Friday, September 20, 2024

ಕಿತ್ತೂರು ಬಿಜೆಪಿ ಬಣದಲ್ಲಿ ಬಂಡಾಯದ ಸುಳಿವು! ಈ ಬಾರಿ ಟಿಕೇಟ್ ಯಾರಿಗೆ? ಕುತೂಹಲ

♦ವರದಿ: ಉಮೇಶ ಗೌರಿ. (ಯರಡಾಲ)

ಬೆಳಗಾವಿ: ಕಿತ್ತೂರು ಬಿಜೆಪಿಯಲ್ಲಿ ಭಿನ್ನಮತ ಸುಳಿವು ಕಂಡು ಬಂದಿದ್ದು ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ನಾಯಕತ್ವದ ವಿರುದ್ದ ಅಸಮಾಧಾನ ಬುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ಗದ್ದಲದಲ್ಲಿ ಮತ ವಿಭಜನೆ ಆಗಿದ್ದರಿಂದ ಪರ್ಯಾಯ ನಾಯಕತ್ವದ ಕೊರತೆಯಿಂದ ಬಿಜೆಪಿ ಸುಲಭ ಗೆಲುವು ಪಡೆದಿತ್ತು. ಆಗಲೂ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರೂ ಕ್ರಮೇಣ ಬಿಜೆಪಿ ಹೈ ಕಮಾಂಡ್ ಅಳೆದೂ ತೂಗಿ ಮಹಾಂತೇಶ ದೊಡ್ಡಗೌಡರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಒಗ್ಗಟ್ಟಿನ ಮಂತ್ರ ಜಪಿಸಿ ಶತಾಯ ಗತಾಯ ಪಕ್ಷದ ಗೆಲುವಿಗೆ ಶ್ರಮಿಸಿದ ನಾಯಕರನ್ನು ಈ ಐದು ವರ್ಷಗಳ ಅವಧಿಯಲ್ಲಿ ಹಾಲಿ ಶಾಸಕರು ಕಡೆಗಣಿಸಿರುವುದಾಗಿ ಬಿಜೆಪಿ ವಲಯದಲ್ಲಿ ಗುಸು ಗುಸು ಸುದ್ದಿಯಾಗಿದೆ.

ಮೂಲ ಮತ್ತು ವಲಸೆ, ನಾಯಕತ್ವದ ಅಸಮರ್ಥತೆ, ಪಕ್ಷ ಸಂಘಟನೆ, ಕಾರ್ಯಕರ್ತರ ಕಡೆಗಣನೆ ಮೊದಲಾದ ಅಸಮಾಧಾನದ ಹೊಗೆ ಇದೀಗ ಕಿತ್ತೂರು ಬಿಜೆಪಿ ವಲಯದಲ್ಲೂ ಕಂಡು ಬಂದಿದ್ದು ರಂಗಾಯಣದ ನಿರ್ದೇಶಕ ಕಿತ್ತೂರು ಕ್ಷೇತ್ರದ ಮಾಜಿ ಜಿ.ಪಂ ಸದಸ್ಯ ರಮೇಶ ಪರವಿನಾಯ್ಕರ ಇತ್ತೀಚೆಗೆ ಸುದ್ದಿ ವಾಹಿನಿಯೊಂದರಲ್ಲಿ ಈ ಬಗ್ಗೆ ತಾನೂ ಓರ್ವ ಟಿಕೇಟ್ ಆಕಾಂಕ್ಷಿ ಎಂದು ಘೋಷಿಸುವ ಮೂಲಕ ಪಕ್ಷದೊಳಗಿನ ಭಿನ್ನಮತದ ಅಸಮಾಧಾನ ಸ್ಪೋಟಿಸಿದ್ದಾರೆ. ಬಿಜೆಪಿ ಮಂಡಳ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ ಕೂಡ ಟಿಕೇಟ್ ಗಾಗಿ ಕಸರತ್ತು ನಡೆಸಿದ್ದರು ಎನ್ನಲಾಗಿದ್ದು, ಎಂಕೆ ಹುಬ್ಬಳ್ಳಿ ಯ ದಂತ ವೈದ್ಯ ಡಾ.ಜಗದೀಶ ಹಾರುಗೊಪ್ಪ ಅವರು ಕೂಡ ಕಳೆದ ಇಪ್ಪತ್ತು ವರ್ಷಗಳಿಂದ ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ನಾನು ಕೂಡ ಟಿಕೇಟ್ ಆಕಾಂಕ್ಷಿ ಎನ್ನುವ ಮೂಲಕ ಟಿಕೇಟ್ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಸುದ್ದಿಯಾಗಿದೆ. ಇದರೊಂದಿಗೆ ಮಾಜಿ ಕಿತ್ತೂರು ಬಿಜೆಪಿ ಮಂಡಳ ಅಧ್ಯಕ್ಷ ಸಿದ್ದಯ್ಯ ಹಿರೇಮಠ ಕೂಡ ಟಿಕೇಟ್ ಗಾಗಿ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕ ಸುರೇಶ ಮಾರಿಹಾಳ ಅವರು ಪಕ್ಷ ಸಂಘಟನೆ ಹಾಗೂ ನಾಯಕತ್ವದ ಅಸಮರ್ಥತೆಯಿಂದಾಗಿ ಟಿಕೇಟ್ ವಂಚಿತರಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಇದೀಗ ಮತ್ತದೇ ಸಮೂಹ ನಾಯಕತ್ವದ ಅಸಮರ್ಥತೆ ಎದುರಾಗಿದ್ದು ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಗೆಲುವಿಗೆ ಬಂಡಾಯದ ಬಿರುಗಾಳಿ ಅಡ್ಡಗೋಡೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಬಾಬಾಸಾಹೇಬ ಪಾಟೀಲ ಅವರಿಗೆ ಕೈ ಟಿಕೇಟ್ ಘೋಷಣೆಯಾದ ಬೆನ್ನಲ್ಲೇ ಕೈ ಪಾಳಯದಲ್ಲೂ ಕೂಡ ಬಂಡಾಯ ಬುಗಿಲೇಳುವ ಸಾಧ್ಯತೆ ದಟ್ಟವಾಗಿದ್ದರೂ ಡಿ.ಬಿ.ಇನಾಮದಾರ ಅವರ ಬೆಂಬಲಿಗರ ನಿರ್ಧಾರದ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ. ಈ ಮೂಲಕ ಹಾಲಿ ಶಾಸಕರ ಗೆಲುವು ಸುಲಭ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಬಿಜೆಪಿ ಟಿಕೇಟ್ ಘೋಷಣೆಯಾಗಿಲ್ಲ. ಹೀಗಾಗಿ ಹಾಲಿ ಶಾಸಕರೂ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಟಿಕೇಟ್ ಪ್ರಕಟನೆಯಾದ ನಂತರ ಆಕಾಂಕ್ಷಿಗಳು ಬಂಡೇಳುವ ಸಾಧ್ಯತೆ ಬಿಜೆಪಿಯಲ್ಲೂ ದಟ್ಟವಾಗಿದ್ದರಿಂದ ಹಾಲಿ ಶಾಸಕರ ಮುಂದಿನ ನಡೆ ಏನು ಮತ್ತು ಬಿಜೆಪಿ ಗೆಲುವಿಗೆ ಯಾವ ಅಸ್ತ್ರ ಪ್ರಯೋಗಿಸಲಿದೆ ಎನ್ನುವುದು ಸದ್ಯದ ಚರ್ಚೆಯಲ್ಲಿರುವ ವಿಷಯ.

ಜಿಲ್ಲೆ

ರಾಜ್ಯ

error: Content is protected !!