Tuesday, April 16, 2024

ಯತ್ನಾಳ ಬಿಜೆಪಿಯ ಕೋರ ಕಮಿಟಿಯಲ್ಲಿ ಇಲ್ಲ:ಅರುಣ್ ಸಿಂಗ್. ಯತ್ನಾಳ ಬಿಜೆಪಿಯಿಂದ ಹೊರಬೀಳುತ್ತಾರಾ?

ಹುಬ್ಬಳ್ಳಿ : ಸದಾ ಕಾಲ ಪಕ್ಷದ ಹಿರಿಯ ನಾಯಕರನ್ನೇ ಟೀಕಿಸುತ್ತ , ಬಿಜೆಪಿ ಸಿದ್ದಾಂತಗಳ ವಿರುದ್ಧವೇ ಮಾತನಾಡುವ ಬಿಜೆಪಿಯ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ ಬಿಜೆಪಿಯಿಂದ ಹೊರಬೀಳುತ್ತಾರಾ? ಸದ್ಯದಲ್ಲೇ ಬಿಜೆಪಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಲಿದ್ಯಾ?ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಹೌದು ಎಂಬ ಉತ್ತರವೂ ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ್ ಪಾಟೀಲ್ ಯತ್ನಾಳ ವಿರುದ್ಧ ಭರ್ಜರಿ ಬಾಂಬ್ ಸಿಡಿಸಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ ಬಿಜೆಪಿಯ ಕೋರ ಕಮಿಟಿಯಲ್ಲಿ ಇಲ್ಲ. ಅವರ ಹೇಳಿಕೆ ಬಿಜೆಪಿ ಪಕ್ಷದ ಹೇಳಿಕೆ ಅಲ್ಲ. ಅಲ್ಪ ಸಂಖ್ಯಾತ ಮೀಸಲಾತಿ ಬಗ್ಗೆ ಯತ್ನಾಳ್ ಹೇಳಿಕೆ ಬಿಜೆಪಿ ಅಭಿಪ್ರಾಯವಲ್ಲ. ಅದು ಅವರ ಸ್ವಂತ ಹೇಳಿಕೆ‌ಮತ್ತು ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಯತ್ನಾಳ್ ಗೆ ಈಗಾಗಲೇ ಹಲವು ಭಾರಿ ಹಲವು ವಿಚಾರಕ್ಕೆ ಪಕ್ಷದಿಂದ ನೊಟೀಸ್ ಜಾರಿ ಮಾಡಿದ್ದೇವೆ.‌ಉತ್ತರ ಪಡೆದಿದ್ದೇವೆ. ಆದರೆ ಅವರ ಸ್ವಭಾವವೇ ಹಾಗೇ. ಹೀಗಾಗಿ ಏನು ಮಾಡಲು ಸಾಧ್ಯವಿಲ್ಲ‌. ಅವರ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷ ಕೈಗೊಳ್ಳಲಿದೆ ಎಂದಿದ್ದಾರೆ. ಆ ಮೂಲಕ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸದ್ಯವೇ ಬಿಜೆಪಿ ಹೈಕಮಾಂಡ್ ಶಿಸ್ತು ಕ್ರಮಕೈಗೊಳ್ಳಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.

ಯತ್ನಾಳ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ. ಮಾಜಿ ಸಿಎಂ ಬಿ.ಎಸ್.ವೈ ಸಿಎಂ ಸ್ಥಾನದಿಂದ ಕೆಳಗಿಳಿಯುವ ತನಕ ಯತ್ನಾಳ ಪ್ರತಿನಿತ್ಯ ಬಿ.ಎಸ್.ವೈ ಹಾಗೂ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಲೇ ಬಂದಿದ್ದರು. ಅದಾದ ಬಳಿಕ ನಾನು ಸಿಎಂ ಸ್ಥಾನದ ಆಕಾಂಕ್ಷಿ ಆದರೇ ಸಾವಿರಾರು ಕೋಟಿ ನೀಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದರು. ಈಗ ಮತ್ತೆ ಮೀಸಲಾತಿ ಹೇಳಿಕೆ ಮೂಲಕ ಚುನಾವಣೆ ಎದುರಿನಲ್ಲಿ ಪಕ್ಷಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ. ಈಗಾಗಲೇ ಸರ್ಕಾರದ ಮುಂದೇ ಎಸ್ ಸಿ-ಎಸ್ ಟಿ ಮತ್ತು ಪಂಚಮಸಾಲಿ ಮೀಸಲಾತಿ ವಿವಾದವಿದೆ. ಈ ಮಧ್ಯೆಯೇ ಪ್ರತಿಕ್ರಿಯೆ ನೀಡಿದ್ದ ಯತ್ನಾಳ ಮುಸ್ಲಿಂರು ಎರಡೆರಡು ಮೀಸಲಾತಿ ಪಡೆಯುತ್ತಿದ್ದು, ಅವರಿಗೆ ಅಲ್ಪಸಂಖ್ಯಾತ ಮೀಸಲಾತಿ ತೆಗೆಯಬೇಕು ಎಂದಿದ್ದರು.

ಮೊದಲೇ ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಪಡೆದಿದ್ದು , ಯತ್ನಾಳ ಈ ಹೇಳಿಕೆ ಚುನಾವಣೆ ಹೊತ್ತಿನಲ್ಲಿ ಮತ್ತಷ್ಟು ಡ್ಯಾಮೇಜ್ ಮಾಡೋ ಸಾಧ್ಯತೆ ಇದೆ‌. ಹೀಗಾಗಿ ಬಿಜೆಪಿ ಯತ್ನಾಳ್ ವಿರುದ್ಧ ಶಾಶ್ವತ ಶಿಸ್ತು ಕ್ರಮಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಯತ್ನಾಳ ಬಿಜೆಪಿಯಿಂದ ಹೊರಗೆ ಬಿದ್ದಲ್ಲಿ ಬಿಜೆಪಿ ನಾಯಕರಿಗೆ ಮತ್ತಷ್ಟು ಮುಜುಗರ ತರೋದು ಖಚಿತವಾಗಿರೋದರಿಂದ ಶಿಸ್ತುಕ್ರಮ ಕೂಡ ಸುಲಭವಾಗಿಲ್ಲ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಜಿಲ್ಲೆ

ರಾಜ್ಯ

error: Content is protected !!