Saturday, May 25, 2024

ನಕಲಿ ಲೋಕಾಯುಕ್ತ ಬೆಳಗಾವಿಯ ಸಂತೋಷ್ ಅರೆಸ್ಟ್.!ಬೈಲಹೊಂಗಲದ ಪ್ರಮುಖ ಆರೋಪಿ ವಿಶಾಲ್ ಪತ್ತೆಗೆ ತನಿಖೆ.

ಬೆಂಗಳೂರು(ಸೆ.04):  ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರದ ಸಂತೋಷ್ ಕೊಪ್ಪದ ಬಂಧಿತನಾಗಿದ್ದು, ಈ ಕೃತ್ಯದ ಪ್ರಮುಖ ಆರೋಪಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿಶಾಲ್ ಪಾಟೀಲ್ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಕರೆ ಮಾಡಿ ವಿಶಾಲ್ ಪಾಟೀಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಬಗ್ಗೆ ಲೋಕಾಯುಕ್ತ ಪೊಲೀಸರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶಾಲ ಪಾಟೀಲ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಸರ್ಕಾರಿ ಅಧಿಕಾ ರಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡುವುದೇ ಆತನ ವೃತ್ತಿಯಾಗಿದೆ. ಈ ಹಿಂದೆ ಸಹ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್ಪಿ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಬಗ್ಗೆ ಆತನ ಮೇಲೆ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕವು ತನ್ನ ಚಾಳಿಯನ್ನು ಆತ ಮುಂದುವರೆಸಿದ್ದ. ಇನ್ನು ವಿಶಾಲ್ ಶಿಷ್ಯ ಸಂತೋಷ್ ಕೊಪ್ಪದ್ ಸಹ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯಾಗಿದ್ದಾನೆ. ನ್ಯಾಯಾಲಯಕ್ಕೆ ಹಳೆ ಪ್ರಕರಣದ ವಿಚಾರಣೆಗೆ ಬಂದಾಗ ಪಾಟೀಲ್ ಹಾಗೂ ಸಂತೋಷ್ ಪರಸ್ಪರ ಪರಿಚಿತರಾಗಿದ್ದರು. ತರುವಾಯ ಈ ಗೆಳೆತನದಲ್ಲೇ ಜಂಟಿಯಾಗಿ ಇಬ್ಬರು ಸುಲಿಗೆ ಕಾರ್ಯಾಚರಣೆಗಿಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ವಿಶಾಲ್ ಪಾಟೀಲ್, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಸಂಬಂಧಪಟ್ಟ ಮಾಹಿತಿಯುಳ್ಳ ಪ್ರಕರಣದ ಕಡತ ನನ್ನ ಬಳಿ ಇದೆ. ಈ ಪ್ರಕರಣ ಮುಕ್ತಾಯ ಮಾಡಲು ಹಣ ಕೊಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಬೆದರಿಸುತ್ತಿದ್ದ. ಅಂತೆಯೇ ಕೆಲ ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ವಿಶಾಲ್ ಪಾಟೀಲ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಎಂಜಿನಿಯರ್‌ಗಳು ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಪೊಲೀಸರು, ವಿಚಾರಣೆ ನಡೆಸಿದಾಗ ಲೋಕಾಯುಕ್ತ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಿಶಾಲ್ ಪಾಟೀಲ್ ಎಂಬಾತ ಈ ಬ್ಲ್ಯಾಕ್‌ಮೇಲ್ ಕೃತ್ಯ ಎಸಗುತ್ತಿರುವುದು ಬಯಲಾಗಿದೆ. ಕೂಡಲೇ ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ದೂರು ಸಲ್ಲಿಸಿದರು. ಅದರನ್ವಯ ತನಿಖೆ ನಡೆಸಿದ ವಿಧಾನಸೌಧ ಪೊಲೀಸರು, ಹಣ ಕೊಡುವುದಾಗಿ ವಿಶಾಲ್‌ಗೆ ಕರೆ ಮಾಡಿದ್ದರು. ಆದರೆ ತನ್ನ ಬದಲಿಗೆ ಹಣ ಸ್ವೀಕರಿಸಲು ಸಂತೋಷ್‌ನನ್ನು ಆತ ಕಳುಹಿಸಿದ್ದ. ಹಣ ಸ್ವೀಕರಿಸಲು ಬಂದಾಗ ಕೊಪ್ಪದ್ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಷ್ಯನ ಬಳಸಿ ಹಣ ವಸೂಲಿ

ಸರ್ಕಾರಿ ಅಧಿಕಾರಿಗಳಿಗೆ ಡಿವೈಎಸ್ಪಿ ಹೆಸರಿನಲ್ಲಿ ವಿಶಾಲ್ ಪಾಟೀಲ್ ಕರೆ ಮಾಡುತ್ತಿದ್ದ. ಆದರೆ ಆತ ಎಲ್ಲೂ ಮುಖ ತೋರಿಸುತ್ತಿರಲಿಲ್ಲ. ಬ್ಲ್ಯಾಕ್‌ಮೇಲ್ ಹಣ ವಸೂಲಿಗೆ ಸಂತೋಷ್‌ನನ್ನು ವಿಶಾಲ್ ಕಳುಹಿಸುತ್ತಿದ್ದ. ತನ್ನ ಕಡೆಯ ವ್ಯಕ್ತಿ ಬಂದಿದ್ದಾನೆ. ಆತನಿಗೆ ಹಣ ಕೊಡಿ ಎಂದು ಕರೆ ಮಾಡಿ ವಿಶಾಲ್ ಹೇಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

 

 

 

 

ಕೃಪೆ:ಸುವರ್ಣಾ.

ಜಿಲ್ಲೆ

ರಾಜ್ಯ

error: Content is protected !!