Tuesday, May 28, 2024

ವಿದ್ಯಾರ್ಥಿನಿಯರು ಕೈ ಕುಯ್ದುಕೊಂಡ ಪ್ರಕರಣ! ಶಾಲೆ, ಪೋಷಕರು, ಪೊಲೀಸರು ಮಾತ್ರವಲ್ಲದೇ ಇಡೀ ಜಿಲ್ಲಾಡಳಿತವೇ ತಲೆ ಕೆಡಿಸಿಕೊಂಡಿದೆ.

ಉತ್ತರ ಕನ್ನಡ: ಜಿಲ್ಲೆಯ‌ ದಾಂಡೇಲಿಯ ಖಾಸಗಿ (ಜನತಾ ವಿದ್ಯಾಲಯ)ಶಾಲೆಯಲ್ಲಿ ಗಂಭೀರ ಹಾಗೂ ಕುತೂಹಲಕಾರಿ ಘಟನೆ ನಡೆದಿದ್ದು, ಪೋಷಕರಲ್ಲಿ ಆತಂಕದ ಸ್ಥಿತಿ ಮನೆ ಮಾಡಿದೆ. ಹೈಸ್ಕೂಲಿನ ಸುಮಾರು 14 ವಿದ್ಯಾರ್ಥಿನಿಯರು ತಮ್ಮ ಎಡಕೈಯನ್ನು ಸಾಕಷ್ಟು ಬಾರಿ ಕುಯ್ದುಕೊಂಡಿದ್ದು, ಯಾಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದು ಶಾಲೆ, ಪೋಷಕರು, ಪೊಲೀಸರು ಮಾತ್ರವಲ್ಲದೇ ಇಡೀ ಜಿಲ್ಲಾಡಳಿತವೇ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.‌ 

ಶಾಲಾ ವಿದ್ಯಾರ್ಥಿನಿಯರಿಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯ ಜನರ ಗಮನವನ್ನು ದಾಂಡೇಲಿಯ ಖಾಸಗಿ (ಜನತಾ ವಿದ್ಯಾಲಯ) ಶಾಲೆಯೊಂದು ಸೆಳೆದಿದ್ದು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು, ಪೊಲೀಸರು, ಶಿಕ್ಷಣ ಇಲಾಖೆ ಸೇರಿದಂತೆ ಇಡೀ ಜಿಲ್ಲಾಡಳಿತವೇ ತಲೆ ಕೆಡಿಸಿಕೊಂಡಿದೆ. ಹೌದು, ದಾಂಡೇಲಿಯ ಖಾಸಗಿ (ಜನತಾ ವಿದ್ಯಾಲಯ) ಶಾಲೆಯ ಸುಮಾರು 14 ವಿದ್ಯಾರ್ಥಿನಿಯರು ಎಡಗೈಯ ತೋಳಿನ ಕೆಳಭಾಗದಲ್ಲಿ ಕುಯ್ದುಕೊಂಡಿದ್ದು, ಒಬ್ಬೊಬ್ಬ ಪೋಷಕರು ಶಾಲೆಗೆ ಬಂದು ಪ್ರಶ್ನಿಸಿ ವಿಚಾರ ವೈರಲ್ ಆದಾಗ ಇಷ್ಟೊಂದು ವಿದ್ಯಾರ್ಥಿನಿಯರು ಕೈ ಕುಯ್ದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. 

