Thursday, July 25, 2024

ಸಾಮಾಜಿಕ ಜಾಲತಾಣಗಳಲ್ಲಿ “ಕೈ” ಅಬ್ಬರ! ಕೌಂಟರ್‌ ನೀಡಲು “ಕಮಲ” ಪಡೆ ವಿಫಲ.

ಸಾಮಾಜಿಕ ಜಾಲತಾಣಗಳಲ್ಲಿ ಬಲಿಷ್ಠ ತಂತ್ರಗಾರಿಕೆಯ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ನಿರಂತರ ಏಟುಗಳನ್ನು ನೀಡುತ್ತಿದ್ದ ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಹಿನ್ನಡೆ ಉಂಟಾಗುತ್ತಿದೆ. ಕಾಂಗ್ರೆಸ್‌ ಅಬ್ಬರದ ನಡುವೆ ಬಿಜೆಪಿ ಸೈಲೆಂಟಾಗಿದ್ದು ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗುತ್ತಿದೆ.

ತಳಮಟ್ಟದಲ್ಲಿ ಬಲಿಷ್ಠ ಕೇಡರ್‌ ಪಡೆಯ ಜೊತೆಗೆ ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್‌ ಮಾಧ್ಯಮಗಳ ಮೂಲಕ ಪಕ್ಷದ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಜನರಿಗೆ ತಲುಪುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಫೇಸ್‌ ಬುಕ್‌, ಟ್ವಿಟ್ಟರ್‌ ಸೇರಿದಂತೆ ಸೋಷಿಯಲ್‌ ಮಿಡಿಯಾದಲ್ಲಿ ಈ ಹಿಂದೆ ಬಿಜೆಪಿಯದ್ದೇ ಅಬ್ಬರ ಇರುತ್ತಿತ್ತು. ಬಿಜೆಪಿಯ ತಂತ್ರಗಾರಿಕೆಗೆ ಕೌಂಟರ್‌ ನೀಡಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿತ್ತು.

ಕಾಂಗ್ರೆಸ್‌ನ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಐಟಿ ಸೆಲ್‌ ನಿರಂತರವಾಗಿ ದಾಳಿ ನಡೆಸುತ್ತಿತ್ತು. ಈ ಮೂಲಕ ಜನರ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿತ್ತು. ಪೋಸ್ಟರ್‌ಗಳು, ವಿಡಿಯೋಗಳು ಹಾಗೂ ಗಮನ ಸೆಳೆಯುವ ಟ್ವೀಟ್‌ಗಳ ಮೂಲಕ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳನ್ನು ಮಣಿಸುವಲ್ಲಿ ಬಿಜೆಪಿ ಐಟಿ ಸೆಲ್‌ ಗಮನ ಸೆಳೆಯುತ್ತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಕೈ ಮೇಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ಜವಾಬ್ದಾರಿ ವಹಿಸಿದ ಬಳಿಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ವಿಭಾಗವೂ ಚುರುಕು ಪಡೆದುಕೊಂಡಿದೆ. ಕಾಂಗ್ರೆಸ್ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಲ್ಲಿ ಹಾಗೂ ಅಭಿಯಾನಗಳಲ್ಲಿ ಐಟಿ ಸೆಲ್‌ ಮಹತ್ವದ ಪಾತ್ರ ನಿರ್ವಹಿಸಿತ್ತು.

ಕಾಂಗ್ರೆಸ್‌ನಲ್ಲಿ ಸೋಷಿಯಲ್ ಮಿಡಿಯಾದ ಉಸ್ತುವಾರಿಯನ್ನು ಪ್ರಿಯಾಂಕ್ ಖರ್ಗೆ ವಹಿಸಿಕೊಂಡ ಬಳಿಕ ಐಟಿ ಸೆಲ್‌ಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ ಎಂಬವುದು ಕಾಂಗ್ರೆಸ್ ಮೂಲಗಳ ಅಭಿಪ್ರಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಮಾಡಿದ್ದ ಒಂದು ಟ್ವೀಟ್‌ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಸ್ವತಃ ಸಿಎಂ ಹಾಗೂ ಸಚಿವರು ಈ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಈ ಒಂದು ಟ್ವೀಟ್ ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯನ್ನು ಹುಟ್ಟು ಹಾಕಿತ್ತು.

