Tuesday, May 28, 2024

ನಾನೇನು ದೊಡ್ಡ ಟೆರರಿಸ್ಟಾ..?ಮಾಜಿ ಸಚಿವ ವಿನಯ್ ಕುಲಕರ್ಣಿ.

ಬೆಳಗಾವಿ: ಜಿಲ್ಲೆಯಿಂದ ಹೊರಗೆ ಇಡಲು ನಾನೇನು ದೊಡ್ಡ ಟೆರರಿಸ್ಟಾ..? ಇದರಿಂದ ನನಗೆ ಬಹಳಷ್ಟು ನೋವಾಗಿದೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ತಮ್ಮ ನೋವನ್ನು ಹೊರ ಹಾಕಿದ್ದಾರೆ.

ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಭಾವುಕರಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ ನಾನೊಬ್ಬ ರೈತ, ನನ್ನ ಡೈರಿ ಫಾರ್ಮ್‌ ನಲ್ಲಿ ಸಾವಿರಾರು ಆಕಳುಗಳಿವೆ.ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ.ಧಾರವಾಡದಲ್ಲಿ ಇದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಫಾರ್ಮ್‌ಗೆ ಹೋಗುತ್ತಿದ್ದೆ. ಬೆಂಗಳೂರುಗೆ ಹೋದಾಗ ಮಾತ್ರ ನನ್ನ ಫಾರ್ಮ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿದಿನ ತಪ್ಪದೇ ಫಾರ್ಮ್‌ಗೆ ಹೋಗಿ ಆಕಳುಗಳ ಆರೈಕೆ ಮಾಡುತ್ತಿದ್ದೆ. ಆಕಳುಗಳನ್ನು ನೆನೆದು ಭಾವುಕರಾದರು.

ಇಷ್ಟು ದಿನ ಡೈರಿಗೆ ಹೋಗದೆ ಇರುವುದು ತುಂಬಾ ನೋವು ತರಿಸಿದೆ,ರಾಜ್ಯದ ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ದೂಡ್ಡ ಟೆರರಿಸ್ಟಾ..?,ಇದರಿಂದ ನನಗೆ ಬಹಳಷ್ಟು ನೋವಾಗಿದೆ. ಇವತ್ತಿಗೂ ನಾನು ನನ್ನ ಒಂದು ಎಕರೆಯನ್ನೂ ಯಾರಿಗೂ ಲಾವಣಿ ಕೊಟ್ಟಿಲ್ಲ. ಎಲ್ಲಾ ಹೊಲ ಹಾಗೂ ಡೈರಿಯನ್ನೂ ನನ್ನ 22 ವರ್ಷದ ಮಗಳು ನೋಡಿಕೊಳ್ಳುತ್ತಿದ್ದಾಳೆ. 

ಎರಡ್ಮೂರು ಆಕಳು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಾರೆ,ಅಂತದ್ರಲ್ಲಿ ಸಾವಿರಾರು ಆಕಳುಗಳನ್ನು ಕಟ್ಟಿದ ನಾನು ಮನೆಗೆ ಹೋಗದೆ ಅವುಗಳ ಮುಖ ನೋಡದೆ ಇರುವುದರಿಂದ ಅವುಗಳ ಕಥೆ ಏನಾಗಬಾರದು ಹೇಳಿ ಎಂದರು.

ನಾನು ಶಾಸಕನಾಗಿದ್ದಾಗ ಯಾವುದೇ ಪಕ್ಷ ನೋಡದೇ ನಮ್ಮ ಮನೆ ಬಾಗಿಲಿಗೆ ಬಂದ ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ.ನನ್ನ ಹಿತೈಸಿಗಳು, ವಿರೋಧ ಪಕ್ಷದವರು ಕೂಡ ಇಂತಹವರನ್ನು ಹೋಗಿ ಅಲ್ಲಿ ಇಟ್ಟರಲ್ಲ ಎಂದು ನೊಂದಕೊಳ್ಳುತ್ತಿದ್ದಾರೆ. ರಾಜಕಾರಣದಲ್ಲಿ ಈ ರೀತಿ ಷಡ್ಯಂತ್ರ ಮಾಡೋದು ಏನಿದೆ..? ಯಾರಿಗೂ ನನಗೆ ಬಂದ ಪರಿಸ್ಥಿತಿ ಬರೋದು ಬೇಡ. ನನ್ನ 25 ವರ್ಷದ ರಾಜಕೀಯದಲ್ಲಿ ಒಮ್ಮೆಯೂ ಈ ರೀತಿಯ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ನಾನು ದೇಶದ ಕಾನೂನನ್ನು ಗೌರವಿಸುತ್ತೇನೆ, ಕಾನೂನು ಹೋರಾಟ ಮುಂದುವರೆಸುವೆ,ಬರುವ ದಿನಗಳಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸ ವಿದೆ.ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವೆ, ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಧಾರವಾಡಕ್ಕೆ ಪ್ರವೇಶ ಅನುಮತಿ ಸಿಗದಿದ್ದರೂ ಹೊರಗಡೆ ಇದ್ದೇ ಕಣಕ್ಕಿಳಿಯುವೆ. ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ ಕ್ಷೇತ್ರ ಬದಲಿಸುವುದಿಲ್ಲ ಎಂದು ವಿನಯ ಕುಲಕರ್ಣಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!