Tuesday, September 17, 2024

ಬೆಳಗಾವಿ ಕಾಂಗ್ರೆಸ್‌ಗೆ ಭೀಮ ಬಲ ಮಾಜಿ ಡಿಸಿಎಂ ಲಕ್ಷಣ ಸವದಿ ಇಂದು ಅಧಿಕೃತ ‘ಕೈ’ ಸೇರ್ಪಡೆ

ಬಸವರಾಜ ಚಿನಗುಡಿ

ಚನ್ನಮ್ಮನ ಕಿತ್ತೂರು: ಬಿಜೆಪಿ ಟಿಕೇಟ್ ಘೋಷಣೆಯಾದ ಕ್ಷಣದಿಂದಲೂ ಬೆಳಗಾವಿ ಜಿಲ್ಲಾ ಬಿಜೆಪಿ ವಲಯದಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷೆಗಳು ಹುಟ್ಟಿದ್ದು ಅಸಮಾಧಾನಿತರ ಪಕ್ಷಾಂತರ ಜಂಪಿಂಗ್ ನಿಂದಾಗಿ ಬಿಜೆಪಿ ಒಳಗೊಳಗೆ ಬೇಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.  ಸದ್ಯ ಬಹು ಚರ್ಚಿತ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ವಂಚಿತ ಲಕ್ಷ್ಮಣ ಸವದಿ ಬಹಿರಂಗವಾಗಿ ಅಸಮಾಧಾನ ಸ್ಪೋಟಿಸಿದ್ದು ರಾಜೀನಾಮೆ ನೀಡಿದ ಬೆನ್ನಲ್ಲೇ ಕೈ ಪಡೆ ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ.  ಬಂಡಾಯದ ಬೇಗುದಿಗೆ ಬಿಜೆಪಿ ಸಾಕಷ್ಟು ಹಿನ್ನಡೆ ಉಂಟಾಗಿದ್ದು ಸವದಿ ಕೈ ಹಿಡಿಯುವುದರಿಂದ ಜಿಲ್ಲೆಯ ಕಿತ್ತೂರು, ಕಾಗವಾಡ, ಅಥಣಿ, ಬೆಳಗಾವಿ ಉತ್ತರದ ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಬೆಳಗಾವಿ ಜಿಲ್ಲೆಯ  ಕೈ ಪಡೆಗೆ ಸವದಿ ಆಗಮನದಿಂದ ಮತ್ತಷ್ಟು ಆನೆ ಬಲ ಬಂದಂತಾಗಿದ್ದು ಕೈ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ.

ಲಕ್ಷ್ಮಣ ಸವದಿ ಇಂದು ಸಂಜೆ ಬಿಜೆಪಿ ತೊರೆದು ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು  ಸೇರಲಿದ್ದಾರೆ.

ಶಿಷ್ಯನ ಸೋಲಿಗೆ ಗುರುವೆ ಮುಂದಾಗ್ತಾರಾ?

ಬಿಜೆಪಿ ಪಕ್ಷದಲ್ಲಿ ಲಕ್ಷ್ಮಣ ಸವದಿ ಅತ್ಯಂತ ಪ್ರಭಾವಿ ನಾಯಕನಾಗಿದ್ದು ಸಹಕಾರಿ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ಮೂಲಕ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ ಕಿತ್ತೂರು ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಲಕ್ಷ್ಮಣ ಸವದಿ ಶಿಷ್ಯರೆಂದೇ ಬಿಂಬಿತರಾಗಿದ್ದಾರೆ. ಸದ್ಯ ಬಿಜೆಪಿ ತೊರೆಯುವ ಹೊಸ್ತಿಲಲ್ಲಿ ನಿಂತಿರುವ ಲಕ್ಷ್ಮಣ ಸವದಿ ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ಅವರನ್ನು ಗೆಲ್ಲಿಸಲು ತನ್ನ ಶಿಷ್ಯನ ಸೋಲಿಗೆ ಗುರುವೆ ಮುಂದಾಗ್ತಾರಾ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಕೈ ಸೇರ್ಪಡೆಗೆ ಲಕ್ಷ್ಮಣ ರೇಖೆ ಹಾಕಿದ್ರಾ ಸವದಿ?

ಕಾಂಗ್ರೆಸ್ ಸೇರ್ಪಡೆಯ ಹೊಸ್ತಿಲಲ್ಲಿ ನಿಂತ ಲಕ್ಷ್ಮಣ ಸವದಿ ಅವರು ಮೂರು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗುತ್ತಿದ್ದು ಅಥಣಿ ಕ್ಷೇತ್ರದ ಟಿಕೇಟ್ ನೀಡಬೇಕು, ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಮತ್ತು ವಿರೋಧಿಗಳು ಬಾರದಂತೆ ನೋಡಿಕೊಂಡು ಅಥಣಿ ಕ್ಷೇತ್ರದ ಸಮುಗ್ರ ನೀರಾವರಿ ಯೋಜನೆಗೆ ಅನುದಾನ ಒದಗಿಸಬೇಕು ಅನ್ನೋ ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಸವದಿ ಕೈ ಸೇರ್ಪಡೆಯಿಂದ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮತ್ತಷ್ಟು ಬದಲಾವಣೆ ಆಗಲಿದ್ದು ಕಾಂಗ್ರೆಸ್ ಶತಾಯ ಗತಾಯ 15 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!