Sunday, September 8, 2024

ಪುಣ್ಯಕೋಟಿ ದತ್ತು ಯೋಜನೆಗೆ ನೌಕರರು ಬಲಿ! ಗೋ ರಕ್ಷಣೆ ಹೆಸರಲ್ಲಿ ಉಳಿದ ಪ್ರಾಣಿಗಳು ಮತ್ತು ರೈತರಿಗೆ ಮಾಡುವ ಅಪಮಾನ.

ಲೇಖನ:ಉಮೇಶ ಗೌರಿ (ಯರಡಾಲ)

ಹಿಂದೆಲ್ಲ ಬಹುತೇಕ ರೈತರು ಕೃಷಿ ಹಾಗೂ ತೋಟಗಾರಿಕೆಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಮಾಡಿಕೊಂಡು ಹಾಲು ಹಾಗೂ ಶಗಣೆ ಗೊಬ್ಬರವನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದರು. ಆದರೆ ಇಂದು ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದ ಹೊಲ-ಗದ್ದೆಗಳೆಲ್ಲವೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವುದರಿಂದ ರೈತನು ಕೂಡ ಕೃಷಿ ಉತ್ಪನ್ನಗಳನ್ನು ಕೊಂಡುಕೊಳ್ಳುವ ಪ್ರವೃತ್ತಿಗೆ ಸಿಲುಕಿದ್ದಾನೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲೂ ದನಕರುಗಳ ಸಾಕಣೆ ಪ್ರಮಾಣ ಪ್ರತಿದಿನವೂ ಕ್ಷೀಣಿಸುತ್ತಿದೆ. ಇನ್ನು, ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರ ವಿಷಕಾರಿ ವಸ್ತುಗಳನ್ನು ಸೇವಿಸಿ ಜೀರ್ಣಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ದನಕರಗಳು ಎದುರಿಸಬೇಕಾಗಿ ಬಂದಿದೆ.

ಈ ದಿಶೆಯಲ್ಲಿ ನಿರ್ಗತಿಕ, ಪರಿತ್ಯಕ್ತ, ಅನಾರೋಗ್ಯ, ಅಶಕ್ತ, ವಯಸ್ಸಾದ ಜಾನುವಾರುಗಳನ್ನು ಹಾಗೂ ರೈತರು ಸಾಕಲಾಗದ ಹಸು-ಕರುಗಳನ್ನು ಪೋಷಿಸಲು, ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಒತ್ತು ನೀಡುವ ಸಲುವಾಗಿ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಇತ್ತೀಚೆಗೆ ಸರಕಾರಿ ನೌಕರರಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ನೆರವಾಗಲು ಮನವಿ ಮಾಡಿದ್ದರು.ಇದರ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ದೇಣಿಗೆ ನೀಡುವ ಸಮ್ಮತಿ ಪತ್ರವನ್ನು ಹಸ್ತಾಂತರಿಸಿದ್ದು, ಸುಮಾರು 80 ರಿಂದ 100 ಕೋಟಿ ರೂಪಾಯಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ಆದರೆ ಸರ್ಕಾರವು ಪುಣ್ಯಕೋಟಿ ಯೋಜನೆ ಅಡಿ ಕೇವಲ ಹಸುಗಳನ್ನು ಪೋಷಿಸಲು ಹೊರಟಿರುವುದು ಯಾವ ನ್ಯಾಯ? ಇತರ ಪಶು-ಪ್ರಾಣಿಗಳಿಗೂ ಆಹಾರ ನೀರು ಒದಗಿಸಬೇಕಲ್ಲವೆ. ಪಶು ಸಂಗೋಪನೆಗೆ ಒತ್ತು ಕೊಡದೇ ಕೇವಲ ಹಸುಗಳಿಗೆ ಮಾತ್ರ ಏಕೆ ಈ ಒತ್ತು? ಇದು ಸರ್ಕಾರದ ತಾರತಮ್ಯ ನೀತಿಯಲ್ಲವೇ? ಕೆಲವರಿಗೆ ಹಸು ದೈವವಾದರೆ ಇನ್ನೂ ಕೆಲವರಿಗೆ ಎತ್ತು,ಎಮ್ಮೆ ಕೋಣ ಇತ್ಯಾದಿ ಪ್ರಾಣಿಗಳು ದೈವವಾಗಿವೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಸುಗಳನ್ನು ಮಾತ್ರವೇ, ಅದೂ ನೌಕರರ ವೇತನದ ಹಣದಲ್ಲಿ ವೈಭವೀಕರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೆಲವರಲ್ಲಿ ಕಾಡುತ್ತಿದೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಿಯೋಗ ಮುಖ್ಯಮಂತ್ರಿಗೆ ದೇಣಿಗೆ ನೀಡುವ ಸಮ್ಮತಿ ಪತ್ರವನ್ನು ಹಸ್ತಾಂತರಿಸಿದ್ದು.

