Saturday, July 27, 2024

ಹನಿಟ್ರ್ಯಾಪ್‌ನಿಂದ 30 ಕೋಟಿ ರೂ. ಆಸ್ತಿ! ಐಷಾರಾಮಿ ಜೀವನ: ಈಕೆ ಬಾಯಿಬಿಟ್ಟರೆ ಸರ್ಕಾರವೇ ಅಲ್ಲೋಲ ಕಲ್ಲೋಲ..!

ಭುವನೇಶ್ವರ: ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಒಡಿಶಾದ 26 ವರ್ಷದ ಯುವತಿಯೊಬ್ಬಳು ರಾಜಕಾರಣಿಗಳು, ಉದ್ಯಮಿ, ಚಿತ್ರ ನಿರ್ಮಾಪಕರಂತಹ ಪ್ರಭಾವಿ ವ್ಯಕ್ತಿಗಳನ್ನು ʼಹನಿಟ್ರ್ಯಾಪ್‌ʼ  ಮಾಡಿ ನಾಲ್ಕೇ ವರ್ಷಗಳಲ್ಲಿ 30 ಕೋಟಿ ರೂ. ಆಸ್ತಿ ಸಂಪಾದಿಸಿರುವ ಸಂಗತಿ ಬಯಲಾಗಿದೆ.

ಈಕೆಯಿಂದ ಹನಿಟ್ರ್ಯಾಪ್‌ಗೆ ಒಳಗಾದವರಲ್ಲಿ 25 ರಾಜಕಾರಣಿಗಳೂ ಇದ್ದಾರೆ. ಅದರಲ್ಲಿ 18 ಮಂದಿ ಆಡಳಿತಾರೂಢ ಬಿಜೆಡಿಯ ಸಚಿವರು ಹಾಗೂ ಶಾಸಕರಾಗಿದ್ದಾರೆ. ಹೀಗಾಗಿ ಈಕೆ ಬಾಯಿಬಿಟ್ಟರೆ ಒಡಿಶಾದಲ್ಲಿ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಡಿ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಬಾಂಬ್‌ ಸಿಡಿಸಿವೆ.

ಅರ್ಚನಾ ನಾಗ್‌ ಎಂಬ ಈ ಮಹಿಳೆ ಹನಿಟ್ರ್ಯಾಪ್‌ನಿಂದ ಭವ್ಯ ಬಂಗಲೆ, ಅದಕ್ಕೆ ಬೇಕಾದ ವಿದೇಶಿ ಅಲಂಕಾರಿಕ ವಸ್ತುಗಳು, ಐಷಾರಾಮಿ ಕಾರುಗಳು, 4 ದುಬಾರಿ ನಾಯಿಗಳು ಹಾಗೂ ಒಂದು ಕುದುರೆಯನ್ನೂ ಹೊಂದಿದ್ದಾಳೆ. ಇಷ್ಟೆಲ್ಲಾ ಅಕ್ರಮ ಎಸಗಿದ್ದರೂ ಕೇವಲ 2 ದೂರುಗಳು ಮಾತ್ರ ಸಲ್ಲಿಕೆಯಾಗಿವೆ. ಅದನ್ನು ಆಧರಿಸಿ ಅಕ್ಟೋಬರ್‌ 6 ರಂದು ಅರ್ಚನಾಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?:
ಒಡಿಶಾದಲ್ಲೇ ಅತ್ಯಂತ ಹಿಂದುಳಿದ ಹಾಗೂ ಜನ ಹಸಿವಿನಿಂದ ಸಾಯುವ ಪ್ರದೇಶ ಎಂದು ಹಿಂದೆ ಕರೆಸಿಕೊಳ್ಳುತ್ತಿದ್ದ ಕಲಹಂಡಿ  ಜಿಲ್ಲೆಯ ಲಾಜಿಗಢದವಳು ಅರ್ಚನಾ ನಾಗ್‌. ಅದೇ ಜಿಲ್ಲೆಯ ಕೆಸಿಂಗಾ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದಳು. 2015ರಲ್ಲಿ ಭುವನೇಶ್ವರಕ್ಕೆ ಬಂದು ಖಾಸಗಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದಳು. ಬಳಿಕ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡಳು. ಅಲ್ಲಿ ಆಕೆಗೆ ಜಗಬಂಧು ಚಂದ್‌ ಎಂಬಾತನ ಪರಿಚಯವಾಗಿ 2018ರಲ್ಲಿ ವಿವಾಹವಾದಳು. ಬ್ಯೂಟಿಪಾರ್ಲರ್‌ ಉದ್ಯೋಗದಲ್ಲಿದ್ದಾಗ ಆಕೆ ಸೆಕ್ಸ್‌ ದಂಧೆ ನಡೆಸುತ್ತಿದ್ದಳು ಎಂಬ ಆರೋಪ ಇತ್ತು.

