Saturday, July 27, 2024

ರೈತರು, ಮಹಿಳೆಯರಿಗೆ ಒತ್ತು ನೀಡಿ, ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಮಾಜಿ ಪ್ರಧಾನಿ ಹಾಗೂ ಹಿರಿಯ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡರು ಶನಿವಾರ ಬೆಂಗಳೂರಿನಲ್ಲಿ 12 ಅಂಶಗಳ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ಪಕ್ಷವು ಮಹಿಳಾ ಸಬಲೀಕರಣ ಮತ್ತು ರೈತರ ಅಭಿವೃದ್ಧಿಗೆ ಒತ್ತು ನೀಡಿದೆ.

ಪ್ರಣಾಳಿಕೆಯಲ್ಲಿ ಪಕ್ಷವು ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ, ವರ್ಷಕ್ಕೆ ಐದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ, ಗರ್ಭಿಣಿಯರಿಗೆ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು 6,000 ರೂ. ಭತ್ಯೆ, ವಿಧವಾ ಪಿಂಚಣಿಯನ್ನು 900 ರೂ.ನಿಂದ 2,500 ರೂ.ಗೆ ಏರಿಕೆ ಮತ್ತು 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ವ್ಯಕ್ತಿಗಳಿಗೆ ಪಿಂಚಣಿಯನ್ನು ಘೋಷಿಸಿದೆ.

ಪಕ್ಷವು ರೈತರಿಗೆ ಪ್ರತಿ ಎಕರೆಗೆ ರೂ 10,000 ಸಹಾಯಧನವನ್ನು ನೀಡಲು ಪ್ರಸ್ತಾಪಿಸಿದೆ. ಕೃಷಿ ಕಾರ್ಮಿಕರಿಗೆ 2,000 ರೂ. ಮಾಸಿಕ ಭತ್ಯೆ, ಕೃಷಿ ಮಾಡುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 2 ಲಕ್ಷ ರೂ. ನೀಡುವುದಾಗಿ ಹೇಳಿದೆ. ಅಲ್ಲದೆ, ವಿವಿಧ ನಾಗರಿಕ ಸೇವೆಗಳು ಮತ್ತು ರಕ್ಷಣಾ ನೇಮಕಾತಿಗಳಿಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಕಾನೂನು ತರುವುದಾಗಿಯೂ ಭರವಸೆ ನೀಡಿದೆ.

ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ 60,000 ವಿದ್ಯಾರ್ಥಿನಿಯರಿಗೆ ಉಚಿತವಾಗಿ 6.8 ಲಕ್ಷ ಬೈಸಿಕಲ್ ಮತ್ತು ಇವಿ ಮೊಪೆಡ್‌ಗಳನ್ನು ವಿತರಿಸಲು ಪಕ್ಷವು ಪ್ರಸ್ತಾಪಿಸಿದೆ. ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ವಿಚಾರವಾಗಿ ಎದ್ದಿರುವ ಭಿನ್ನಮತ ಶಮನಗೊಳಿಸುವಲ್ಲಿ ನಿರತವಾಗಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ರಾಜ್ಯದಲ್ಲಿ ಹೊಸ ಹುರುಪಿನೊಂದಿಗೆ ಮುನ್ನಡೆಯುತ್ತಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಜೆಡಿಎಸ್‌ನ ಕೌಟುಂಬಿಕ ಕಲಹ ಇದೀಗ ಬಗೆಹರಿದಿದೆ.
ಅಂತಿಮವಾಗಿ ಪಕ್ಷದ ಮುಖಂಡ ಸ್ವರೂಪ್‌ ಪ್ರಕಾಶ್‌ ಅವರಿಗೆ ಟಿಕೆಟ್‌ ನೀಡಲು ಪಕ್ಷ ನಿರ್ಧರಿಸಿದೆ. ಎರಡು ಪಟ್ಟಿಗಳಲ್ಲಿ 142 ಅಭ್ಯರ್ಥಿಗಳ ಹೆಸರನ್ನು ಪಕ್ಷ ಘೋಷಿಸಿದೆ. ಪಕ್ಷವು ಇನ್ನೂ 82 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ.

ಜಿಲ್ಲೆ

ರಾಜ್ಯ

error: Content is protected !!