Wednesday, September 11, 2024

ಭವ್ಯ ಭಾರತದ ಕನಸು ಕಂಡವರು, ಆ ಕನಸು ನನಸು ಮಾಡಲು ಶ್ರಮಿಸಿದ ಇತಿಹಾಸ ಮೂರ್ತಿಗಳ ಜಯಂತಿ.

ಉಮೇಶ ಗೌರಿ (ಯರಡಾಲ)

ಒಬ್ಬರು ಭವ್ಯ ಭಾರತದ ಕನಸು ಕಂಡವರು, ಇನ್ನೋರ್ವರು ಆ ಕನಸು ನನಸು ಮಾಡಲು ಶ್ರಮಿಸಿದವರು,ಈ ಮಹಾನ್ ಚೇತನರಾದ ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರೀಜೀಯವರು ಒಂದೇ ದಿನ ಜನಿಸಿದ್ದು ಅಕ್ಟೋಬರ್ ತಿಂಗಳ ಮೌಲ್ಯವನು ಹೆಚ್ಚಿಸಿದೆ. ಜಗತ್ತಿನ ಅತ್ಯಂತ ಅದ್ಭುತ ದಾರ್ಶನಿಕರ ಜಯಂತಿ ಇಂದು.

“ಕಾವಿಯುಡುಲಿಲ್ಲ , ಹೆಣ್ಣು ಬಿಡಲಿಲ್ಲ ಎಲ್ಲೋ ಮರದೊಳಗೆ ಕೂತು ರಹಸ್ಯವಾಗಿ
ಜಪಮಣಿ ಎಣಿಸಿ ಸಮಾಧಿಸ್ಥನಾಗಲಿಲ್ಲ ˌತೆರೆದ ಬಯಲಿನ ಕೆಳಗೆ ಎಲ್ಲರ ಜೊತೆಗೆ ಕೂತು
ಭಜನೆ ಮಾಡಿದೆ ಸಬಕೋ ಸಮ್ಮತಿ ದೇ ಭಗವಾನ್! ಪವಾಡಗಳನ್ನು ತೋರಿಸಿ ಯಾರನ್ನು ಮರಳು ಮಾಡಲಿಲ್ಲ! ಮಾಡಿದ್ದೆ ಪವಾಡದ ತಲೆ ಮೆಟ್ಟಿತು ಕತ್ತಿಕೋವಿ ಹಿಡಿಯಲಿಲ್ಲ! ಆದರೂ ಯುದ್ಧ ಮಾಡಿದೆ ಎಲ್ಲವನ್ನು ಕಟ್ಟಿಕೊಂಡೆ ಆದರೂ ಏಕಾಂಗಿಯಾಗಿಯೇ ತೋರಿದೆ ನೋಡುವುದಕ್ಕೆ ಏಕಾಂಗಿಯಾದರರೂ ಜನಗಣಮನ
ಅಧಿನಾಯಕನಾಗಿ ನಡೆದೆ.”_ ಜಿ ಎಸ್ ಶಿವರುದ್ರಪ್ಪ

ರಾಷ್ಟ್ರಕವಿಗಳು ಹೇಳಿದ ಹಾಗೆ ಮಾನವ ಜಗತ್ತು ಕಂಡ ಬಹುದೊಡ್ಡ ಇತಿಹಾಸ ಮೂರ್ತಿ, ಶ್ರೇಷ್ಟ ಚಿಂತಕ, ದಾರ್ಶನಿಕ, ರಾಷ್ಟ್ರಪ್ರೇಮಿ, ನುಡಿದಂತೆ ನಡೆದವರು ಮೋಹನ್‌ದಾಸ್‌ ಕರಮಚಂದ ಗಾಂಧಿ. ಇವರನ್ನು ವಿಶ್ವಮಾನವರಾದ ಭಾರತಾಂಬೆಯ ಹೆಮ್ಮೆಯ ಪುತ್ರ ರವೀಂದ್ರನಾಥ ಟ್ಯಾಗೋರ್‌ ಮಹಾತ್ಮ” ಎಂದು ಕರೆದರೆ ಸುಭಾಷ್‌ಚಂದ್ರ ಭೋಸರು “ರಾಷ್ಟ್ರಪಿತ” ಎಂದರು , ಸರ್ದಾರ್‌ ವಲ್ಲಭಾಯಿ ಪಟೇಲರು “ಬಾಪು” ಎಂದು ಕರೆದರು. ಫ್ರೆಂಚ್‌ ಬರಹಗಾರ ರೋಮನ್‌ರೋಲಾ ಗಾಂಧೀಯವರನ್ನು ಮತ್ತೊಬ್ಬ ಏಸುಕ್ರಿಸ್ತ ನೆಂದು ಬರೆದರು.

ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮುಕ್ತ ಮನೋಭಾವ ಮತ್ತು ತಮ್ಮ ಬದುಕಿನುದ್ದಕ್ಕೂ ಸರ್ವಕಾಲಿಕ ಮೌಲ್ಯಗಳಿಂದಾಗಿ ಜನಮಾನಸದಲ್ಲಿ ಉಳಿದವರು ಬಾಪು. ವಿಶ್ವಸಂಸ್ಥೆ ಇವರ ಜನ್ಮ ದಿನವನ್ನು “ವಿಶ್ವ ಅಹಿಂಸಾ ದಿನ”ವನ್ನಾಗಿ ಆಚರಿಸುತ್ತದೆ. ವಿಶ್ವಸಂಸ್ಥೆ ಒಮ್ಮೆ ಮಾತ್ರ ತನ್ನ ಧ್ವಜವನ್ನು ಇವರ ಹುತಾತ್ಮರಾದಾಗ ಅರ್ಧಕ್ಕೆ ಇಳಿಸಿದ್ದು, ಸಮಾನ್ಯವಲ್ಲ. 

ಅಕ್ಟೋಬರ್‌ 2, 1869 ರಂದು ಗುಜರಾತ್‌ ರಾಜ್ಯದ ಪೋರ್‌ ಬಂದರಿನಲ್ಲಿ ಬನಿಯಾ ಜನಾಂಗದಲ್ಲಿ ಜನಿಸಿದರು. 1881 ರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಕಸ್ತೂರಿಬಾ ಅವರೊಡನೆ ವಿವಾಹ. 1887 ರಲ್ಲಿ ಮೆಟ್ರಿಕ್ಯುಲೇಷನ್‌ ತೇರ್ಗಡೆ, 1888 ರ ಅಕ್ಟೋಬರ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಪ್ರಯಾಣ, 1891 ಜೂನ್‌ನಲ್ಲಿ ಬ್ಯಾರಿಸ್ಟರ್‌ ಪದವಿಯೊಂದಿಗೆ ಭಾರತಕ್ಕೆ. 1892 ರಲ್ಲಿ ಸಮುದ್ರಯಾನದ ಮೂಲಕ ದಕ್ಷಿಣ ಆಫ್ರಿಕಕ್ಕೆ, 1915 ಜನವರಿ 9 ರಂದು ಭಾರತಕ್ಕೆ ಮರಳಿದರು.

1920 ರಲ್ಲಿ ಕಾಂಗ್ರೆಸ್ಸನ್ನು ಸೇರಿಕೊಂಡು ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಭಾರತದ ಮೂಲೆ ಮೂಲೆ ಸುತ್ತಿ ಜನತೆಯಲ್ಲಿ ಸ್ವಾತಂತ್ರ್ಯದ ಆತ್ಮಾಭಿಮಾನದ ಕಿಚ್ಚು ಹೊತ್ತಿಸಿದರು. 1919 ರ ಜಲಿಯನ್‌ ವಾಲಾಬಾಗ್‌ ಹತ್ಯಕಾಂಡದ ನಂತರ 1920 ರಲ್ಲಿ ಅಸಹಕಾರ ಚಳುವಳಿ ಪ್ರಾರಂಭಿಸಿದರು.1922 ಭಾರತದಲ್ಲಿ ಪ್ರಥಮ ಬಾರಿಗೆ ಪುಣೆಯ ಯರವಾಡ ಜೈಲುವಾಸ ಅನುಭವಿಸಿದರು. 1930 ರಲ್ಲಿ ದಂಡಿಯಾತ್ರೆ ಕೈಗೊಂಡಿದ್ದರು, ಇದರಲ್ಲಿ ಕರ್ನಾಟಕದ ಮೈಲಾರ ಮಹದೇವಪ್ಪ ಭಾಗವಹಿಸಿದ್ದರು.1936 ರಲ್ಲಿ ಸ್ವದೇಶಿ ಚಳುವಳಿ ಆರಂಭಿಸಿದರು. 1942 ರ ಆಗಸ್ಟ್‌ 8 ರಂದು ಮುಂಬಯಿಯಲ್ಲಿ ಗಾಂಧೀಜಿಯವರು ಮಾಡು ಇಲ್ಲವೇ ಮಡಿ” ಎಂಬ ಸಂದೇಶ ನೀಡಿ ಕ್ವಿಟ್‌ ಇಂಡಿಯಾ ಚಳುವಳಿ ಪ್ರಾರಂಭಿಸಿದರು.

