Thursday, September 19, 2024

ಭಾರತದಲ್ಲಿ 5G ಸೇವೆ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ.ಅಗ್ಗದ ದರದಲ್ಲಿ ಇಂಟರ್ನೆಟ್‌ ಸೇವೆ.

ನವದೆಹಲಿ (ಅ. 1): ಭಾರತವು ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 5G ದೂರ ಸಂಪರ್ಕ ಸೇವೆಗಳಿಗೆ ಇಂದು (ಶನಿವಾರ, ಅಕ್ಟೋಬರ್ 1 2022) ಅಧಿಕೃತವಾಗಿ ಚಾಲನೆ ನೀಡಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ 6ನೇ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ, 5ಜಿ ಸೇವೆಗಳಿಗೆ ಚಾಲನೆ ನೀಡಿದ ಪ್ರಧಾನಿಯವರು 5G ಡೆಮೊ ಪ್ರದರ್ಶನವನ್ನು ವೀಕ್ಷಿಸಿದರು.

ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಕಂಪೆನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿ) ಸಂಸ್ಥೆಗಳು ಪ್ರಧಾನ ಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಗತಿ ಮೈದಾನದಲ್ಲಿ 5ಜಿ ಸಾಮರ್ಥ್ಯದ ತಂತ್ರಜ್ಞಾನವನ್ನು ಪ್ರದರ್ಶಿಸಿವು. ಇದರೊಂದಿಗೆ ದೇಶದಲ್ಲಿ ಹೆಚ್ಚು ವೇಗದ ಇಂಟರ್‌ನೆಟ್ ಬಳಕೆಯು ಐತಿಹಾಸಿಕವಾಗಿ ಮತ್ತು ಅಧಿಕೃತವಾಗಿ ಆರಂಭವಾಯಿತು.

ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ 5G ಕುರಿತು ಮಾತನಾಡಿ, 5G ಬಿಡುಗಡೆಯೊಂದಿಗೆ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಈಗ ಏಷ್ಯನ್ ಮೊಬೈಲ್ ಕಾಂಗ್ರೆಸ್ ಆಗಬಹುದು ಎಂದು ಹೇಳಿದರು. ಡಿಸೆಂಬರ್ 2023 ರೊಳಗೆ ಪ್ರತಿ ತಾಲೂಕಿಗೆ, ಪ್ರತಿ ಜಿಲ್ಲೆಗೆ ಜಿಯೋ 5G ತಲುಪಲಿದೆ. ದೇಶದಲ್ಲಿ ನಾವು 5G ಪ್ರದರ್ಶಿಸಿದ್ದಕ್ಕೆ ತುಂಬಾ ಹೆಮ್ಮೆ ಇದೆ. ನಾವು ನಾಯಕತ್ವವನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದು ನಾನು ಹೇಳಬಲ್ಲೆ ಎಂದು ಹೇಳಿದರು.

5G ಬಿಡುಗಡೆಯಲ್ಲಿ ಏರ್‌ಟೆಲ್ ಸಂಸ್ಥೆಯ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಅವರು ಮಾತನಾಡಿ, ಹೊಸ ಯುಗ ಪ್ರಾರಂಭವಾಗಲಿದೆ ಎಂದು ಹೇಳಿದರು. ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ ಹೊಸ ಯುಗ ಪ್ರಾರಂಭವಾಗಲಿದೆ. “ಇದೊಂದು ಮಹತ್ವದ ದಿನ. ಹೊಸ ಯುಗ ಪ್ರಾರಂಭವಾಗಲಿದೆ. ಈ ಆರಂಭವು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಡೆಯುತ್ತಿದೆ ಮತ್ತು ದೇಶದಲ್ಲಿ ಹೊಸ ಜಾಗೃತಿ, ಶಕ್ತಿಯನ್ನು ಪ್ರಾರಂಭಿಸುತ್ತದೆ. ಇದು ಜನರಿಗೆ ಹಲವಾರು ಹೊಸ ಅವಕಾಶಗಳನ್ನು ತೆರೆಯುತ್ತದೆ, ”ಎಂದು ಹೇಳಿದರು.

ಬಹುನಿರೀಕ್ಷಿತ 5G ಟೆಲಿಕಾಂ ಸೇವೆಗಳು ತಡೆರಹಿತ ಇಂಟರ್ನೆಟ್ ಸಂಪರ್ಕ, ಹೆಚ್ಚಿನ ಡೇಟಾ, ಕಡಿಮೆ ಸುಪ್ತತೆ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಇದೀಗ ಕೆಲವು ಆಯ್ದ ನಗರಗಳಲ್ಲಿ 5G ದೂರ ಸಂಪರ್ಕ ಸೇವೆಗಳಿಗೆ ಚಾಲನೆ ನೀಡಲಾಗಿದ್ದು, ಮುಂದಿನೆರಡು ವರ್ಷಗಳಲ್ಲಿ ದೇಶದಾದ್ಯಂತ ಹಂತ ಹಂತವಾಗಿ 5G ಟೆಲಿಕಾಂ ಸೇವೆಗಳನ್ನು ಆರಂಭಿಸುವ ಬಗ್ಗೆ ಟೆಲಿಕಾಂ ಕಂಪೆನಿಗಳು ಯೋಜಿಸಿವೆ.

ಭಾರತದ ಮೇಲೆ 5G ಯ ಸಂಚಿತ ಆರ್ಥಿಕ ಪರಿಣಾಮವು 2035 ರ ವೇಳೆಗೆ USD 450 ಶತಕೋಟಿಯನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್ ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವ 5G ಸೇವೆಯು ಹೊಸ ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ತರುವ ನಿರೀಕ್ಷೆಯಿದೆ, ಇದು ದೇಶದ ಅಭಿವೃದ್ಧಿ ಪರಿವರ್ತನೆಯ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಂದಾಜಿಸಲಾಗಿದೆ.

ಮೊದಲ ಹಂತದಲ್ಲಿ 13 ನಗರದಲ್ಲಿ ಆರಂಭ: ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ, ದೆಹಲಿ, ಮುಂಬೈ, ಚೆನ್ನೈ,ಕೋಲ್ಕತ್ತಾ, ಚಂಡೀಗಢ,  ಗುರುಗ್ರಾಮ, ಹೈದರಾಬಾದ್‌, ಲಕ್ನೋ, ಪುಣೆ, ಗಾಂಧಿನಗರ, ಅಹಮದಾಬಾದ್‌ ಹಾಗೂ ಜಾಮ್‌ನಗರದಲ್ಲಿ ಸೇವೆ ಆರಂಭಿಸುವುದಾಗಿ ಕಂಪನಿಗಳು ತಿಳಿಸಿವೆ.

ಮೊಬೈಲ್‌ ಚೇಂಜ್‌ ಮಾಡ್ಬೇಕಾ: ಬಹುತೇಕ ಎಲ್ಲರ ಪ್ರಶ್ನೆ ಇದೇ ಇದೆ. 5ಜಿ ಸೇವೆ ಆರಂಭವಾಗಿದೆ. ಇದನ್ನು ಅನುಭವಿಸಲು 5ಜಿ ತಂತ್ರಜ್ಞಾನ ಇರುವ ಮೊಬೈಲ್‌ ಹಾಗೂ ಸಿಮ್‌ ಇರಬೇಕಾಗುತ್ತದೆ. ಇತ್ತೀಚಿನ ವರ್ಷಗಳ ಅಂದರೆ, 1 ರಿಂದ ಒಂದೂವರೆ ವರ್ಷಗಳಲ್ಲಿ ಖರೀದಿಸಿದ್ದ ಮೊಬೈಲ್‌ ಆಗಿದ್ದರೆ, ಅದರಲ್ಲಿ 5ಜಿ ತಂತ್ರಜ್ಞಾನ ಎನೇಬಲ್‌ ಆಗಿರಲಿದೆ. ಹಳೆಯ ಮೊಬೈಲ್‌ಗಳಲ್ಲಿ ಈ ತಂತ್ರಜ್ಞಾನ ಇದ್ದಿರುವುದಿಲ್ಲ. ಅದಕ್ಕಾಗಿ 5ಜಿ ತಂತ್ರಜ್ಞಾನ ಇರುವ ಮೊಬೈಲ್‌ಅನ್ನು ಖರೀದಿ ಮಾಡಬೇಕಾಗುತ್ತದೆ.

ಜಿಲ್ಲೆ

ರಾಜ್ಯ

error: Content is protected !!