Tuesday, June 18, 2024

ಸಿದ್ದರಾಮಯ್ಯನವರನ್ನು ಕಾಡುತ್ತಿರುವ ಅತೃಪ್ತ ಆತ್ಮಗಳು

ಕೊಪ್ಪಳ: ಕಳೆದ ಕೆಲವು ದಿನಗಳಿಂದ ಇವರಿಬ್ಬರನ್ನೂ ಗಮನಿಸುತ್ತಿದ್ದೇನೆ, ಇಬ್ಬರಲ್ಲಿಯೂ ಕಂಡುಬರುತ್ತಿರುವ ಲಕ್ಷಣ ಒಂದೇ-

ಅಧಿಕಾರದ ಹಪಾಹಪಿ:

ಸಚಿವನಾಗಲು ಬಯಸುವುದು ತಪ್ಪೇನಲ್ಲ. ಅಂತಹದೊಂದು ಹುದ್ದೆಗೆ ಇವರಿಬ್ಬರೂ ಅರ್ಹರೇ. ರಾಜಕೀಯದ ಮೊಗಸಾಲೆಯಲ್ಲಿ ಇಬ್ಬರೂ ಸಾಕಷ್ಟು ಪ್ರಭಾವಿಗಳೂ ಹಾಗೂ ಪಳಗಿದವರೇ ಆಗಿದ್ದಾರೆ.

ಆದರೆ, ಸಂದರ್ಭಗಳು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವಂತೆ ಇರುವುದಿಲ್ಲ. ಕೆಲವೊಮ್ಮೆ ಅರ್ಹ ವ್ಯಕ್ತಿಗಳನ್ನು ಕೈಬಿಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇನ್ನು ಬಹುತೇಕ ಸಂದರ್ಭಗಳಲ್ಲಿ, ತಮಗೆ ಅಪ್ರಿಯರಾದವರನ್ನು, ಕಿರಿಕಿರಿ ಉಂಟು ಮಾಡುವವರನ್ನು, ಅವರೆಷ್ಟೇ ಅರ್ಹರಾಗಿದ್ದರೂ, ದೂರ ಇಡಲಾಗುತ್ತದೆ. ರಾಜಕೀಯ ಇರೋದೇ ಹೀಗೆ.

ಬಿ.ಕೆ. ಹರಿಪ್ರಸಾದ್‌ ಅವರು ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ಪಕ್ಷದಲ್ಲಿ ಹರಿಪ್ರಸಾದ್ ಅವರು ಸಿದ್ದರಾಮಯ್ಯನವರಿಗಿಂತಲೂ ಹಳಬರು, ತಮ್ಮ ಬದುಕಿನ ಮುಕ್ಕಾಲು ಭಾಗವನ್ನು ದಿಲ್ಲಿಯಲ್ಲಿ ಹೈಕಮಾಂಡ್ ಜೊತೆ ಕಳೆದಿರುವ ಹರಿಪ್ರಸಾದ್‌ ಅವರು ಇಂದಿರಾ ಗಾಂಧಿ-ಸಂಜಯ್ ಗಾಂಧಿಯವರಿಂದ ಹಿಡಿದು ಸೋನಿಯಾ-ರಾಹುಲ್‌ವರೆಗೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಆಪ್ತವಲಯದಲ್ಲಿದ್ದವರು. ‌

ಈ ಕಾರಣದಿಂದಾಗಿಯೇ ರಾಜ್ಯದ ಯಾವುದೇ ಹಿಂದುಳಿದ ವರ್ಗದ ನಾಯಕರಿಗೆ ಕೊಡದಷ್ಟು ಅವಕಾಶ ಮತ್ತು ಸ್ಥಾನಮಾನವನ್ನು ಪಕ್ಷ ಹರಿಪ್ರಸಾದ್ ಅವರಿಗೆ ನೀಡಿದೆ. ಎಐಸಿಸಿ ಆಯಕಟ್ಟಿನ ಜಾಗದಲ್ಲಿ ದೀರ್ಘಕಾಲ ಸ್ಥಾನ ಹೊಂದಿದ್ದ ಹರಿಪ್ರಸಾದ್ ಹದಿನೆಂಟು ವರ್ಷ ರಾಜ್ಯಸಭೆಯಲ್ಲಿದ್ದರು. ಈಗ ವಿಧಾನಪರಿಷತ್ ಸದಸ್ಯರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‌ಉಸ್ತುವಾರಿಗಳಾಗಿರುವ ರಾಂಪಾಲ್ ಮಾತ್ರವಲ್ಲ ಸುರ್ಜೆವಾಲಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರೂ ಹರಿಪ್ರಸಾದ್ ಅವರಿಗೆ ಆತ್ಮೀಯರು.

ಸಿದ್ದರಾಮಯ್ಯನವರೊಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಹರಿಪ್ರಸಾದ್ ಅವರಿಗೆ ಆಪ್ತರೇ. ಅದೇಕೋ ಗೊತ್ತಿಲ್ಲ, ಪ್ರಾರಂಭದಿಂದಲೂ ಸಿದ್ದರಾಮಯ್ಯನವರಿಂದ ಅಂತರ ಕಾಪಾಡಿಕೊಂಡು ಬಂದಿರುವ ಹರಿಪ್ರಸಾದ್ ಎಂದಿಗೂ ಅವರ ಆತ್ಮೀಯ ವಲಯದಲ್ಲಿ ಇರಲೇ ಇಲ್ಲ.

ಹೀಗಾಗಿ, ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯನವರು ಮುಂದಾಗಲಿಲ್ಲ. ಅದು ಅವರ ಸ್ವಾತಂತ್ರ್ಯ ಮತ್ತು ವಿವೇಚನೆ. ಅದನ್ನು ಪ್ರತಿಭಟಿಸಬಾರದು ಅಂತ ಏನೂ ಇಲ್ಲ. ಆದರೆ, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಬಾರದು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಮುಖ್ಯಮಂತ್ರಿಯಾಗಿ ಅವರಿಗೆ ಇದ್ದೇ ಇದೆ.

ಇವೇ ಮಾತುಗಳನ್ನು ಯಲಬುರ್ಗಾ ಕ್ಷೇತ್ರದ ಹಾಲಿ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಕುರಿತು ಹೇಳಬಹುದು. ಹರಿಪ್ರಸಾದ್‌ ಅವರಷ್ಟಲ್ಲದಿದ್ದರೂ, ತಕ್ಕಮಟ್ಟಿಗೆ ರಾಯರೆಡ್ಡಿ ಕೂಡಾ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅನುಭವಿಸಿದವರೇ. ಹಿಂದೆ ರಾಮಕೃಷ್ಣ ಹೆಗಡೆ ಅವರಿಗೆ ನಿಕಟರಾಗಿ, ಸಚಿವ ಸ್ಥಾನವನ್ನೂ ಗಿಟ್ಟಿಸಿದ್ದ ರಾಯರೆಡ್ಡಿಯವರು ನಂತರ ಅವಕಾಶ ಅರಸಿಕೊಂಡು ಕಾಂಗ್ರೆಸ್‌ ಪಕ್ಷ ಸೇರಿಕೊಂಡರು. ಇಲ್ಲಿಯೂ ಸಚಿವ, ಸಂಸದ ಸ್ಥಾನಗಳನ್ನು ಪಡೆದರು. ರಾಜಕೀಯದಲ್ಲಿ ಅವರು ಪ್ರಭಾವಿಗಳಾಗುತ್ತ ಹೋದರೂ, ಡಾ. ಡಿಎಂ. ನಂಜುಂಡಪ್ಪ ಕಾಲದಿಂದಲೂ ಇದ್ದ ರಾಜ್ಯದ ಅತಿ ಹಿಂದುಳಿದ ತಾಲೂಕುಗಳ ಪೈಕಿ ಒಂದೆಂಬ ಕುಖ್ಯಾತಿಯಿಂದ ಯಲಬುರ್ಗಾ ತಾಲೂಕನ್ನು ಹೊರತೆಗೆಯಲು ಅವರಿಂದ ಸಾಧ್ಯವಾಗಲಿಲ್ಲ.

ಇರಲಿ, ವೈಫಲ್ಯಗಳ ಪಟ್ಟಿಯನ್ನು ನಂತರ ಮಾಡಿದರಾಯಿತು. ಆದರೆ, ಪ್ರತಿ ಸಲ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ರಾಯರೆಡ್ಡಿ ಸಚಿವರಾಗುವುದು ಪಕ್ಕಾ ಎಂಬ ಪರಿಸ್ಥಿತಿಯಂತೂ ನಿರ್ಮಾಣವಾಗಿಬಿಟ್ಟಿತು. ಆ ಹಿನ್ನೆಲೆಯಲ್ಲಿ, ಈ ಸಲ ಪಕ್ಷ ಅಧಿಕಾರಕ್ಕೆ ಬರುವ ಸುಳಿವು ಪಡೆದಿದ್ದ ರಾಯರೆಡ್ಡಿಯವರು, ಸಂಭಾವ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಓಡಾಡಲು ಶುರು ಮಾಡಿದರು. ಅವರ ಜೊತೆಗೆ ದೆಹಲಿಗೂ ಹೋಗಿ ಠಿಕಾಣಿ ಹೂಡಿದ್ದರು.

