Saturday, July 27, 2024

ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣಾ ಗಿಮಿಕ್ ! ಮುಂಬರುವ ಮಾರ್ಚ್ ವರೆಗೆ ಮಾತ್ರ ಗ್ಯಾರಂಟಿಗಳ ಆಯಸ್ಸು : ಎಂ.ಟಿ.ಕೃಷ್ಣಪ್ಪ ಭವಿಷ್ಯ

ತುರುವೇಕೆರೆ: ಸರ್ಕಾರದ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣಾ ಗಿಮಿಕ್ ಆಗಿದ್ದು, ಯಾವುದೇ ಗ್ಯಾರಂಟಿ ಯಶಸ್ವಿಯಾಗುವುದಿಲ್ಲ, ಮುಂಬರುವ ಮಾರ್ಚ್ ವರೆಗೆ ಮಾತ್ರ ಗ್ಯಾರಂಟಿ ಯೋಜನೆಗಳ ಆಯಸ್ಸು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಭವಿಷ್ಯ ನುಡಿದರು.

ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಆವರಣದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮ ನೀಡಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು, ಅದರಂತೆ ಈಗ 4 ನೇ ಗ್ಯಾರಂಟಿಯನ್ನು ಜಾರಿಗೊಳಿಸಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಅಭಿವೃದ್ದಿಗೆ ಅನುದಾನ ನೀಡುತ್ತಿಲ್ಲ. ನಾನು ಈ ಕ್ಷೇತ್ರದ ಶಾಸಕನಾಗಿ 4 ತಿಂಗಳು ಕಳೆದಿದೆ, ಸರ್ಕಾರ 4 ರೂ ಅನುದಾನ ನೀಡಿಲ್ಲ. ಹೇಗೆ ಕ್ಷೇತ್ರದ ಅಭಿವೃದ್ದಿ ಮಾಡುವುದು? ಸರ್ಕಾರ ಇನ್ನೂ ಹತ್ತು ಗ್ಯಾರಂಟಿ ಜಾರಿಗೊಳಿಸಲಿ, ಆದರೆ ಅಭಿವೃದ್ದಿಗೆ ಅನುದಾನ ಒದಗಿಸಬೇಕೆಂದರು.

ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾತ್ರ ಎರಡು ಸಾವಿರ ರೂ ನೀಡುತ್ತಿದೆ. ಇದರಿಂದ ಕುಟುಂಬದಲ್ಲಿ ಅತ್ತೆ, ಸೊಸೆ ನಡುವೆ ಕಲಹ ಏರ್ಪಡುವ ಸಾಧ್ಯತೆಗಳಿದೆ. ಆದ್ದರಿಂದ ಕುಟುಂಬದಲ್ಲಿರುವ ಎಲ್ಲಾ ಹೆಣ್ಣು ಮಕ್ಕಳಿಗೂ ಎರಡು ಸಾವಿರ ರೂ ನೀಡಬೇಕೆಂಬುದು ನನ್ನ ಒತ್ತಾಯವಾಗಿದೆ ಎಂದ ಅವರು, ಈ ಗೃಹಲಕ್ಷ್ಮೀ ಯೋಜನೆ ಮುಂಬರುವ ಫೆಬ್ರವರಿ, ಮಾರ್ಚ್ವರೆಗೆ ಮಾತ್ರ ನಡೆಯುತ್ತದೆ, ಲೋಕಸಭಾ ಚುನಾವಣೆ ನಂತರ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಣ್ಣ ಬಯಲಾಗಲಿದೆ ಎಂದರು.

ಸರ್ಕಾರ ರಾಜ್ಯದ ಅಭಿವೃದ್ದಿಯ ಕಡೆಗೆ ಗಮನಹರಿಸಬೇಕು, ಉತ್ತಮ ರಸ್ತೆ, ಕುಡಿಯುವ ನೀರು, ಶಾಲೆ, ವಸತಿಯ ಬಗ್ಗೆ ಚಿಂತಿಸಬೇಕು ಅದನ್ನು ಬಿಟ್ಟು ಗ್ಯಾರಂಟಿ ಎಂದು ಕುಳಿತರೆ ರಾಜ್ಯದ ಅಭಿವೃದ್ದಿಯಾಗುವುದಿಲ್ಲ. ರಾಜ್ಯದಲ್ಲಿ ನೀರಿನ ಸಮಸ್ಯೆಯಿದ್ದು ಬರಗಾಲ ತಾಂಡವವಾಡುತ್ತಿದೆ, ಬರಗಾಲ ಘೋಷಣೆ ಮಾಡುವ ತಾಕತ್ತು ಈ ಸರ್ಕಾರಕ್ಕಿಲ್ಲವಾಗಿದೆ ಎಂದ ಅವರು, ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನ್ ಬಾಂದವರಿಗೆ ಶೇ.೪ರಷ್ಟು ಮೀಸಲಾತಿ ನೀಡಿದ್ದರು. ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮೀಸಲಾತಿ ಘೋಷಿಸುವುದಾಗಿ ಹೇಳಿದ್ದರು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ೧೦೦ ದಿನವಾಗಿದೆ. ಇಂದಿಗೂ ಈ ಬಗ್ಗೆ ತುಟಿಬಿಚ್ಚಿಲ್ಲ ಎಂದು ಕಿಡಿಕಾರಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತಹಸೀಲ್ದಾರ್ ರೇಣುಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 51 ಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸ್ವೀಕರಿಸಿದ್ದು, 48072 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಆಹಾರ ಇಲಾಖೆಯ ಪಡಿತರ ಚೀಟಿ ಆಧಾರದಲ್ಲಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ನೋಂದಣಿಯಾದ ಫಲಾನುಭವಿಗಳ ಪೈಕಿ 39 ಸಾವಿರ ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಶೇ.88 ರಷ್ಟು ಸಾಧನೆಗೈದಿದ್ದೇವೆ. ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸದವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ, ಯಾವುದೇ ಅಂತಿಮ ದಿನಾಂಕವಿಲ್ಲ ಎಂದರು.

ಈ ಸಂದರ್ಭದಲ್ಲಿ ಇಒ ಸತೀಶ್ ಕುಮಾರ್, ಪಪಂ ಸದಸ್ಯರಾದ ಆರ್.ಮಧು, ಅಂಜನ್ ಕುಮಾರ್, ಚಿದಾನಂದ್, ನದೀಮ್ ಅಹಮದ್, ಎನ್.ಆರ್.ಸುರೇಶ್, ಶೀಲಾ, ಉಪನಿರ್ದೇಶಕ ರಂಗಧಾಮಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು,ಪಪಂ ಮುಖ್ಯಾಧಿಕಾರಿ ಶ್ರೀನಾಥ್ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

ಜಿಲ್ಲೆ

ರಾಜ್ಯ

error: Content is protected !!