ವಿದ್ಯಾರ್ಥಿನಿಯರ ಕೃತ್ಯ ಕಂಡು ಆತಂಕಗೊಂಡಿದ್ದ ಪೋಷಕರು, ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಲ್ಲದೇ, ದಾಂಡೇಲಿ ಪೊಲೀಸ್ ಠಾಣಾಧಿಕಾರಿಯ ಸಮ್ಮುಖದಲ್ಲೇ ಮುಖ್ಯೋಪಾಧ್ಯಾಯರನ್ನು ಪೋಷಕರು ಪ್ರಶ್ನಿಸಿದ್ದರು. ಈ ವೇಳೆ ಪೋಷಕರ ಎದುರು ಮಕ್ಕಳನ್ನು ಕರೆಯಿಸಿದ ಶಾಲಾ ಮುಖ್ಯೋಪಾಧ್ಯಾಯರು ಅವರನ್ನು  ಪ್ರಶ್ನಿಸುವಾಗಲೂ ಒಬ್ಬೊಬ್ಬ ವಿದ್ಯಾರ್ಥಿನಿಯಿಂದ ಒಂದೊಂದು ಸಬೂಬು ನೀಡಲಾರಂಭಿಸಿದ್ದರು. ಕೆಲವು ವಿದ್ಯಾರ್ಥಿನಿಯರು ತಾನು ಟೆನ್ಶನ್‌ನಲ್ಲಿ ಹಾಗೆ ಮಾಡಿಕೊಂಡಿದ್ದೆ ಅಂದ್ರೆ, ಇನ್ನು ಕೆಲವರು ಮುಳ್ಳು ತಾಗಿದ್ದು, ಬಿದ್ದು ಗಾಯವಾಗಿದ್ದು ಅಂತಾ ಸುಳ್ಳು ಹೇಳಲಾರಂಭಿಸಿದ್ದರು. 

ಆದರೂ, ಪೋಷಕರು, ಪೊಲೀಸರು, ಮುಖ್ಯೋಪಾಧ್ಯಾಯರು ಮತ್ತೆ ಮತ್ತೆ ಪ್ರಶ್ನಿಸಿದರೂ ವಿದ್ಯಾರ್ಥಿನಿಯರ ಸತ್ಯ ಮಾತ್ರ. ಹೊರಬಿದ್ದಿರಲಿಲ್ಲ.‌ ಪ್ರಕರಣದಿಂದ ಪೋಷಕರು ಆತಂಕಿತರಾಗಿದ್ದು, ನೈಜ ವಿಚಾರ ಹೊರಕ್ಕೆ ತರಲೇಬೇಕೆಂಬ ಉದ್ದೇಶದಿಂದ ಇದೀಗ ಶಿಕ್ಷಣ ಇಲಾಖೆ ಮನಶಾಸ್ತ್ರಜ್ಞರ ಮೊರೆ‌ ಹೋಗಲು ನಿರ್ಧರಿಸಿದೆ. ದಾಂಡೇಲಿಯ ಪ್ರಕರಣ ಸಂಬಂಧಿಸಿ ಮನಶಾಸ್ತ್ರಜ್ಞರು ನೀಡಿದ ಹೇಳಿಕೆ ಪ್ರಕಾರ, ವಿದ್ಯಾರ್ಥಿನಿಯರು ಮನೆಯ ಅಥವಾ ಶಾಲೆಯ ವಿಚಾರಕ್ಕೆ ಮನನೊಂದು ಪ್ರತಿಭಟಿಸಲು, ಇಲ್ಲವೇ ಯಾವುದೋ ಗೇಮಿಂಗ್‌ನಲ್ಲಿ ಭಾಗಿಯಾಗಿ, ಅಥವಾ ಯಾವುದೋ ದೌರ್ಜನ್ಯದಿಂದ ಇಂತಹ ಕೃತ್ಯಗಳನ್ನು ಎಸಗಿದ್ದಿರಬಹುದು. 

