Wednesday, September 11, 2024

ಮೋದಿ ಅವರು ಅತ್ಯಾಚಾರಿಗಳ ಪರವಾಗಿದ್ದಾರೆ: ರಾಹುಲ್ ಗಾಂಧಿ

ಹೊಸದಿಲ್ಲಿ: ಗುಜರಾತ್ ಗಲಭೆ ಘಟನೆ ವೇಳೆ ಬಿಲ್ಕಿಸ್ ಬಾನೊ ಎಂಬ ಗರ್ಭಿಣಿ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಪುಟ್ಟ ಮಕ್ಕಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ದಾರುಣವಾಗಿ ಕೊಂದಿದ್ದ 11 ಮಂದಿ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿದ ಗುಜರಾತ್ ಮತ್ತು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಕೆಂಪುಕೋಟೆಯಿಂದ, ಮಹಿಳೆಯರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಾರೆ; ಆದರೆ ವಾಸ್ತವದಲ್ಲಿ ಅತ್ಯಾಚಾರಿಗಳ ಜತೆ ನಿಲ್ಲುತ್ತಾರೆ” ಎಂದು ಸ್ವಾತಂತ್ರ್ಯ ದಿಣಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾಡಿದ ಭಾಷಣದಲ್ಲಿ ಮಹಿಳೆಯರನ್ನು ಗೌರವಿಸುವ ಕುರಿತಾಗಿ ಹೇಳಿದ್ದ ಮಾತುಗಳನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.

“ಪ್ರಧಾನ ಮಂತ್ರಿಗಳ ಭರವಸೆ ಮತ್ತು ಉದ್ದೇಶಗಳ ನಡುವೆ ಇರುವ ವ್ಯತ್ಯಾಸ ಸ್ಪಷ್ಟವಾಗಿದೆ. ಪ್ರಧಾನಿಯವರೇ ಮಹಿಳೆಯರಿಗೆ ವಂಚನೆ ಮಾಡಿದ್ದಾರೆ” ಎಂದು ರಾಹುಲ್ ಆರೋಪಿಸಿದ್ದಾರೆ.

ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಅವಧಿಗೂ ಮುನ್ನವೇ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಗುಜರಾತ್‌ನಲ್ಲಿನ ಬಿಜೆಪಿ ಸರ್ಕಾರ, ಶಿಫಾರಸು ಸಲ್ಲಿಸಿತ್ತು. ಅದಕ್ಕೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಎರಡು ವಾರಕ್ಕೂ ಮುನ್ನವೇ ಅಂಗೀಕಾರ ನೀಡಿತ್ತು ಎನ್ನುವುದು ಬಹಿರಂಗವಾಗಿದೆ. ಈ ಕುರಿತು ಕಿಡಿಕಾರಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅತ್ಯಾಚಾರಿಗಳ ಪರವಾಗಿರುವುದನ್ನು ಇದು ತೋರಿಸಿದೆ ಎಂದು ಹೇಳಿದ್ದಾರೆ.

ದೇಶದ 75ನೇ ಸ್ವಾತಂತ್ರ್ಯ ದಿನದಂದು ಮಾತನಾಡಿದ್ದ ಪ್ರಧಾನಿ, ಮಹಿಳಾ ಸಬಲೀಕರಣದ ಕುರಿತು ಭಾಷಣ ಮಾಡಿದ್ದರು. “ನಮ್ಮ ಮಾತು ಮತ್ತು ವರ್ತನೆಗಳಲ್ಲಿ, ಮಹಿಳೆಯರ ಘನತೆಯನ್ನು ಕುಂದಿಸುವಂತಹ ಯಾವುದೇ ಕೆಲಸ ಮಾಡದೆ ಇರುವುದು ಬಹಳ ಮುಖ್ಯವಾಗಿದೆ. ನಾನು ಪ್ರತಿ ಭಾರತೀಯರಿಗೂ ಮನವಿ ಮಾಡುತ್ತೇನೆ: ಪ್ರತಿದಿನದ ಜೀವನದಲ್ಲಿ ನಾವು ಮಹಿಳೆಯರ ಕುರಿತಾದ ಮನಸ್ಥಿತಿಯನ್ನು ಬದಲಿಸಿಕೊಳ್ಳಲು ಸಾಧ್ಯವೇ?” ಎಂದು ಮೋದಿ ಹೇಳಿದ್ದರು.

ವಿಪರ್ಯಾಸವೆಂದರೆ ಅದೇ ದಿನ, ಸನ್ನಡತೆ ಆಧಾರದಲ್ಲಿ 11 ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅವರನ್ನು, 15 ವರ್ಷಗಳ ಸೆರೆವಾಸದ ನಂತರ ಬಂಧಮುಕ್ತಗೊಳಿಸಲಾಗಿತ್ತು. ಅದಕ್ಕೂ ಮುನ್ನ ಅವರು ಸಾವಿರಾರು ದಿನಗಳನ್ನು ಪೆರೋಲ್ ಮೇಲೆ ಜೈಲಿನಿಂದ ಹೊರಗಿದ್ದು ಕಳೆದಿದ್ದರು ಎನ್ನುವುದು ಬಯಲಾಗಿದೆ.

 

 

 

 

ಕೃಪೆ:ವಿಕ

ಜಿಲ್ಲೆ

ರಾಜ್ಯ

error: Content is protected !!