Thursday, July 25, 2024

ಸರ್ಕಾರದ ಯೋಜನೆ ಹಾಗೂ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಶಾಸಕರ ವಿರುದ್ಧ ಪ್ರತಿಭಟನೆ :ಕಾಂಗ್ರೆಸ್ ನಾಯಕರು ಎಚ್ಚರಿಕೆ

 ತುರುವೇಕೆರೆ: ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಜೆಡಿಎಸ್ ಸರ್ಕಾರವಲ್ಲ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಕಾಂಗ್ರೆಸ್ ನ ಬದ್ಧತೆಯಾಗಿದೆ. ಸರ್ಕಾರ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಖಚಿತವಾಗಿ ಈಡೇರಿಸಲಿದೆ. ಶಾಸಕ ಎಂ.ಟಿ.ಕೃಷ್ಣಪ್ಪನವರು ಕೇವಲ ಪ್ರಚಾರಕ್ಕಾಗಿ ಸರ್ಕಾರದ ಯೋಜನೆಗಳನ್ನು ಟೀಕಿಸುವುದಾಗಿ, ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ಕೊಡುವುದಾಗಲೀ ಮಾಡಿದರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಎಚ್ಚರಿಕೆ ನೀಡಿದರು.

ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಲೋಕಸಭಾ ಚುನಾವಣೆ ವೇಳೆಯವರೆಗೆ ಮಾತ್ರ ಗ್ಯಾರಂಟಿ ಯೋಜನೆ ನಡೆಯುತ್ತವೆಂಬ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದು, ಜನರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ. ಆದರೆ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ವಯಸ್ಸಾಗಿದ್ದು, ಬುದ್ದಿ ಕಡಿಮೆಯಾಗಿದೆ. ಸರ್ಕಾರದ ಬಗ್ಗೆ, ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ದಿಯ ಕಡೆಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.

ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 3 ತಿಂಗಳಾಗಿದ್ದು, ಜನರಿಗೆ ನೀಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ೪ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಈಡೇರಿಸಿದೆ. ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ 1 ಕೋಟಿ 10 ಲಕ್ಷ ಮಹಿಳೆಯರ ಖಾತೆಗೆ ೨ಸಾವಿರ ರೂ ಜಮೆ ಮಾಡುವ ಮೂಲಕ ಸರ್ಕಾರ ಇತಿಹಾಸ ಸೃಷ್ಟಿಸಿದೆ ಎಂದ ಅವರು, ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮ ರಾಜ್ಯದ ಪ್ರತಿ ತಾಲ್ಲೂಕು ಕೇಂದ್ರ, ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ನಡೆದಿದ್ದು, ಮಹಿಳಾ ಸಬಲೀಕರಣಕ್ಕೆ ಗೃಹಲಕ್ಷ್ಮೀ ಯೋಜನೆ ನಾಂದಿಯಾಗಿದೆ ಎಂದರು.

ವಿಧಾನಸಭಾ ಚುನಾವಣೆ ಪರಾಜಿತ ಅಭ್ಯರ್ಥಿ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರು ಕ್ಷೇತ್ರದಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದುದು ಎಂದ ಅವರು, ಕ್ಷೇತ್ರದಲ್ಲಿ ಜನರ, ಸರ್ಕಾರದ ಕೆಲಸ ಮಾಡುವ ಅಧಿಕಾರಿಗಳಿಗೆ ಮಾತ್ರ ಕ್ಷೇತ್ರದಲ್ಲಿ ಆದ್ಯತೆ, ರಾಜಕೀಯ ಮಾಡುವವರು ನಮಗೆ ಬೇಕಿಲ್ಲ ಎಂದು ಸರ್ಕಾರವೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆಯೇ ಹೊರತು ಬೆಮೆಲ್ ಕಾಂತರಾಜು ಅವರು ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡಿಸಿಲ್ಲ. ಸುಖಾಸುಮ್ಮನೆ ಪಕ್ಷದ ನಾಯಕರ ಮೇಲೆ ಆರೋಪ ಹೊರಿಸುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.

ಮಾಜಿ ಶಾಸಕ ಮಸಾಲಾ ಜಯರಾಮ್ ಅವರು ಕ್ಷೇತ್ರಕ್ಕೆ ಮಂಜೂರಾಗಿದ್ದ 3375 ಮನೆಗಳನ್ನು ಕುಣಿಗಲ್ ಕ್ಷೇತ್ರಕ್ಕೆ ವರ್ಗಾಯಿಸಿದ್ದಾರೆಂಬ ಶಾಸಕರು ಆರೋಪಿಸುತ್ತಿದ್ದು, ಮಾಜಿ ಶಾಸಕರಿಗೆ ಅಷ್ಟೊಂದು ಶಕ್ತಿಯಿರುವಾಗ ನೀವು ಹಾಲಿ ಶಾಸಕರಿದ್ದೀರಿ, ಕ್ಷೇತ್ರಕ್ಕೆ ಮಂಜೂರಾಗಿ ಹೊರ ಹೋಗಿರುವ ಮನೆಗಳನ್ನು ವಾಪಸ್ ತಂದು ಆಶ್ರಯ ರಹಿತರಿಗೆ ನೀಡಿ ಎಂದು ಸವಾಲು ಹಾಕಿದ ಅವರು, ಭ್ರಷ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದು ಹೇಳುವ ಶಾಸಕ ಎಂ.ಟಿ.ಕೃಷ್ಣಪ್ಪನವರು ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಡಾ.ಜಿ.ಪರಮೇಶ್ವರ್ ಅವರ ಬಳಿ ಹೋಗಿ ತಮ್ಮ ಕೆಲಸ ಮಾಡಿಸಿಕೊಂಡು ಬರುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜ್, ಪಪಂ ಸದಸ್ಯ ಮಹೇಶ್, ಮುಖಂಡರಾದ ಗುಡ್ಡೇನಹಳ್ಳಿ ನಂಜುಂಡಪ್ಪ, ಕೊಡಗೀಹಳ್ಳಿ ಶೇಷೇಗೌಡ, ಟಿ.ಎನ್.ಶಶಿಶೇಖರ್, ಅರೆಮಲ್ಲೇನಹಳ್ಳಿ ಲಕ್ಷ್ಮಣಗೌಡ, ರುದ್ರೇಶ್, ಜವರಪ್ಪ, ಅಕ್ಕಳಸಂದ್ರ ಪ್ರಕಾಶ್, ಹುಣಸೇಮರದಹಳ್ಳಿ ನಟರಾಜ್, ಶಿವರಾಜ್ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

ಜಿಲ್ಲೆ

ರಾಜ್ಯ

error: Content is protected !!