Tuesday, April 16, 2024

“ಅತಿಥಿ ಉಪನ್ಯಾಸಕರ ತಿಥಿ ಮಾಡಲು ಹೊರಟ ಸರ್ಕಾರಗಳು”

ಅತಿಥಿ ಉಪನ್ಯಾಸಕರ ಗೋಳು ಕೇಳೋರ್ ಯಾರು.? ಅತಂತ್ರದ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರು.! ಇತ್ತೀಚಿನ ಸರಕಾರದ ನಡೆಯಿಂದ ಅತಿಥಿ ಉಪನ್ಯಾಸಕರ ತಿಥಿ ಆಗುತ್ತಿದೆ.

ದೇಶದಲ್ಲೇ ಪ್ರಥಮ ಎಂಬಂತೆ ಹೊಸ ಶಿಕ್ಷಣ ನೀತಿ (ಎನ್ಇಪಿ) ಯನ್ನು ಜಾರಿಗೋಳಿಸಲು ಆತುರ ತೋರುವ ರಾಜ್ಯ ಸರಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಆಲಿಸದೆ ವಸ್ತುಶಃ ಮರೆತು ಬಿಟ್ಟಿದೆ.

ಮೊನ್ನೆ ನಡೆದ ಅಧಿವೇಶನದಲ್ಲಿ ಸಭಾಪತಿಗಳು ,ಉನ್ನತ ಶಿಕ್ಷಣ ಸಚಿವರು ,ಶಾಸಕರ ಆದಿಯಾಗಿ ಹೊಸ ವಿಶ್ವವಿದ್ಯಾಲಯಗಳ ಬಗ್ಗೆ ,ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆ ,ಹೊಸ ಶಿಕ್ಷಣ ನೀತಿಯ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಮಾಡಿದರು. ಆದರೆ ಕಳೆದ ಸುಮಾರು ಎರಡು ದಶಕಗಳಿಂದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶೇಕಡಾ 70, 80%ರಷ್ಟು ಇರುವ ಅತಿಥಿ ಉಪನ್ಯಾಸಕರ ಬಗ್ಗೆ ಕಿಂಚಿತ್ತು ಚರ್ಚೆ ಮಾಡದಿರುವುದು ಖೇದಕರ ವಿಚಾರವಾಗಿದೆ .

ಕಳೆದ ಎರಡು ಮೂರು ವರ್ಷಗಳಿಂದ ಅತಿಥಿ ಉಪನ್ಯಾಸಕರ ಆತ್ಮಹತ್ಯೆ, ಕರೋನ ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ಸಾವು ,ಹೃದಯಾಘಾತ ಆಕಸ್ಮಿಕ ಅವಘಡ ಮುಂತಾದ ಸಾವು ನೋವುಗಳಿಂದ ಅತಿಥಿ ಉಪನ್ಯಾಸಕರು ತತ್ತರಿಸಿ ಹೋಗಿದ್ದು. ಈ ಪರಿಸ್ಥಿತಿಯಲ್ಲಿ 2021 -22 ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುವ ಅತಿಥಿ ಉಪನ್ಯಾಸಕರು ಗೊಂದಲ ಹಾಗೂ ಆತಂಕದಲ್ಲಿದ್ದಾರೆ.

ರಾಜ್ಯದಲ್ಲಿ 430 ಕಾಲೇಜು ಇದ್ದು ,ಸುಮಾರು 12 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ನಿಯಮಾವಳಿಯಂತೆ ಮೆರಿಟ್ ಹಾಗೂ ಕೌನ್ಸಿಲಿಂಗ್ ಮೂಲಕ ಆಯ್ಕೆಯಾಗಿ 2022 ಫೆಬ್ರುವರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಅತಿಥಿ ಉಪನ್ಯಾಸಕರು ಸೇವೆಯಿಂದ ಹೊರಗಡೆ ಉಳಿದಿದ್ದಾರೆ. ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರು ಆಯುಕ್ತರ ಆದೇಶದ ಮೇರೆಗೆ ಆಯಾ ವಿಶ್ವವಿದ್ಯಾಲಯಗಳ ಕಾರ್ಯಾವಧಿಯ ದಿನಗಳವರೆಗೆ ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದ್ದಾರೆ.

ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳ ಕಾರ್ಯಾವಧಿಗಳು ಮುಗಿದಿದ್ದು ಪ್ರಥಮ ವರ್ಷದ ಪಾಠ ಪ್ರವಚನಗಳನ್ನು ಮಾಡದಿರಲು ಸೂಚಿಸಿರುತ್ತಾರೆ. ಇದು ಎಷ್ಟರಮಟ್ಟಿಗೆ ಸೂಕ್ತ?ಇದು ಆಧುನಿಕ ಜಿತ ಪದ್ಧತಿ ಅಲ್ಲದೆ ಮತ್ತೇನು?ಎಂದು ಅತಿಥಿ ಉಪನ್ಯಾಸಕರು ಪ್ರಶ್ನಿಸುತ್ತಿದ್ದಾರೆ . ಏಕೆಂದರೆ ಕೆಲವು ಕಾಲೇಜಿಗಳಲ್ಲಿ ಅತಿಥಿ ಉಪನ್ಯಾಸಕರನ್ನು ಬಿಡುಗಡೆಗೊಳಿಸಿದ್ದಾರೆ. ಕೆಲವು ಕಡೆ ಅಧಿಕೃತ ಹಾಜರಿ ಪುಸ್ತಕಗಳಲ್ಲಿ ಸಹಿ ಮಾಡಿಸಿಕೊಳ್ಳುತ್ತಿಲ್ಲ .ಕೇವಲ ಒಂದು ಪೇಪರ್ ಹಾಳೆಯ ಮೇಲೆ ,ಪ್ರತ್ಯೇಕ ನೋಟ್ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳುವುದು ಎಷ್ಟೊಂದು ವಿಪರ್ಯಾಸ ಇದು ಉಪನ್ಯಾಸಕ ಹುದ್ದೆಗೆ ಅವಮಾನವಲ್ಲವೇ? ಇದು ಉನ್ನತ ಶಿಕ್ಷಣ ಸಚಿವರಿಗೆ ಗೊತ್ತಿಲ್ಲವೇ? ಸರ್ಕಾರಿ ಅಧಿಕಾರಿಗಳಿಗೆ ಗೊತ್ತಿಲ್ಲವೇ?

ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಯುಜಿಸಿಯ ಎಲ್ಲಾ ಅರ್ಹತೆ ಹೊಂದಿದ್ದು ಸೇವಾ ಅನುಭವವನ್ನು ಹೊಂದಿರುತ್ತಾರೆ. ಭೌತಿಕ ಕಟ್ಟಡಗಳು ವಿಶ್ವವಿದ್ಯಾಲಯಗಳ ಬಗ್ಗೆ ಕಾಲೇಜುಗಳ ಬಗ್ಗೆ ಮಾತನಾಡುವ ಉನ್ನತ ಶಿಕ್ಷಣ ಸಚಿವರು ಮಾನವ ಸಂಪನ್ಮೂಲವಾದ ಅತಿಥಿ ಉಪನ್ಯಾಸಕರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಪೂರ್ಣಾವಧಿಯ ನೇಮಕಾತಿಯನ್ನಾದರೂ ಮಾಡಿಕೊಳ್ಳಿ,ಇಲ್ಲ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ವಿಲೀನಗೊಳಿಸಬೇಕು. ಕಾಲೇಜು ಶಿಕ್ಷಣ ಇಲಾಖೆ ಹೇಳುವ ಎಲ್ಲಾ ಕಾರ್ಯಗಳನ್ನು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದಾರೆ.

ಎಷ್ಟೋ ಅತಿಥಿ ಉಪನ್ಯಾಸಕರ ವಯೋಮಿತಿ ಮೀರಿದೆ.ಕುಟುಂಬದ ನಿರ್ವಹಣೆ ಕಷ್ಟವಾಗಿದೆ.ಅಷ್ಟೇ ಅಲ್ಲ ಮಾನಸಿಕವಾಗಿ ಕುಗ್ಗಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ .ಇದಕ್ಕೆಲ್ಲಾ ಆಡಳಿತ ನಡೆಸುವ ಸರ್ಕಾರಗಳು ಕಾರಣಗಳಾಗಿವೆ. ನಮಗೆ ಸೇವಾ ಭದ್ರತೆ ನೀಡಬೇಕು ಇಲ್ಲವಾದರೆ ಅತಿಥಿ ಉಪನ್ಯಾಸಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಮುಂಬರುವ ದಿನಗಳಲ್ಲಿ ಸರ್ಕಾರಗಳು ಈ ಆಧುನಿಕ ಜೀತ ಪದ್ಧತಿಯನ್ನು ಕೊನೆಗಾಣಿಸಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಸೇವಾ ವಿಲೀನತೆ ಜೊತೆಗೆ ಸೇವಾ ಖಾಯಂಮಾತಿ ಮಾಡಬೇಕು.

ಪ್ರಾಂಶುಪಾಲರ ಜಂಟಿ ನಿರ್ದೇಶಕರ ಮುಖಾಂತರ ಮಾನ್ಯ ಕಮಿಷನರ್ ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಸರ್ಕಾರ ಈ ಮನವಿಗಳಿಗೆ ಸ್ಪಂದಿಸದಿದ್ದರೆ ಉಗ್ರವಾದ ಹೋರಾಟ ಅನಿವಾರ್ಯವಾಗಳಿದೆ.

 

 

ಲೇಖಕರು:ಪ್ರೋ.ನೀಲಕಂಠ ಭೂಮಣ್ಣವರ
ಪತ್ರಕರ್ತರು, ಅತಿಥಿ ಉಪನ್ಯಾಸಕರು

ಜಿಲ್ಲೆ

ರಾಜ್ಯ

error: Content is protected !!