ರವಿಮುಳಗದ ಸಾಮ್ರಾಜ್ಯ ಎಂದು ಕೀರ್ತಿ ಪಡೆದಿದ್ದ ಬ್ರಿಟಿಷ್‌ ಆಡಳಿತವನ್ನು ತುಂಡು ಉಡುಗೆ ತೊಟ್ಟ ಭಾರತೀಯನೊಬ್ಬ ಅತ್ಯಾಧುನಿಕ ಶಸ್ತ್ರಾತ್ರಗಳು ತುಂಬಿರುವ ಭೂಮಂಡಲದಲ್ಲಿ ಯಾವುದೇ ರಕ್ತಪಾತವಿಲ್ಲದೆ, ಸತ್ಯ, ಶಾಂತಿ, ಅಹಿಂಸಾ ಎಂಬ ದಿವ್ಯಾಸ್ತ್ರಗಳಿಂದ ಗಾಂಧೀಜಿಯವರ ನೇತೃತ್ವದಲ್ಲಿ ಆಗಸ್ಟ್‌ 15, 1947 ರಂದು ಭಾರತ ಸ್ವಾತಂತ್ರ್ಯ ಪಡೆದುಕೊಂಡಿತು.

ಇವರನ್ನು ಇಡೀ ದೇಶವೇ ಕೊಂಡಾಡಿತು, ಪೂಜೆ ಮಾಡಿತು. ಗಾಂಧೀಜಿಯವರ ಭಾವಚಿತ್ರಗಳ ಮೆರವಣಿಗೆಗಳು ನಡೆದವು. “ರಕ್ತಪಾತವಿಲ್ಲದೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತನ ಕಗ್ಗೊಲೆಯಾಯಿತು” 1948 ಜನವೆರಿ 30 ರಂದು ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದ ಗಾಂಧೀಜಿ.

ನಂತರ ಅವರನ್ನು ನಾವು ಹುತಾತ್ಮ ಎಂದು ಕರೆದೆವು. ನಂತರ ಗಾಂಧಿ ಪ್ರತಿಮೆಗಳನ್ನು ಗಾಂಧಿ ವೃತ್ತಗಳನ್ನು, ಗಾಂಧಿ ಮೈದಾನ, ಗಾಂಧೀ ನಗರಗಳನ್ನು ನಿರ್ಮಿಸಿದೆವು. ಕಂಡ ಕಂಡ ರಸ್ತೆಗಳಿಗೆ ಅವರ ಹೆಸರನ್ನಿಟ್ಟೆವು. ಎಲ್ಲಾ ಕಛೇರಿಗಳಲ್ಲಿ ಅವರ ಫೋಟೋಗಳನ್ನು ಹಾಕಲಾಯಿತು. ಗಾಂಧೀಜಿಯ ಭಾವಚಿತ್ರವಿರುವ ನಾಣ್ಯಗಳನ್ನು, ನೋಟುಗಳನ್ನು ಮುದ್ರಿಸಲಾಯಿತು. ಅನ್ಯಾಯದ ವಿರುದ್ಧ ಹೋರಾಡುವಾಗ ಗಾಂಧಿ ಪ್ರತಿಮೆಗೆ ಮಾಲೆ ಹಾಕಿ ಸತ್ಯಾಗ್ರಹ ನಡೆಸುತ್ತೇವೆ. ಇಂದು ಭಾರತದಲ್ಲಿ ಗಾಂಧಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಿದ್ದೇವೆ. ಭಾಷಣಗಳು ಮೊಳಗುತ್ತಿವೆ.

ಇನ್ನೊಂದು ಕಡೆ ರಾತ್ರೋರಾತ್ರಿ ಗಾಂಧಿ ಪ್ರತಿಮೆಯಲ್ಲಿ ಕನ್ನಡಕ ಮಾಯಮಾಡುವುದು, ಪ್ರತಿಮೆಗಳನ್ನು ಭಗ್ನಗೊಳಿಸುವುದು, ಅಪಮಾನ ಮಾಡುವ ವಿಕೃತ ಘಟನೆಗಳು ನಡೆಯುತ್ತಿರವುದು ವಿಷಾದನೀಯ.

