Saturday, May 25, 2024

ತಿರುಳ್ಗನ್ನಡ ಸಾಹಿತ್ಯ ಪರಿಷತ್ತಿನ ನಡೆ ಹಳ್ಳಿಯ ಕಡೆ

ಬೈಲಹೊಂಗಲ: ಪಟ್ಟಣದ ಶಿವಬಸವ ಕಲ್ಯಾಣ ಮಂಟಪದ ಹತ್ತಿರವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 5 ರಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

ಸಸಿಗೆ ನೀರು ಹಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಮಲ್ಲಿಕಾರ್ಜುನ ಛಬ್ಬಿ ಅವರು ಕಾವ್ಯವು ಅನುಭವಜನ್ಯವಾಗಬೇಕು, ಕವಿಯಾದವನು ಓದುವ ತುರ್ತು ಇದೆ. ನಾವೀಗ ನವ್ಯೋತ್ತರ ಕಾಲಘಟ್ಟದಲ್ಲಿದ್ದು ಶಬ್ಧಗಳ ಮಿತಿಯಾದ ಬಳಕೆಯೊಂದಿಗೆ ಪರಿಣಾಮಕಾರಿಯಾಗಿ ಕಾವ್ಯ ಕಟ್ಟುವತ್ತ ನಿರತರಾಗಬೇಕೆಂದ ಅವರು ಕಾವ್ಯ ಹಾಗೂ ಕಾವ್ಯದ ಲಕ್ಷಣಗಳ ಕುರಿತು ಉಪನ್ಯಾಸ ನೀಡಿದರು.  

ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಡಾ. ಎಫ.ಡಿ.ಗಡ್ಡಿಗೌಡರ ಮಾತನಾಡಿ ಕವಿಯ ನಿಜವಾದ ಧರ್ಮ ಬೆಳೆಯುವುದಲ್ಲ ಬೆಳೆಸುವುದು ಈ ನಿಟ್ಟಿನಲ್ಲಿ ತಿರುಳ್ಗನ್ನಡ ಸಾಹಿತ್ಯ ಪರಿಷತ್ತು ಅನೇಕ ಉದಯೋನ್ಮುಖರನ್ನು ಬೆಳೆಸುವ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾವ್ಯವೆನ್ನುವುದು ಕಲ್ಪನೆಯ ಕೂಸಾಗಿರದೆ ವರ್ತಮಾನದ ಮೌಲ್ಯಗಳನ್ನೊಳಗೊಂಡಿರಬೇಕೆಂದು ತಿಳಿಸಿದರು. ಈ ವೇಳೆ ವಿಷ್ಣುಪ್ರಿಯ ಪಿ.ಎಂ. ನಿಕ್ಕಮ್ಮನವರ ರಚಿಸಿ ಕುಮಾರ ಕಡೇಮನಿಯವರು ಹಾಡಿದ ಪುನಿತ ನೀ ಜನಜನಿತ ಎಂಬ ಹಾಡನ್ನು ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಿರುಳ್ಗನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಆನಂದ ಮಾಲಗಿತ್ತಿಮಠ ಅವರು ಕವಿಯ ಮುಖ್ಯ ಲಕ್ಷಣ ಬೇರೊಬ್ಬರ ಕವಿತೆಯನ್ನು ಓದುವುದರ ಜೊತೆಗೆ ವ್ಯಕ್ತಿಗಳನ್ನೂ ಓದುವದಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯ ಬದುಕೇ ಒಂದು ಜೀವಂತ ಕಾವ್ಯ. ಸಾಹಿತ್ಯವನ್ನು ಗ್ರಾಮೀಣ ಜನರಿಗೆ ತಲುಪಿಸಲು ತಿರುಳ್ಗನ್ನಡ ಸಾಹಿತ್ಯ ಪರಿಷತ್ತು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರಲ್ಲಿ ಮುಖ್ಯವಾಗಿ ಪರಿಷತ್ತಿನ ನಡೆ- ಹಳ್ಳಿಯ ಕಡೆ ಎಂಬುವುದು ಪ್ರಮುಖವಾಗಿದೆ ಎಂದು ತಿಳಿಸಿದರು.