ಒಬ್ಬರನ್ನು ನೋಡಿ ಉಳಿದ ವಿದ್ಯಾರ್ಥಿನಿಯರು ಈ ರೀತಿಯ ಕೆಲಸ ಮಾಡಿಕೊಂಡಿರಬಹುದು. ಇದು ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿನಿಯರ ಜತೆ ಕೌನ್ಸಿಲಿಂಗ್ ನಡೆಸಿ ಸತ್ಯ ವಿಚಾರ ಹೊರತೆಗೆಯಬೇಕಿದೆ ಅಂತಾರೆ ಮನಶಾಸ್ತ್ರಜ್ಞರು. ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ದಾಂಡೇಲಿಯಲ್ಲಿ ವಿದ್ಯಾರ್ಥಿನಿಯರು ಏತಕ್ಕಾಗಿ ಕೈ ಕುಯ್ದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯವರಿಗೆ ತನಿಖೆ ಮಾಡಲು ತಿಳಿಸಿದ್ದೇವೆ.‌ ಶಾಲೆಯಲ್ಲಿ ತೊಂದರೆ ಇದೆಯೇ ಎನ್ನುವ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಕೌನ್ಸಲಿಂಗ್ ಮಾಡಲು ತಿಳಿಸಲಾಗಿದೆ.‌

ಕೌನ್ಸಲಿಂಗ್ ನಂತರ ಮಕ್ಕಳು ಏತಕ್ಕಾಗಿ ಕೈ ಕೊಯ್ದುಕೊಂಡಿರುವ ಬಗ್ಗೆ ಮಾಹಿತಿ ಸಿಗಲಿದೆ.‌ ಮಕ್ಕಳಿಗೆ ತೊಂದರೆ ಆಗದಂತೆ ಕೌನ್ಸಲಿಂಗ್ ಮಾಡಿಸಲಾಗುವುದು. ಮಕ್ಕಳು ಹೆದರಿಕೊಂಡು ಘಟನೆಗೆ ಕಾರಣ ಏನೆಂದು ಹೇಳುತ್ತಿಲ್ಲ ಅನಿಸುತ್ತಿದೆ. ಮಕ್ಕಳು ಯಾವುದೇ ಸಮಸ್ಯೆ ಇರಲಿ, ಇಂತಹ ವರ್ತನೆ ಮುಂದಾಗಬೇಡಿ ಎಂದು ಜಿಲ್ಲಾಧಿಕಾರಿ ಜಿಲ್ಲೆಯ ಮಕ್ಕಳಲ್ಲಿ ವಿನಂತಿಸಿಕೊಂಡಿದ್ದಾರೆ.  ಒಟ್ಟಿನಲ್ಲಿ ದಾಂಡೇಲಿಯ ಶಾಲಾ ವಿದ್ಯಾರ್ಥಿನಿಯರು ಕೈಕುಯ್ದುಕೊಂಡಿರುವ ಪ್ರಕರಣ ಎಲ್ಲರ ನಿದ್ದೆಗೆಡಿಸಿದಂತೂ ಸತ್ಯವಾಗಿದ್ದು, ಶಾಲಾ ಒತ್ತಡದಿಂದಲೋ, ಮನೆಯ ಒತ್ತಡದಿಂದಲೋ, ಯಾವುದೇ ದೌರ್ಜನ್ಯದಿಂದ ಅಥವಾ ಗೇಮ್ಸ್ ಚಟದಿಂದ ವಿದ್ಯಾರ್ಥಿನಿಯರು ಈ ಕೃತ್ಯ ನಡೆಸಿದ್ದಾರೆಯೇ ಎಂಬುದು ವಿದ್ಯಾರ್ಥಿನಿಯರ ಕೌನ್ಸಿಲಿಂಗ್ ಬಳಿಕವಷ್ಟೇ ತಿಳಿದುಬರಬೇಕಿದೆ.‌

ಅಷ್ಟಕ್ಕೂ ವಿದ್ಯಾರ್ಥಿನಿಯರು ಈ ಕೃತ್ಯ ಎಸಗಿದ್ದಾದ್ರೂ ಯಾಕೆ ಅನ್ನುವುದನ್ನು ಕಾದುನೋಡಬೇಕಾಗಿದೆ.

 

 

 

 

ಕೃಪೆ:ಸುವರ್ಣಾ

ಜಿಲ್ಲೆ

ರಾಜ್ಯ

error: Content is protected !!