ಗಾಂಧೀಜಿಯವರು ತನ್ನ ಪ್ರತಿಮೆಗಳ ಸ್ಥಾಪನೆ, ಹಿತೈಷಿಗಳು ಪ್ರೀತಿಯಿಂದ ನೀಡುತ್ತಿದ್ದ ಉಡುಗೊರೆಗಳನ್ನು ನಿರಾಕರಿಸುತ್ತಿದ್ದರು. ಹಿಂದೂ, ಮುಸ್ಲಿಂ, ಸಿಖ್‌ ಐಕ್ಯತೆಯ ಕುರಿತು ಪತ್ರಕರ್ತರ ಮುಂದೆ ಮಾತನಾಡಿದ ಗಾಂಧೀಜಿಯವರ ನುಡಿಗಳು ಇಂದಿಗೂ ಪ್ರಸ್ತುತ. “ಬಂಧುಗಳೇ ಜಾತಿ ಹುಚ್ಚುತನವನ್ನು ಮರೆತು, ಈ ದೇಶ ಬಾಳುವುದನ್ನು ನಾನು ನೋಡಲು ಕಾತುರನಾಗಿದ್ದೇನೆ. ನಮ್ಮ ಧರ್ಮಗಳು ಏನೇ ಆಗಿರಲಿ, ನಮ್ಮ ಮಂತ್ರ ಭಾರತೀಯತೆಯಾಗಿರಲಿ” ಎಂದು ಸ್ಪಷ್ಟಪಡಿಸಿ, “ಬಂಧುಗಳೇ ಕೋಟಿ ಕೋಟಿ ಭಾರತೀಯರ ಆಹಾರ, ಬಟ್ಟೆ, ನೆಮ್ಮದಿಯ ನಿದ್ರೆಗಾಗಿ ಒಂದು ಸೂರು ನಿಮ್ಮ ಬರಹದ ಉದ್ದೇಶವಾಗಿರಲಿ, ಪರಸ್ಪರ ಹಿಂದೂ-ಮುಸ್ಲಿಮರ ಬಡಿದಾಟ ರೋಚಕ ಸುದ್ಧಿಗಳಾಗಿ ನಿಮ್ಮ ಪತ್ರಿಕೆಗಳಲ್ಲಿ ಚಿತ್ತಾರಗೊಳ್ಳದಿರಲಿ”ಎಂದಿದ್ದರು.

1947 ರಲ್ಲಿ ಪ್ರಧಾನಿಗೆ ಪತ್ರ ಬರೆದು ನಾವೆಲ್ಲರೂ ವಾಸಿಸಬೇಕಾಗಿರುವುದು ಅರಮನೆಗಳಲ್ಲಿ ಅಲ್ಲ, ಬಂಗಲೆಗಳಲ್ಲ. ದೇಶದ ಉದ್ಧಾರಕ್ಕೋಸ್ಕರ ನಾವು ಗ್ರಾಮಗಳಲ್ಲಿ ವಾಸವಾಗಿರುವುದನ್ನು ಕಲಿಯಬೇಕು. ಏಕೆಂದರೆ `ಗ್ರಾಮ ಸ್ವರಾಜ್ಯವೇ ಆಭಿವೃದ್ಧಿಯ ಹೆಬ್ಬಾಗಿಲು’ ಎಂದಿದ್ದರು. ದುಡಿಮೆ ಇಲ್ಲದ ಸಂಪತ್ತು ಆತ್ಮಸಾಕ್ಷಿಯಿಲ್ಲದ ಸಂತೋಷ, ಗುಣವಿಲ್ಲದ ಶಿಕ್ಷಣ, ನೈತಿಕತೆಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ವಿಜ್ಞಾನ, ತ್ಯಾಗವಿಲ್ಲದ ಧರ್ಮ, ಸಿದ್ಧಾಂತವಿಲ್ಲದ ರಾಜಕಾರಣ ಇವುಗಳನ್ನು ಸಪ್ತ ಮಹಾಘಾತಗಳೆಂದಿದ್ದರು.

ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಕರ್ನಾಟಕಕ್ಕೆ 18 ಬಾರಿ ಭೇಟಿ ನೀಡಿದ್ದರು. ಪ್ರಥಮ ಭೇಟಿ 1915 ಮೇ 8 ರಂದು ಕಸ್ತೂರಿಬಾ ಅವರೊಂದಿಗೆ ರೈಲಿನಲ್ಲಿ ಬಂದಿದ್ದರು. ಆಗ ದಿವಾನರಾಗಿದ್ದ ಸರ್‌ ಎಂ.ವಿ. ಯವರ ಮೊದಲ ಭೇಟಿಯಾಗಿತ್ತು. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು. ಇದೇ ವೇಳೆ ಬಸವಣ್ಣನವರ ತತ್ವಾದರ್ಶ ಗಳನ್ನು ಆಚರಣೆಯಲ್ಲಿ ತಂದಿದ್ದೇ ಆದರೆ ಭಾರತ ಭೂಮಿಯನ್ನಷ್ಟೇ ಏಕೆ? ಇಡೀ ಜಗತ್ತನ್ನೇ ರಾಮರಾಜ್ಯ ಮಾಡಬಹುದೆಂದು ಅಭಿಮಾನದ ನುಡಿಗಳನ್ನಾಡಿದ್ದರು.

ಮಹಾತ್ಮ ಗಾಂಧೀಜಿಯವರು ಸತ್ಯ, ಸಾಮಾಜಿಕ ನ್ಯಾಯ, ಅಹಿಂಸೆ, ತ್ಯಾಗದ ಮೂಲಕ ಎಲ್ಲಾ ಅಧಿಕಾರಗಳನ್ನು ವಿನಯದಿಂದ ತಿರಸ್ಕರಿಸಿ ತನ್ನ ಹೆಂಡತಿ, ಮಕ್ಕಳನ್ನು ರಾಷ್ಟ್ರ ಸೇವೆಗೆ ಅರ್ಪಿಸಿ ಅರೆ ಬೆತ್ತಲೆಯ ಫಕ್ಕೀರನಂತೆ ಭಾರತದ ಬಡ ಪ್ರಜೆಯ ಪ್ರತಿರೂಪದಂತೆ ಬಾಳಿದರು.

ಭಾರತ ರತ್ನ ಲಾಲ್‌ ಬಹದ್ದೂರ್ ಶಾಸ್ತ್ರೀಜಿ : ಗಾಂಧೀಜಿ ಅವರ ಕನಸು ನನಸು ಮಾಡಲು ಶ್ರಮಿಸಿದವರು ಶಾಸ್ತ್ರೀಜಿಯವರು. ಬಡತನದಲ್ಲಿ ಹುಟ್ಟಿ, ಬಡತನದಲ್ಲೇ ಬೆಳೆದು ಬಡತನದಲ್ಲೇ ಅಸುನೀಗಿದ ಬಡ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರೀಜಿಯವರು. ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ, ಸ್ವಾಭಿಮಾನಿ, ದೇಶಾಭಿಮಾನಿ ಆದರ್ಶ ವ್ಯಕ್ತಿತ್ವದ ಮೇರುನಾಯಕ ಶಾಸ್ತ್ರಿ ಅವರು 1904 ಅಕ್ಟೋಬರ್‌ 2, ರಂದು ಉತ್ತರ ಪ್ರದೇಶದ ಮೊಘಲ್‌ ಸರಾಯಿಯಲ್ಲಿ ಜನಿಸಿದರು. ಇವರನ್ನು ಗಾಂಧಿ ಜಯಂತಿಯ ಆಚರಣೆಯಲ್ಲಿ ಮರೆಯುವುದೇ ಹೆಚ್ಚು. ಶಾಸ್ತ್ರಿಯವರ ವ್ಯಕ್ತಿತ್ವವನ್ನು ಪ್ರಭಾವಿಸಿದ ಪ್ರಥಮ ವ್ಯಕ್ತಿ ಮತ್ತು ಶಕ್ತಿ ಗಾಂಧಿಯೇ ಆಗಿದ್ದರು. 1926 ರಲ್ಲಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಎಂಬ ಬಿರುದು ಪಡೆದರು. ಮನೆಯವರ ಪ್ರತಿರೋಧ ಎದುರಿಸಿ ಬ್ರಿಟಿಷರ ವಿರುದ್ಧ ಆಂದೋಲನದಲ್ಲಿ ಧುಮಿಕಿ 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹ ವಾಸ ಅನುಭವಿಸಿದರು.