ಜಗಬಂಧು ಒಡಿಶಾದಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು ಶೋರೂಂ ನಡೆಸುತ್ತಿದ್ದ. ಹೀಗಾಗಿ ಆತನಿಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಿತ್ತು. ಆ ವ್ಯಕ್ತಿಗಳನ್ನು ಅರ್ಚನಾ ನಾಗ್‌ ಪರಿಚಯ ಮಾಡಿಕೊಂಡಿದ್ದಳು. ಅವರಿಗೆ ಸಂಗಾತಿ ಬೇಕೆಂದಾಗ ಒದಗಿಸುತ್ತಿದ್ದಳು. ಈ ರೀತಿ ಸಂಗಾತಿಗಳನ್ನು ಕಳುಹಿಸಿದಾಗ ರಹಸ್ಯ ಫೋಟೋ, ವಿಡಿಯೋ ಸೆರೆ ಹಿಡಿದು ಪ್ರಭಾವಿ ವ್ಯಕ್ತಿಗಳನ್ನು ಸುಲಿಗೆ ಮಾಡಲು ಆರಂಭಿಸಿದಳು.

ಇತ್ತೀಚೆಗೆ ಚಿತ್ರ ನಿರ್ಮಾಪಕರೊಬ್ಬರು ತಾನು ಯುವತಿಯರ ಜತೆ ಇರುವ ಫೋಟೋಗಳನ್ನು ತೋರಿಸಿ ಅರ್ಚನಾ ನಾಗ್‌ 3 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದರು. ಮತ್ತೊಂದೆಡೆ, ಅರ್ಚನಾ ನಾಗ್‌ ತನ್ನನ್ನು ಸೆಕ್ಸ್‌ ದಂಧೆಗೆ ನೂಕಿದ್ದಾಳೆ ಎಂದು ಯುವತಿಯೊಬ್ಬಳು ದೂರು ಸಲ್ಲಿಸಿದಳು. ಅದನ್ನು ಆಧರಿಸಿ ಅಕ್ಟೋಬರ್‌ 6ರಂದು ಅರ್ಚನಾಳನ್ನು ಬಂಧಿಸಲಾಯಿತು. ಸದ್ಯ ಎರಡೇ ದೂರು ದಾಖಲಾಗಿದೆ. ಇತರೆ ಬಲಿಪಶುಗಳು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಆಂತರಿಕ ತನಿಖೆಯ ಪ್ರಕಾರ 2018ರಿಂದ 2022ರವರೆಗಿನ ಅವಧಿಯಲ್ಲಿ ಅರ್ಚನಾ 30 ಕೋಟಿ ರೂ. ಆಸ್ತಿ ಸಂಪಾದಿಸಿದ್ದಾಳೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ, ಅರ್ಚನಾಳ ಶ್ರೀಮಂತಿಕೆ ಕಂಡು ಆಕೆ ಏನೋ ದೊಡ್ಡ ಸಾಧನೆ ಮಾಡಿದ್ದಾಳೆ ಎಂದು ಚಿತ್ರ ನಿರ್ಮಾಪಕರೊಬ್ಬರು ಸಿನಿಮಾ ಮಾಡಲು ಮುಂದಾಗಿದ್ದರು! ಅವರೀಗ ಬೇಸ್ತು ಬಿದ್ದಿದ್ದಾರೆ

 

 

 

 

 

 

(ಕೃಪೆ:ಟಿವಿಸುವರ್ಣಾ)

ಜಿಲ್ಲೆ

ರಾಜ್ಯ

error: Content is protected !!