Saturday, July 27, 2024

ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಗೆ ಮುಂದಾದ್ರಾ ಧಣಿ! ಹೊಂದಾಣಿಕೆ ಹೊಗೆಗೆ ಕಿತ್ತೂರು ಕೈ ಕಾರ್ಯಕರ್ತರು ಕಂಗಾಲು

ಲೇಖಕರು:ಉಮೇಶ ಗೌರಿ (ಯರಡಾಲ)

ಕಿತ್ತೂರು: ವಿಧಾನಸಭಾ ಕ್ಷೇತ್ರದಲ್ಲಿದೀಗ ಕೈ ಮತ್ತು ಕಮಲದ ಮಧ್ಯೆ ಹೊಂದಾಣಿಕೆ ಹೊಗೆಯಾಡುತ್ತಿದೆ ಅನ್ನೋ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತು ಮಾಜಿ ಶಾಸಕ ಡಿ.ಬಿ.ಇನಾಮದಾರ ಮಧ್ಯೆ ಪಕ್ಷಕ್ಕೂ ಮೀರಿದ ನೆಂಟಸ್ತಿಕೆ ಬೆಳೆದಿದೆ ಎನ್ನಲಾಗುತ್ತಿದ್ದು ಈ ಸುದ್ದಿ ಕೈ ಮತ್ತು ಕಮಲ ಕಾರ್ಯಕರ್ತರ ಹುಬ್ಬೇರಿಸುವಂತಾಗಿದೆ.

ನಾಲ್ಕು ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ ಮಾಜಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಸರತ್ತು ಮಾಡಿ ಕಾಂಗ್ರೆಸ್ ಟಿಕೇಟ್ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ಷೇತ್ರದಲ್ಲಿ 35 ಸಾವಿರ ವೋಟ್ ಬ್ಯಾಂಕ್ ಇಟ್ಟುಕೊಂಡ ಧಣಿ ಟಿಕೇಟ್ ಗಾಗಿ ಇಷ್ಟೊಂದು ಹರಸಾಹಸ ಪಟ್ಟಿದ್ದು ನಿಜಕ್ಕೂ ರಾಜಕೀಯ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆಲ್ಲ ಕಿತ್ತೂರು ಕಾಂಗ್ರೆಸ್ ನಲ್ಲಿ ಪರ್ಯಾಯ ನಾಯಕತ್ವದ ಕೂಗು ಕೇಳಿ ಬಂದಿದ್ದೇ ಕಾರಣ ಅನ್ನೋದು ಹಾಗೂ ಈ ನಾಯಕತ್ವದ ಮುಂಚೂಣಿಯಲ್ಲಿ ಇನಾಮದಾರ ಅವರ ಬೆಂಬಲಿಗರಾಗಿ ಗುರುತಿಸಿಕೊಂಡ ಅವರ ಅಳಿಯ ಬಾಬಾಸಾಹೇಬ ಪಾಟೀಲ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಇನಾಮದಾರ ಅವರ ಸೋಲಿಗೆ ಕಾರಣವಾಗಿದ್ದು.

2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಬಾಬಾಸಾಹೇಬ ಪಾಟೀಲ ಟಿಕೇಟ್ ವಂಚಿತರಾಗಿ ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 25 ಸಾವಿರಕ್ಕೂ ಅಧಿಕ ಮತ ಪಡೆಯುವ ಮೂಲಕ ಕಾಂಗ್ರೆಸ್ ಮತಗಳನ್ನು ಸೆಳೆದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸುಲಭ ದಾರಿ ಮಾಡಿಕೊಟ್ಟಿದ್ದರು. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತನ್ನ ತಾಕತ್ ತೋರಿಸಿದ ಬಾಬಾಸಾಹೇಬ ಪಾಟೀಲ ಕಾಲಾಂತರದಲ್ಲಿ ಪುನಃ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಮತ್ತೇ ಪಕ್ಷಕ್ಕೆ ಸೇರಿಕೊಂಡಿದ್ದರು.