ಸ್ವಾತಂತ್ರ ಬಂದ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಪೊಲೀಸ್‌ ಮತ್ತು ಸಾರಿಗೆ ಸಚಿವರಾಗಿ ನೇಮಕಗೊಂಡರು. ಮೊಟ್ಟ ಮೊದಲ ಬಾರಿಗೆ ಬಸ್‌ಗಳಲ್ಲಿ ಮಹಿಳಾ ನಿರ್ವಾಹಕರನ್ನು ನೇಮಿಸಿದ ಕೀರ್ತಿ ಇವರದು. ಪೊಲೀಸರು ಹಿಂಸಾ ನಿರತ ಜನರ ಗುಂಪನ್ನು ಚದುರಿಸಲು ಲಾಠಿಯನ್ನು ಬಿಟ್ಟು ವಾಟರ್‌ಜೆಟ್‌ ಬಳಸಲಿ ಎನ್ನುವ ಕ್ರಾಂತಿಕಾರಕ ಹೆಜ್ಜೆ ಇವರದು. 1951ರ ಲೋಕಸಭೆಗೆ ಜನರಲ್‌ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ರೈಲ್ವೆ ಖಾತೆ ಸಚಿವ ಸ್ಥಾನ ವಹಿಸಿಕೊಂಡರು. ತಮಿಳುನಾಡಿನ ಅರಿಯಲ್ಲೂರಿನಲ್ಲಿ ನವೆಂಬರ್‌ 1956 ರಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 142 ಮಂದಿ ಜೀವ ತೆತ್ತರು. ಇದರ ಜವಾಬ್ದಾರಿ ಮತ್ತು ನೈತಿಕ ಹೊಣೆಯಿಂದ ರಾಜೀನಾಮೆ ನೀಡಿದರು. ಬಳಿಕ 1961 ರಲ್ಲಿ ಗೃಹ ಮಂತ್ರಿಯಾದರು. ಮೇ 27, 1964 ರಂದು ಜವಾಹರ್‌ ಲಾಲ್‌ ನೆಹರು ನಿಧನರಾದರು. ನಂತರ ಜೂನ್ 9, 1964 ರಂದು ಶಾಸ್ತ್ರೀಜಿಯವರು ಭಾರತದ 2ನೇ ಪ್ರಧಾನಿಯಾಗಿ ಆಯ್ಕೆಯಾದರು.

ಆದರೆ ಅಧಿಕಾರದಲ್ಲಿದ್ದ ಕೇವಲ 20 ತಿಂಗಳು 2 ದಿನ ಮಾತ್ರ. ಈ ಅವಧಿಯಲ್ಲಿ ಅವರ ಒಂದೊಂದು ನಡೆಯು ಮಾದರಿಯಾಗಿತ್ತು. 1965 ರಲ್ಲಿ ಭಾರತ-ಪಾಕಿಸ್ಥಾನದೊಂದಿಗೆ ಯುದ್ಧ ನಡೆದಿತ್ತು,ಇದು 22 ದಿನಗಳ ಕದನ, ಪಾಕ್‌ ಪ್ರಚೋದನೆಯಿಂದ ಅಮೇರಿಕ ಸಮರ ನಿಲ್ಲಿಸದಿದ್ದರೆ ಗೋಧಿಯಿಲ್ಲ ಎಂಬ ಶರತ್ತು ವಿಧಿಸಿದಾಗ, “ನಾವು ಹಸಿವಿನಿಂದಾದರೂ ಸರಿಯೇ ಅಮೇರಿಕಕ್ಕೆ ತಲೆ ಬಾಗುವುದು ಬೇಡ” ಎಂದು ಸ್ವತಃ ಶಾಸ್ತ್ರೀಜಿ ಸಾಂಕೇತಿಕವಾಗಿ ಪ್ರತಿ ಸೋಮವಾರ ಉಪವಾಸ ಆರಂಭಿಸಿದರು.ಶಾಂತಿಪ್ರಿಯ ಶಾಸ್ತ್ರೀಜಿಯವರು ಸೈನಿಕರಿಗೆ ಆತ್ಮವಿಶ್ವಾಸ ತುಂಬಿ ಮುಕ್ತ ಸ್ವಾತಂತ್ರ್ಯ ನೀಡಿದರ ಫಲವಾಗಿ, ಪಾಕ್‌ ಪ್ರಧಾನಿ ಅಯೂಬ್‌ಖಾನ್‌ ಯುದ್ಧ ವಿರಾಮ ಘೋಷಣೆಗೆ ಮುಂದಾದರು. ವಿಶ್ವಸಂಸ್ಥೆಯ ರಾಜಿ ಸಂಧಾನದ ಬಳಿಕ 1965 ಸೆಪ್ಟೆಂಬರ್‌ 23 ರಂದು ಭಾರತ ಕದನ ವಿರಾಮಕ್ಕೆ ಸಮ್ಮತಿಸಿತು. ನಂತರ ರಷ್ಯಾ ಮಧ್ಯಸ್ಥಿಕೆಯಲ್ಲಿ ಜನವರಿ 10, 1966 ರಂದು ತಾಷ್ಕೆಂಟ್‌ನಲ್ಲಿ ಪಾಕ್‌ ಪ್ರಧಾನಿ ಜೊತೆ ಒಪ್ಪಂದ ಮಾಡಿಕೊಂಡ ಮರುದಿನ ಜನವರಿ 11, 1966 ರಂದು ಶಾಸ್ತ್ರೀಜಿ ಚಿರನಿದ್ರೆಗೆ ಜಾರಿದರು.