ಈ ಮೂಲಕ ಗಮನ ಸೆಳೆದ ಕಾಂಗ್ರೆಸ್‌ ಪ್ರತಿ ದಿನವೂ ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ನೆರೆ ಹಾನಿ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್‌ ಕಾಣೆಯಾಗಿದ್ದಾರೆ ಎಂಬ ಅಭಿಯಾನ, ಬೆಂಗಳೂರು ನೆರೆ ಸಂದರ್ಭದಲ್ಲಿ ಸರ್ಕಾರದ ಕಾರ್ಯವೈಖರಿಯ ವಿರುದ್ಧದ ಅಭಿಯಾನಗಳು ಪ್ರಮುಖವಾಗಿದ್ದು.

ಸದ್ಯ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಅಭಿಯಾನ ಪೇ ಸಿಎಂ. ರಾತ್ರೋ ರಾತ್ರಿ ಪೋಸ್ಟರ್‌ ಹಾಕುವ ಮೂಲಕ ಆಡಳಿತ ಪಕ್ಷ ಬಿಜೆಪಿಯ ನಿದ್ದೆಗೆಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೇ ಸಿಎಂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಏಟು ನೀಡುವಲ್ಲಿ ಈ ಅಭಿಯಾನ ಯಶಸ್ವಿಯಾಗಿದೆ. ಈ ಅಭಿಯಾನದಲ್ಲಿ ಪ್ರಿಯಾಂಕ್‌ ಖರ್ಗೆ ನೇತೃತ್ವದ ಸಾಮಾಜಿಕ ಜಾಲತಾಣಗಳ ವಿಭಾಗದ ಪಾತ್ರ ಮಹತ್ವದ್ದು.

ಇದಕ್ಕೆ ಕೌಂಟರ್‌ ಆಗಿ ಬಿಜೆಪಿಯಿಂದ ಅಭಿಯಾನ ನಡೆದರೂ ದೊಡ್ಡ ಮಟ್ಟದಲ್ಲಿ ಅದು ಗಮನ ಸೆಳೆದಿಲ್ಲ. ಬಿಜೆಪಿಯ ಈ ಹಿನ್ನೆಡೆಯ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆ ನಡೆಯುತ್ತಿದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಿಗೆ ನೀಡುತ್ತಿದ್ದ ಮಹತ್ವ ಇದೀಗ ಸಿಗುತ್ತಿಲ್ಲ ಎಂಬ ಅಭಿಪ್ರಾಯವೂ ಪಕ್ಷದ ಕೆಲವರಲ್ಲಿದೆ. ಸಿಬ್ಬಂದಿ ಕೊರತೆ ಹಾಗೂ ಐಟಿ ಸೆಲ್‌ ವಿಭಾಗಕ್ಕೆ ಸಿಗದ ಸೂಕ್ತ ಆದ್ಯತೆ ಹಾಗೂ ನೇತೃತ್ವದ ಕೊರತೆ ಈ ಹಿನ್ನಡೆಗೆ ಕಾರಣ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಇನ್ನೇನು ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೂಡಾ ಅಷ್ಟೇ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಯಾವ ರೀತಿಯಲ್ಲಿ ಕೌಂಟರ್‌ ನೀಡಲಿದೆ ಎಂಬುವುದು ಕುತೂಹಲ ಕೆರಳಿಸಿದೆ.

 

 

 

 

 

(ಕೃಪೆ:ವಿಕ)

ಜಿಲ್ಲೆ

ರಾಜ್ಯ

error: Content is protected !!