ಈ ನಾಲ್ಕೈದು ವರ್ಷಗಳಲ್ಲಿ ಇನಾಮದಾರ ಬೆಂಬಲಿಗರು ಮತ್ತು ಬಾಬಾಸಾಹೇಬ ಪಾಟೀಲ ಬೆಂಬಲಿಗರು ತಮ್ಮದೇ ಹಾದಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಿಳಿದಿದ್ದು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವ ಮೂಲಕ ಕ್ಷೇತ್ರದಲ್ಲಿ ಮುಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ ಬಾಬಾಸಾಹೇಬ ಪಾಟೀಲ ಅವರ ವಿರುದ್ದ ಇನಾಮದಾರ ಬೆಂಬಲಿಗರು ಇತ್ತೀಚೆಗೆ ಡಿ.ಕೆ ಶಿವಕುಮಾರ್ ಅವರಲ್ಲಿ ಪ್ರತಿಭಟನೆ ಮೂಲಕ ಇನಾಮದಾರ ಅವರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದರು.

ಇನಾಮದಾರ ಅವರ ಒಡೆತನದ ಇನಾಮದಾರ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗಾಗಿ ಹಿರೇಕೊಪ್ಪದಲ್ಲಿ ಖರೀದಿಸಿದ ಭೂಮಿಯನ್ನು ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ‌ಹಾಗೂ ಅವರ ಆತ್ಮೀಯ ಸ್ನೇಹಿತರು ಸೇರಿ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ನಡುವೆ ಹಾಲಿ ಮತ್ತು ಮಾಜಿಗಳ ನಡುವೆ ಆತ್ಮೀಯತೆ ಹೆಚ್ಚಿರುವುದಾಗಿ ಗುಸು ಗುಸು ಸುದ್ದಿಯಾಗಿದೆ.

ಈ ಕಾರಣ ನಾಲ್ಕೈದು ತಿಂಗಳಲ್ಲಿ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಗಾಳಿ ಬೀಸಿರುವುದಾಗಿ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರೊಂದಿಗೆ ಇನಾಮದಾರ ನಿಕಟ ಸಂಪರ್ಕದಲ್ಲಿರುವುದಾಗಿ ಒಂದು ವೇಳೆ ಕೈ ಟಿಕೇಟ್ ತಪ್ಪಿದ್ದಲ್ಲಿ ತನ್ನ ಬೆಂಬಲಿಗರ ಮತಗಳನ್ನು ಬಿಜೆಪಿ ಅಭ್ಯರ್ಥಿಗೆ ಹಾಕಿಸುವುದಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಬೆಳಗಾವಿ ಜಿಲ್ಲೆ ಸೇರಿದಂತೆ ಕಿತ್ತೂರು ಮತ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಶತಾಯ ಗತಾಯ ಟಿಕೇಟ್ ಪಡೆದೇ ತೀರುವುದಾಗಿ ಹಾಗೂ ಮುಂದಿನ ಬಾರಿ ಶಾಸಕರಾಗಿ ಆಯ್ಕೆಯಾಗಲು ಪೂರ್ವತಯಾರಿ ಮಾಡಿಕೊಳ್ಳುತ್ತಿರುವ ಬಾಬಾಸಾಹೇಬ ಪಾಟೀಲ ಅವರಿಗೆ ಇದರಿಂದ ಇರಿಸು ಮುರಿಸಾಗಿದ್ದು, ಬಣ ರಾಜಕೀಯವೇನಿಲ್ಲ ಇನಾಮದಾರ ನಮ್ಮ ಹಿರಿಯರು ಕುಟುಂಬದ ಆಪ್ತರು ಅವರಿಗೆ ಟಿಕೇಟ್ ಸಿಕ್ಕರೆ ಖಂಡಿತ ಬೆಂಬಲ ಸೂಚಿಸುವುದಾಗಿ ಬಾಬಾಸಾಹೇಬ ಪಾಟೀಲ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಬಾಬಾಸಾಹೇಬ ಅವರಿಗೆ ಟಿಕೇಟ್ ಸಿಕ್ಕಲ್ಲಿ ಇನಾಮದಾರ ಅವರ ನಡೆ ಏನು ಅನ್ನೋದು ತೀವ್ರ ಕುತೂಹಲ ಮೂಡಿಸಿದ್ದು ಕ್ಷೇತ್ರದಲ್ಲಿ ಬಣ ರಾಜಕೀಯದ ಕೆಸರೆರಚಾಟ ಜೋರಾಗಿದೆ.

ಇನಾಮದಾರ ