Monday, April 15, 2024

“ಅಯ್ಯೋ ಸೋಮೇಶ್ವರ” ದುರುಳರ ದುರಾಡಳಿತದಿಂದ ಸೊರಗಿದ ‘ಸೋಮೇಶ್ವರ’ ಫ್ಯಾಕ್ಟರಿ!

ವರದಿ: ಉಮೇಶ ಗೌರಿ (ಯರಡಾಲ)

 ಮಾಜಿ ಹಾಲಿಗಳ ದುರಾಸೆ ಹಾವಳಿ, ಎಮ್.ಡಿ.ಮಲ್ಲೂರುದೊಂಥರ ಚಾಳಿ!
ಒಣ ಪ್ರತಿಷ್ಠೆ, ದುರಾಸೆಗೆ ‘ಸೋಮೇಶ್ವರ’ ಸುಸ್ತೋ ಸುಸ್ತು… ರೈತ ಪಡೆ ಯಾರಿಗೆ ಮಾಡಲಿದೆ ತಥಾಸ್ತು

ಬೆಳಗಾವಿ: ರಾಜಕಾರಣ, ನಿರ್ಲಕ್ಷ್ಯತನ, ಭ್ರಷ್ಟತನ, ಸ್ವಪ್ರತಿಷ್ಠೆ ಸುತ್ತಲೂ ಗಿರಕಿ ಹೊಡೆಯತ್ತಿರುವುದರಿಂದ ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸೊರಗಿ ಸುಣ್ಣವಾಗಿದೆ!

ಅಷ್ಟಿಷ್ಟಕ್ಕೇ ಮೂಗು ತೂರಿಸುತ್ತಿದ್ದ, ಉತ್ತರನ ಪೌರುಷ ತೋರಿಸುತ್ತಿದ್ದ ಈ ಭಾಗದ ಕೆಲವು ಹಾಲಿ, ಮಾಜಿ ಜನಪ್ರತಿನಿಧಿಗಳು ಶೇಕಡಾ 89 ರಷ್ಟು ರೈತರ ಷೇರು ಸದಸ್ಯತ್ವ ಅನರ್ಹಗೊಂಡಾಗ ಮಾತ್ರ ತುಟಿ ಬಿಚ್ಣಲಿಲ್ಲ ಅನ್ನುವುದು ಸ್ವಹಿತಾಸಕ್ತಿ ಈಡೇರಿಕೆಗಾಗಿ ಅನ್ನುವುದು ಸತ್ಯದರ್ಪಣ!

“ಕಷ್ಟಕ್ಕೆ ಕರೆಯಬೇಡಿ, ಊಟಕ್ಕೆ ಮರೆಯಬೇಡಿ” ಅನ್ನುವ ಜಾಯಮಾನದ ಈ ನಾಯಕರು ಈಗ ಬೆನ್ನಿಗೆ ಒಂದಿಷ್ಟು ಮಂದಿ ಕಟ್ಟಿಕೊಂಡು ‘ಸೋಮೇಶ್ವರ’ನ ಉದ್ಧಾರಕ್ಕೆ ಅಣಿಯಾಗಿದ್ದಾರೆ. ಇದೇ ಸೆಪ್ಟೆಂಬರ್ 10 ರಂದು ನಡೆಯಲಿರುವ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರುವುದಕ್ಕಾಗಿ ಜಿದ್ದಿಗೆ ಬಿದ್ದಿದ್ದಾರೆ!

ಐತಿಹಾಸಿಕವಾಗಿ ಗಂಡು ನೆಲ ಎಂದೇ ಗುರುತಿಸಿಕೊಂಡಿರುವ ಬೈಲಹೊಂಗಲದ ರೈತರ ಬದುಕು ಆರ್ಥಿಕವಾಗಿಯೂ ಸುಧಾರಿಸಬೇಕು ಅನ್ನುವ ಸದುದ್ದೇಶದೊಂದಿಗೆ ಸಹಕಾರ, ಸಾಮರಸ್ಯದ ಅಡಿಪಾಯದಡಿ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ತಲೆ ಎತ್ತಿದೆ. ರೈತರ ಕಲ್ಯಾಣಕ್ಕಾಗಿ ಅಂದು ಮಾಜಿ ಶಾಸಕ ದಿವಂಗತ ರಮೇಶ ಬಾಳೆಕುಂದರಗಿ ಹುಟ್ಟು ಹಾಕಿದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಇಂದು ಸ್ವಾರ್ಥ ಸಾಧನೆಗಾಗಿ ಕೆಲವರ ಕಪಿ ಮುಷ್ಠಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ!

ಕೆಲ ಮಾಜಿ ಮತ್ತು ಹಾಲಿ ಜನ ಪ್ರತಿನಿಧಿಗಳು, ಕಾರ್ಖಾನೆಯ ಎಮ್.ಡಿ. ಮಲ್ಲೂರ್ ತಮ್ಮ ಅಧಿಕಾರ ಲಾಲಸೆ ಮತ್ತು ಸ್ವಪ್ರತಿಷ್ಠೆ ಸಾಧನೆಗಾಗಿ ಕಾರ್ಖಾನೆಯನ್ನು ಎಲ್ಲ ಬಗೆಯಿಂದಲೂ ಹಿಂಡಿ ಹಿಪ್ಪೆ ಮಾಡಿದ್ದಾರೆ! ಸುಮಾರು 30 ಸಾವಿರಕ್ಕೂ ಹೆಚ್ಚು ಷೇರು ಸದಸ್ಯರನ್ನು ಹೊಂದಿರುವ ಕಾರ್ಖಾನೆ ಸೂಕ್ತ ಸಮಯದಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸುವುದಿಲ್ಲ, ರೈತರಿಂದ ಕಬ್ಬನ್ನು ತರಿಸಿಕೊಳ್ಳುವುದಿಲ್ಲ ಎಂದು ರೈತ ಹೋರಾಟಗಾರರು ಕಾರ್ಖಾನೆಯ ಎಂಡಿ ಮಲ್ಲೂರು ಮತ್ತು ಆಡಳಿತ ಮಂಡಳಿಯ ವಿರುದ್ಧ ಆರೋಪಿಸುತ್ತಾರೆ.

ಹೀಗೇ ‘ಸೋಮೇಶ್ವರ’ನ ಕೊರಳಿಗೆ ಬರೀ ಸಮಸ್ಯೆಗಳ ಸರಮಾಲೆಯನ್ನೇ ನೇತು ಹಾಕಿರುವ ಆಡಳಿತ ಮಂಡಳಿ ಮತ್ತು ಎಂಡಿ ಮಲ್ಲೂರ್ ಅಧಿಕಾರದ ಲಾಲಸೆ ಮಿತಿ ಮೀರಿದೆ. ಐದು ವರ್ಷಗಳಲ್ಲಿ ಎರಡು ಸಭೆಗಳಿಗೂ ಹಾಜರಾಗಿಲ್ಲ, ಕನಿಷ್ಠ ವ್ಯವಹಾರವನ್ನೂ ನಡೆಸಿಲ್ಲ ಅನ್ನುವ ಕಾರಣವೊಡ್ಡಿ ಶೇಕಡಾ 89ರಷ್ಟು ರೈತರ ಷೇರು ಸದಸ್ಯತ್ವ ರದ್ದುಗೊಳಿಸಿದ್ದ ಎಮ್.ಡಿ ಮಲ್ಲೂರ್ ತಮ್ಮ ಪುತ್ರನ ರಾಜಕೀಯ ಭವಿಷ್ಯ ಬೆಳಗುವುದಕ್ಕಾಗಿ ಸಹಕಾರಿ ನಿಯಗಳನ್ನೇ ಗಾಳಿಗೆ ತೂರಿದ್ದಾರೆ. ಚುನಾವಣೆಗೆ ಮಗ ಕಾರ್ತಿಕ ಮಲ್ಲೂರುನಿಂದಲೇ ನಾಮಪತ್ರ ಸಲ್ಲಿಸಿ ರಾಜಕೀಯ ತಂತ್ರ ಹೆಣೆದಿದ್ದಾರೆ. ಇದೀಗ ಎಲ್ಲ ಆರೋಪಗಳಿಂದಲೂ ನುಣುಚಿಕೊಳ್ಳಲು ತನ್ನ ಪ್ರಭಾವ ಬಳಸಿಕೊಂಡು ನಿನ್ನೆಯಷ್ಟೇ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಶಿಫ್ಟ್(ವರ್ಗಾವಣೆ)ಆಗಿದ್ದಾರೆ.

ಒಂದು ಕಡೆಗೆ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನೊಂದು ಕಡೆಗೆ ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳು, ಆಡಳಿತ ಮಂಡಳಿ, ಎಂಡಿ ಮಲ್ಲೂರ್ ದುರಾಸೆ, ದುರಾಡಳಿತ, ಇಡೀ ನಾಡಿಗೆ ಸಿಹಿ ಉಣಿಸುವ ರೈತರು, ಕಾರ್ಮಿಕರ ಗಂಟಲಿನಲ್ಲಿ ವಿಷ ಕಾರುವ ಸ್ಥಿತಿ ತಂದೊಡ್ಡಿದೆ.

ಕಾರ್ಖಾನೆಯ ಚುನಾವಣೆ, ಅಧಿಕಾರದಲ್ಲಿ ಸ್ಥಳೀಯ ರಾಜಕಾರಣ ಬೆಸೆದುಕೊಂಡಿದ್ದರಿಂದ ಸಹಜವಾಗಿ ಲೋಕಲ್ ಲೀಡರ್ಸ್‌ಗೆ ತಮ್ಮ ಬೆಂಬಲಿತ ಬಣಕ್ಕೆ ಅಧಿಕಾರ ಕೊಡಿಸುವುದು ಪ್ರತಿಷ್ಠೆಯಾಗಿದೆ. ಹೀಗಾಗಿ ಪೊಲಿಟಿಕಲ್ ಪೈಪೋಟಿ ಕಾವೇರಿದ್ದು, ಸೋಮೇಶ್ವರನ ಗೆಲುವಿಗಾಗಿ ರೈತರು ಯಾರ ಪರ ಹಸಿರು ಪತಾಕೆ ಹಾರಿಸಲಿದ್ದಾರೆ ಅನ್ನುವುದನ್ನು ಕಾದು ನೋಡಬೇಕಾಗಿದೆ!

ಜಿಲ್ಲೆ

ರಾಜ್ಯ

error: Content is protected !!