ಆದರೆ, ಸಿದ್ದರಾಮಯ್ಯ ಪಳಗಿದ ರಾಜಕಾರಣಿ. ಯಾರ ಉದ್ದೇಶ ಏನು ಎಂಬುದನ್ನು ಚೆನ್ನಾಗಿ ಬಲ್ಲವರು. ರಾಯರೆಡ್ಡಿಯವರನ್ನು ಸಚಿವನನ್ನಾಗಿಸಿದರೆ, ಕೊಪ್ಪಳದಲ್ಲಿ ಒಬಿಸಿ ವರ್ಗ ಬಲಗೊಳ್ಳದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೇ ರಾಯರೆಡ್ಡಿ ಒಂಥರಾ ವಿಸಿಟಿಂಗ್‌ ಶಾಸಕನಿದ್ದಂತೆ. ಅಂದರೆ, ವಾರಾಂತ್ಯದಲ್ಲಿ ಮಾತ್ರ ಕ್ಷೇತ್ರಕ್ಕೆ ಆಗಮಿಸುವ ವ್ಯಕ್ತಿ. ಅವರ ವ್ಯವಹಾರಗಳೆಲ್ಲ ಧಾರವಾಡ ಮತ್ತು ಬೆಂಗಳೂರಿನಿಂದ ಕಾರ್ಯಾಚರಿಸಲ್ಪಡುತ್ತವೆ. ಮೇಲಾಗಿ ತನ್ನ ಮಾತೇ ನಡೆಯಬೇಕೆಂಬ ಧೋರಣೆ ಹೊಂದಿರುವ ವ್ಯಕ್ತಿ. ಕ್ಷೇತ್ರದ ಇತರ ಶಾಸಕರ ಜೊತೆಗೆ ಸಂಬಂಧ ಅಷ್ಟಕ್ಕಷ್ಟೇ. ಇಂತಹ ವ್ಯಕ್ತಿಯನ್ನು ಸಚಿವನನ್ನಾಗಿಸುವುದು ಅವರಿಗೆ ಸುತಾರಾಂ ಇಷ್ಟವಿದ್ದಿಲ್ಲ.

ಹೀಗಾಗಿ, ಸಿದ್ದರಾಮಯ್ಯನವರು ಬಸವರಾಜ ರಾಯರೆಡ್ಡಿಯವರನ್ನು ಸಂಪುಟಕ್ಕೆ ಪರಿಗಣಿಸಲಿಲ್ಲ. ಕೇಂದ್ರದ ನಾಯಕರೊಂದಿಗೆ ಅತ್ಯಂತ ನಿಕಟ ಬಾಂಧವ್ಯ ಹೊಂದಿರುವ ಬಿ.ಕೆ. ಹರಿಪ್ರಸಾದ್‌ ಅವರನ್ನೇ ದೂರವಿಟ್ಟ ಸಿದ್ದರಾಮಯ್ಯನವರಿಗೆ ಅಂತಹ ಯಾವ ಬಾಂಧವ್ಯವನ್ನೂ ಯಾರೊಂದಿಗೂ ಇಟ್ಟುಕೊಂಡಿರದ ಬಸವರಾಜ ರಾಯರೆಡ್ಡಿಯವರನ್ನು ಪಕ್ಕಕ್ಕೆ ಸರಿಸುವುದು ಕಷ್ಟವಾಗಲಿಲ್ಲ.

ಹೀಗಾಗಿ ಈ ಇಬ್ಬರೂ ನಾಯಕರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಆದರೆ, ಸಿದ್ದರಾಮಯ್ಯನವರನ್ನು ಟೀಕಿಸಲು ಇಬ್ಬರ ಬಳಿಯೂ ಬಲವಾದ ಕಾರಣಗಳು ಯಾವವೂ ಇಲ್ಲ. ವಾಚು, ಖಾಕಿ ಚೆಡ್ಡಿ ಎಂದು ಹರಿಪ್ರಸಾದ್;‌ ಟ್ರಾನ್ಸ್‌ಫಾರ್ಮರ್‌ ಹೆಸರಲ್ಲಿ ರಾಯರೆಡ್ಡಿ ಸಿದ್ದರಾಮಯ್ಯನವರನ್ನು ಟೀಕಿಸುತ್ತಾ, ಭಿನ್ನಮತೀಯರೊಂದಿಗೆ ಗುರುತಿಸಿಕೊಂಡು ಓಡಾಡುತ್ತಿದ್ದಾರೆ. ಇವರಿಬ್ಬರ ಉದ್ದೇಶ ಮತ್ತು ಕಾರ್ಯಾಚರಣೆ ಶೈಲಿ ಒಂದೇ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ತಮ್ಮ ಈ ನಡವಳಿಕೆಯಿಂದ ಪಕ್ಷದ ಮೇಲೆ ಎಂತಹ ಪರಿಣಾಮವಾದೀತು ಎಂಬುದನ್ನೂ ಲೆಕ್ಕಿಸದೇ, ಕೇವಲ ತಮ್ಮ ವೈಯಕ್ತಿಕ ಉದ್ದೇಶ ಸಾಧನೆಯನ್ನಷ್ಟೇ ಪ್ರಮುಖವಾಗಿ ಪರಿಗಣಿಸಿರುವ ಈ ಈರ್ವರೂ ನಾಯಕರ ಈ ನಡೆಗಳನ್ನು ನೋಡುತ್ತಿದ್ದರೆ-

ಮನೆಯೊಳಗಣ ಕಿಚ್ಚು ಮನೆಯ ಸುಡುವುದಲ್ಲದೇ ನೆರೆಮನೆ ಸುಡದು ಎಂಬ ವಚನದ ಸಾಲು ನೆನಪಾಗುತ್ತದೆ.

ಲೇಖನ – ಚಾಮರಾಜ ಸವಡಿ ಕೊಪ್ಪಳ

ಜಿಲ್ಲೆ

ರಾಜ್ಯ

error: Content is protected !!