ಈ ಹಿಂದೆ ಕೂಡ ಬರ, ಪ್ರವಾಹ, ಕೋವಿಡ್‌ ಮುಂತಾದ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ನೌಕರರು ಸರಕಾರಕ್ಕೆ ನೆರವು ನೀಡಿದ್ದಾರೆ.ಆ ನೌಕರರ ಬಹು ದಿನಗಳ ಬೇಡಿಕೆಯಾದ ಎನ್.ಪಿ.ಎಸ್. ತೆಗೆದು ಹಾಕುವ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಇಲ್ಲ ಎಂದು ಇದೇ ಮುಖ್ಯಮಂತ್ರಿಗಳು ಹೇಳಿದ್ದಾರೆ, ಅಲ್ಲದೆ ಕೊರೋನಾ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಕೊಡಬೇಕಾದ 18 ತಿಂಗಳ ತುಟ್ಟಿಭತ್ಯೆ ತಡೆ ಹಿಡಿದ ಸರ್ಕಾರ ಈವರೆಗೂ ನೌಕರರಿಗೆ ಕೊಟ್ಟಿಲ್ಲ. ಆರನೇ ವೇತನ ಅವಧಿ ಮುಗಿದು ನಾಲ್ಕೈದು ತಿಂಗಳೂ ಕಳೆದರೂ ಏಳನೇ ವೇತನ ಆಯೋಗ ರಚಿಸಿಲ್ಲ.ಮತ್ತೆ ನೆರವು ಕೇಳಿರುವ ಇವರು ನೌಕರರ ಹಿತ ಕಾಪಾಡುವರೆ?

ಇನ್ನೂ ನವೆಂಬರ್‌ ನಲ್ಲಿ ಕಟಾವಣೆ ಮಾಡಲು ಮುಖ್ಯಮಂತ್ರಿ ಕೇಳಿದ್ದ ಹಿನ್ನೆಲೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಅನುಮತಿ ಪತ್ರ ಕೊಟ್ಟಿರುವುದಕ್ಕೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಸರ್ಕಾರದ ಈ ಯೋಜನೆಗೆ ಇಚ್ಛೆ ಪಡುವ ನೌಕರರು ತಮ್ಮ ಸಂಬಳದಿಂದ ವೇತನ ಕಡಿತ ಮಾಡಲು ಬಟವಾಡೆ ಅಧಿಕಾರಿಗಳಿಗೆ ಒಪ್ಪಿಗೆ ನೀಡಿ ಕಟಾವಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೇ ಹೊರತು, ಒಪ್ಪಿಗೆ ಇಲ್ಲದ ನೌಕರರ ಸಂಬಳದಲ್ಲಿ ಯಾವುದೇ ಕಾರಣಕ್ಕೂ ಕಟಾವಣೆ ಮಾಡಬಾರದು ಎಂದು ಒಕ್ಕೂಟವು ಒತ್ತಾಯಿಸಿದೆ. ಒಂದೊಮ್ಮೆ ಹಾಗೆ ಮಾಡಿದರೆ ಅದು ಸಂವಿಧಾನದತ್ತ ಆಯ್ಕೆಯ ಹಕ್ಕಿನ ಉಲ್ಲಂಘನೆ ಎಂದು ತಿಳಿಸಿದೆ.

ಅದಲ್ಲದೆ ಈ ಗೋವುಗಳ ವ್ಯಾಮೋಹ ಮುಖ್ಯಮಂತ್ರಿಗಳ ಮನದಲ್ಲಿ ಮೂಡಿದ ಜನಪರ ಯೋಜನೆಯಂತು ಖಂಡಿತವಾಗಿ ಅಲ್ಲ. ಸಂಘ ಪರಿವಾರದ ಕನಸಿನ ಕೂಸಾದ ಯೋಜನೆಯನ್ನು ಅವರ ಓಲೈಕೆಗಾಗಿ ಮುಖ್ಯಮಂತ್ರಿಗಳು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಗೋವು ಸಾಕುವ ಯೋಜನೆಯನ್ನು ಸಂಘ ಪರಿವಾರ ಬೇಕಾದರೆ ಕೈಗೆತ್ತಿಗೊಂಡು ತಮ್ಮ ನಿಷ್ಠೆ ಪ್ರದರ್ಶನ ಮಾಡಲಿ, ಅನೇಕ ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವ ಜವಾಬ್ದಾರಿ ಸರಕಾರದ ಮೇಲಿದೆ.

ಕೃಷಿ ಇಲಾಖೆ ಮತ್ತು ಪಶುಪಾಲನೆ ಇಲಾಖೆ ಜಂಟಿಯಾಗಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕಾಗಿದೆ.ಅದನ್ನು ಬಿಟ್ಟು ಕೇವಲ ಭಾವನಾತ್ಮಕ ಅಂಶವಾದ ಗೋವಿನ ರಕ್ಷಣೆ ಮಾಡುವುದು ಉಳಿದ ಪ್ರಾಣಿಗಳು ಮತ್ತು ರೈತರಿಗೆ ಮಾಡುವ ಅಪಮಾನ. ಸರ್ಕಾರ ಗುರುತ್ತಿಸಿರುವ ಗೋಶಾಲೆಗಳು ನಾಪತ್ತೆಯಾಗಿರುವ ವಿಷಯವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.

ಮಾನ್ಯ ಮುಖ್ಯಮಂತ್ರಿಗಳು ಮತ್ತು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಸದರಿ ನಿರ್ಣಯವನ್ನು ಮರು ಪರಿಶೀಲನೆ ಮಾಡಿ, ಹಣ ದುರುಪಯೋಗವನ್ನು ತಡೆಯಬೇಕಾಗಿದೆ. ಧರ್ಮ ರಾಜಕಾರಣ ಮತ್ತು ಭಾವನಾತ್ಮಕ ವಿಷಯಗಳ ಚರ್ಚೆ ಮಾಡಿ ಜನರ ದಿಕ್ಕು ತಪ್ಪಿಸುವುದಕ್ಕಾಗಿ ನಿಲ್ಲಿಸಬೇಕು.

ಜಿಲ್ಲೆ

ರಾಜ್ಯ

error: Content is protected !!