ಮಳೆ, ಬಿಸಿಲು, ಚಳಿ, ಅತಿವೃಷ್ಟಿ, ಅನಾವೃಷ್ಟಿಯೆನ್ನದೆ ಹಗಲಿರುಳೆನ್ನದೆ ದೇಶ ಕಾಯುವ ಸೈನಿಕ ಮತ್ತು ಸಕಲ ಜೀವ ತಂತುಗಳನ್ನು ಸಲಹುವ ರೈತ ಇಬ್ಬರೂ ಬಹದ್ದೂರರಿಗೆ ದೇಶದ ನಿಜವಾದ ನೇತಾರರಾಗಿ ಕಾಣುತ್ತಾರೆ. ಹಾಗಾಗಿ “ಜೈ ಜವಾನ್‌,ಜೈ ಕಿಸಾನ್‌”ಎಂದು ಘೋಷಿಸಿದರು. 

ಭಾರತದ ಪ್ರಧಾನಿಯಾಗಿ ತಮ್ಮ ಸ್ವಾರ್ಥಕ್ಕೆ ಎಂದೂ ಅಧಿಕಾರವನ್ನು ಬಳಸಿಕೊಳ್ಳಲಿಲ್ಲ. ಕೇಂದ್ರ ಗೃಹಮಂತ್ರಿಯಾಗಿದ್ದಾಗಲೂ ಬಾಡಿಗೆ ಮನೆಯಲ್ಲಿದ್ದು ಬದುಕಿದರು. ಈ ಮೂಲಕ ಪ್ರತಿಪಕ್ಷಗಳು ಗೃಹವಿಲ್ಲದ ಗೃಹಮಂತ್ರಿ ಎನ್ನುವ ಮೆಚ್ಚುಗೆ ಬೆರೆತ ಟೀಕೆಗೆ ಒಳಗಾದರು. ಇವರಿಗೆ ಮರಣಾನಂತರ “ಭಾರತ ರತ್ನ”ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. 

ಇಂದು ಜಗತ್ತು ನಾನಾ ಬಗೆಯಲ್ಲಿ ಮೂಲಭೂತ ವಾದದ ಕಡೆಗೆ ತುಡಿಯುತ್ತಿದೆ. ಆಧುನಿಕ ಆಯುಧಗಳು ಮತಾಂಧ ಶಕ್ತಿಗಳ ಕೈಯಲ್ಲಿವೆ. ಮತೀಯ ಹಿಂಸೆ, ಭಯೋತ್ಪಾದನೆಯ ಬೀಜಗಳು ಮೊಳಕೆಯೊಡೆದು ಚಿಗುರುತ್ತಿರುವ ಸಂದರ್ಭದಲ್ಲಿ ಇವರ ತತ್ವಾದರ್ಶಗಳ ಆರಾಧನೆಗಿಂತ ಆಚರಣೆಯಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬರಬೇಕು. ಜಗತ್ತಿನ ಸಾಮರಸ್ಯ ಬದುಕಿಗೆ ಈ ಮಹಾತ್ಮರ ನಡೆ-ನುಡಿಗಳು ಪಾಠವಾಗಬೇಕು.

 

 

 

 

ಜಿಲ್ಲೆ

ರಾಜ್ಯ

error: Content is protected !!