿದ್ದಾರೆ.

ಗಾಯಾಳು ಮಗನನ್ನ ನೋಡಲು ರಾಯಬಾಗ ತಾಲೂಕಿನ ಖಣದಾಳದಿಂದ ಕುಟುಂಬಸ್ಥರು ಆಗಮಿಸಿದ್ದಾರೆ. ಈ ವೇಳೆ ಹಣ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಮಗನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಸುನಂದಾ ಆರೋಪಿಸಿದ್ದಾರೆ.

ಗಲಾಟೆ ಸಂಬಂಧ ಕಾರಗೃಹಕ್ಕೆ ದಿಢೀರ್ ಭೇಟಿ ನೀಡಿದ ಬೆಳಗಾವಿಯ 1ನೇ ಜೆಎಂಎಫ್‌ಸಿ ನ್ಯಾಯಾಧೀಶ ಮಹದೇವ್, ಮಾರಾಮಾರಿ ವಿಚಾರ ತಿಳಿದ ಹಿನ್ನೆಲೆ ದಿಢೀರ್ ಭೇಟಿ ನೀಡಿದ್ದೇನೆ. ಗಲಾಟೆ ನಡೆದಿರುವುದು ನಿಜ. ಮೊಬೈಲ್ ವಿಚಾರವಾಗಿ ಜಗಳ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಕೈದಿಯೂ ಶೌಚಾಲಯಕ್ಕೆ ಹೋಗಿ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಇದರ ಜೊತೆಗೆ ಸೆಲ್​ನಲ್ಲಿದ್ದ ಕೈದಿ ಕೂಡ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಎಂದು ಆತನೇ ಹೇಳಿದ್ದಾಗಿ ತಿಳಿಸಿದರು.

ಜೈಲಿನಲ್ಲಿ ಎರಡು ರೀತಿಯ ಸಿಬ್ಬಂದಿ ಇರುತ್ತಾರೆ. ಖಾಯಂ ಮತ್ತು ಔಟ್ ಸೋರ್ಸ್​ ಸಿಬ್ಬಂದಿ. ಈ ಪೈಕಿ ಔಟ್ ಸೋರ್ಸ್ ಸಿಬ್ಬಂದಿಯನ್ನು ಖಾಯಂ ಮಾಡಲು ಆಗುವುದಿಲ್ಲ. ಇವರ ಮುಖಾಂತರ ಜೈಲಿನೊಳಗೆ ಕೆಲವೊಂದು ವಸ್ತುಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದೇನೆ ಎಂದರು.

ಕಾರಾಗೃಹದಲ್ಲಿ ಪದೇಪದೇ ಜಗಳ ನಡೆಯಲು ಹಲವಾರು ಅಕ್ರಮ ಚಟುವಟಿಕೆಗಳು ಕಾರಣ ಎನ್ನಲಾಗುತ್ತಿದೆ. ಅಲ್ಲದೆ, ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗಷ್ಟೇ ಜೈಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಇದೇ ಜೈಲಿನಿಂದ ಕೈದಿಯೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ರೂ.100 ಕೋಟಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಪ್ರಕರಣ ನಡೆದಿತ್ತು.

 

 

 

 

ಕೃಪೆ:ಟಿವಿ9

ಜಿಲ್ಲೆ

ರಾಜ್ಯ

error: Content is protected !!