Saturday, July 27, 2024

ಕರ್ನಾಟಕ ಬಿಜೆಪಿ ಮುಕ್ತ ರಾಜ್ಯವಾಗಲಿದೆ: ಮಾಜಿ ಸಚಿವ, ಬಿಜೆಪಿ ನಾಯಕ ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿ ಪಕ್ಷದಲ್ಲಿ ಆಂತರಿಕ ಕಲಹ ಮುಂದುವರಿದಿದ್ದು,ಮಾಜಿ ಸಚಿವ,ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಅವರು ಶೀಘ್ರದಲ್ಲೇ ಕರ್ನಾಟಕ ಬಿಜೆಪಿ ಮುಕ್ತ ರಾಜ್ಯವಾಗಲಿದೆ ಎಂದು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ ಬಂದಿದೆ.ಕರ್ನಾಟಕ ಬಿಜೆಪಿ ಮುಕ್ತ ರಾಜ್ಯವಾಗಲಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ತಮ್ಮ ಕ್ಷೇತ್ರಕ್ಕೆ ಯೋಜನೆಗಳನ್ನು ಪಡೆಯಲು ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದರು.

ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ ಎಂದು ಆರೋಪಿಸಿದ ಮಾಜಿ ಸಚಿವ, ಪಕ್ಷವನ್ನು ದೂರದ ಸ್ಥಳದಲ್ಲಿದ್ದುಕೊಂಡು ಯಾರೋ ನಿಯಂತ್ರಿಸುತ್ತಾರೆ. ಇದೇ ರೀತಿ ಮುಂದುವರಿದರೆ ಪಕ್ಷ ಸರ್ವನಾಶವಾಗಲಿದೆ ಎಂದರು.

ಬಿಜೆಪಿ ನಾಯಕರು ಭ್ರಮೆಯಲ್ಲಿ ಬದುಕುತ್ತಿದ್ದು, ಇದರಿಂದ ಮೊದಲು ಹೊರಬರಬೇಕು. ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇನ್ನೂ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದರಿಂದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಮನಸ್ಸಿಗೆ ಬಹಳ ಬೇಸರವಾಗಿದೆ. ಕೆಲವರು ಪತ್ರಿಕಾ ಹೇಳಿಕೆ ನೀಡುವ ಟೈಗರ್ಸ್‍ಗಳಾಗಿದ್ದಾರೆ. ಪಕ್ಷ ನನಗೆ ತಾಯಿ ಸಮಾನ ಆ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕೆಲ ನಾಯಕರ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಅದನ್ನು ಖಂಡಿಸುತ್ತೇನೆ ಎಂದರು.

ರೇಣುಕಾಚಾರ್ಯ ಬೆಳೆಯುತ್ತಾನೆಂದು ತುಳಿಯುವ ಕೆಲಸ ಮಾಡಿದರು. ನಾನು ಮಾತನಾಡಿದ ತಕ್ಷಣ ರೇಣುಕಾಚಾರ್ಯ ಪಕ್ಷ ಬಿಡುತ್ತಾನೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರು ರಾಜಕೀಯವಾಗಿ ಬೆಳೆಯುತ್ತಾರೋ ಅವರನ್ನು ಕತ್ತರಿಸುತ್ತಾರೆ. ಯಾರು ಬಕೆಟ್ ಹಿಡಿಯುತ್ತಾರೋ ಅವರನ್ನು ಬೆಳೆಸುತ್ತಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಹಾಗೂ ಶಾಸಕ ಬಿವೈ ವಿಜಯೇಂದ್ರ ಅವರಿಗೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವಿದೆ. ಆದರೆ, ಅವರಿಗೆ ಅವಕಾಶ ಕೊಡುತಿಲ್ಲ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಅವರು, ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಮಹಾನಾಯಕ. ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರಿದ್ದರೂ ಜಿಲ್ಲಾ ಉಸ್ತುವಾರಿ ನಮಗೆ‌ ಕೊಡಲಿಲ್ಲ. 5 ಜನರಲ್ಲಿ ಯಾರಿಗಾದರೂ ಸಚಿವರನ್ನಾಗಿ ಮಾಡಿ ಅಂತ ಕೇಳಿಕೊಂಡೆವು. ಆ ಮಹಾನಾಯಕ ತನ್ನ ಅಸ್ವಿತ್ವ ಕಡಿಮೆ ಆಗತ್ತೆ ಅಂತ ತಡೆದರುʼʼ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ಏನೇನು ಹೇಳಿದರು ರೇಣುಕಾಚಾರ್ಯ?

-ಯಡಿಯೂರಪ್ಪ ಅವರನ್ನು ನಾಮ್ ಕೇ ವಾಸ್ತೇ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಯಾವುದೇ ಗೌರವ ನೀಡಿಲ್ಲ.

-ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮುಗಿದು 2 ವರ್ಷ ಆಗಿದೆ. ಇದುವರೆಗೂ ರಾಜ್ಯಾಧ್ಯಕ್ಷರ ಆಯ್ಕೆಯಾಗಿಲ್ಲ, ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ.

-2013, 2023 ರಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಬಿಜೆಪಿಗೆ ಮುಳ್ಳು. ಇದನ್ನು ಹಿರಿಯರು ಆತ್ಮಾವಲೋಕನ ಮಾಡಿಕೊಳ್ಳಬೇಕು.

-2023ರ ವಿಧಾನಸಭಾ ಚುನಾವಣೆಯಲ್ಲಿ 72 ಹೊಸ ಮುಖಗಳಿಗೆ ಟಿಕೆಟ್ ಕೊಡುವ ಅವಶ್ಯಕತೆ ಏನಿತ್ತು?
ಹಿರಿಯರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ ಅವರನ್ನು ಕಡೆಗಣಿಸಿದರು. ಇದು ದೊಡ್ಡ ತಪ್ಪು.

ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಅನ್ನೋದೇ ಇಲ್ಲ. ಬಿಜೆಪಿಯನ್ನು ಯಾರೋ, ಎಲ್ಲೋ ಕುಳಿತು ನಿಯಂತ್ರಿಸುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರಿದರೆ ಬಿಜೆಪಿ ಪಕ್ಷ ಅಧೋಗತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ.

 

 

 

……………………………………………………………………………………………………………..

 

 

ಜಿಲ್ಲೆ

ರಾಜ್ಯ

error: Content is protected !!