ಗೌರವ ಅಧ್ಯಕ್ಷ ಎನ್.ಡಿ. ಚಿನ್ನಪ್ಪಗೌಡ ಅವರು ಕವಿಗೋಷ್ಟಿಯಲ್ಲಿ ಕವಿಗಳು ವಾಚಿಸಿದ ಎಲ್ಲ ಕವಿತೆಗಳ ವಿಶ್ಲೇಷಣೆ ಮಾಡಿ ಸಾಹಿತ್ಯಿಕ ಕಾರ್ಯಕ್ರಮಗಳು ನಮ್ಮ ಪರಿಷತ್ತಿನ ವತಿಯಿಂದ ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಕವಿಗಳು ಯಾರ ಶೈಲಿಯನ್ನೂ ಅನುಕರಿಸದೇ ಸ್ವಶೈಲಿಯನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿ,ತಿರುಳ್ಗನ್ನಡ ಸಾಹಿತ್ಯ ಪರಿಷತ್ತಿನ ಏಳ್ಗೆಗೆ ತನು ಮನ ಧನದಿಂದ ಶ್ರಮಿಸುತ್ತಿರುವ ಪರಿಷತ್ತಿನ ಪದಾಧಿಕಾರಿಗಳಾದ ಗೋದಾವರಿ ಪಾಟೀಲ, ಅಮಜವ್ವ ಭೋವಿ, ಜಯಶ್ರೀ ವಾಲಿಶೆಟ್ಟರ, ಸಿದ್ದು ನೇಸರಗಿ,ಸಂದೀಪ ಕುಲಕರ್ಣಿ ಹಾಗೂ ಚಂದ್ರು ಹೈಬತ್ತಿಯವರ ಕಾರ್ಯವನ್ನು ಅಭಿನಂದಿಸಿದರು.

.
ಡಾ.ಮಲ್ಲಿಕಾರ್ಜುನ ಛಬ್ಬಿ, ಡಾ.ಫಕ್ಕೀರನಾಯ್ಕ ಗಡ್ಡಿಗೌಡರ, ಚಂದ್ರು ಹೈಬತ್ತಿ, ಕುಮಾರ ಕಡೆಮನಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿವಾನಂದ ಉಳ್ಳಿಗೇರಿ, ರಮೇಶ ಇಂಗಳಗಿ, ನಾಗರಾಜ ಹಂಪಸಾಗರ, ಶ್ರೀಶೈಲ ಹೆಬ್ಬಳ್ಳಿ, ಭಾರತಿ ಕಿತ್ತೂರಮಠ, ಜ್ಯೋತಿ ದಾಸೋಗ, ಪಕ್ಕಿರಪ್ಪ ಮಲಮೆತ್ರಿ, ಬಾಲರಾಜ್ ಬೇವಿನಗಿಡದ, ಶ್ರೀ ಬಸವರಾಜ ಮೇದಾರ, ಶ್ವೇತಾ ಕಾಡಣ್ಣವರ, ಸವಿತಾ ಪಾಟೀಲ, ಡಾ.ಪಾರ್ವತಿದೇವಿ ಪಾಟೀಲ ಸೇರಿದಂತೆ ಹಲವು ಕವಿ, ಕವಯಿತ್ರಿಯರು ಭಾಗವಹಿಸಿ ಕವನ ವಾಚನ ಮಾಡಿದರು.

ಬೆಳಗಾವಿ ಜಿಲ್ಲಾ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾದ ಮೋಹನಗೌಡ ಬ ಪಾಟೀಲ ಹಾಗೂ ಮೂಲಿಮನಿಯವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಯಶ್ರೀ ವಾಲಿಶೆಟ್ಟರ ಸ್ವಾಗತಿಸಿದರು, ಸವಿತಾ ಪಾಟೀಲ ಪ್ರಾರ್ಥಿಸಿದರು, ಶ್ರೀ ಸಿದ್ದು ನೇಸರಗಿ ಕಾರ್ಯವನ್ನು ನಿರೂಪಿಸಿದರು ಹಾಗೂ ಸಂದೀಪ ಕುಲಕರ್ಣಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!