Wednesday, September 18, 2024

ಸವಾಲಿನಲ್ಲಿ ಸೋತ ನಿತಿನ್ ಗಡ್ಕರಿ ! ಎಂಪಿಗೆ ಕೊಡಬೇಕು 32 ಸಾವಿರ ಕೋಟಿ.

ಭೋಪಾಲ್: ಸವಾಲು ಸೋತ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶದ ಸಂಸದರಿಗೆ 32 ಸಾವಿರ ಕೋಟಿ ರೂ.ಹಣ ನೀಡಬೇಕಿದೆ.

ಹೌದು, ನಿತಿನ್ ಗಡ್ಕರಿ ಅವರ ಸವಾಲನ್ನು ಸ್ವೀಕರಿಸಿದ ಸಂಸದರೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವೇ ತಿಂಗಳುಗಳಲ್ಲಿ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

ಉಜ್ಜಯಿನಿಯ ಸಂಸದ ಅನಿಲ್ ಫಿರೋಜಿಯಾ ಅವರು ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸದರು ಗಡ್ಕರಿ ಅವರಲ್ಲಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಗಡ್ಕರಿಯವರು ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಿ, ನೀವು ಇಳಿಸಿಕೊಳ್ಳುವ ಪ್ರತಿ ಕೆಜಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಗಡ್ಕರಿ ಅವರು ಚಾಲೆಂಜ್ ನೀಡಿದ ಸಮಯ 135 ಕೆಜಿ ಇದ್ದ ಸಂಸದರು, ತಮ್ಮ ಕ್ಷೇತ್ರಕ್ಕಾಗಿ ವರ್ಕೌಟ್, ಡಯಟ್ ಮಾಡಿ ಇದೀಗ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಈಗ ಸಂಸದರು 93 ಕೆಜಿ ತೂಗುತ್ತಿದ್ದು ಗಡ್ಕರಿಯವರ ಚಾಲೆಂಜ್ ಗೆದ್ದಿದ್ದಾರೆ.

ಫಿರೋಜಿಯಾ ಅವರು ಜೂನ್‌ನಲ್ಲಿಯೇ 15 ಕೆಜಿ ತೂಕವನ್ನು ಇಳಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಆಂದೋಲನದ ವೇಳೆ ಮಾತನಾಡಿ, ಗಡ್ಕರಿ ನೀಡಿದ ಚಾಲೆಂಜ್ ಬಗ್ಗೆ ತಿಳಿಸಿದ್ದರು. ನಾನು ಕಳೆದುಕೊಳ್ಳುವ ಪ್ರತಿ ಕೆಜಿಗೆ ಗಡ್ಕರಿಯವರು 1,000 ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಾನು ಈಗಾಗಲೇ 15 ಕೆಜಿ ಕಳೆದುಕೊಂಡಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಇನ್ನಷ್ಟು ತೂಕವನ್ನು ಕಳೆದುಕೊಳ್ಳುತ್ತೇನೆ. ನಾನು ತೂಕ ಇಳಿಸಿಕೊಳ್ಳುವುದರಿಂದ ಉಜ್ಜಯಿನಿಗೆ ಹೆಚ್ಚಿನ ಅನುದಾನ ಸಿಗುತ್ತದೆಯಾದರೆ ನಾನು ಫಿಟ್‌ನೆಸ್ ಆಡಳಿತ ಮುಂದುವರೆಸಲು ಸಿದ್ಧ ಎಂದಿದ್ದರು.

ಫಿರೋಜಿಯಾ ಅವರು ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿ, ತಾವು 32 ಕೆಜಿ ಕಳೆದುಕೊಂಡಿರುವುದರ ಬಗ್ಗೆ ತಿಳಿಸಿದ್ದರು. ಗಡ್ಕರಿ ನೀಡಿರುವ ಭರವಸೆಯಂತೆ ಅವರು 2,300 ಕೋಟಿ ರೂ. ವೆಚ್ಚದ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.

 

 

 

 

ಕೃಪೆ:ಟಿವಿಪಬ್ಲಿಕ್

ಜಿಲ್ಲೆ

ರಾಜ್ಯ

error: Content is protected !!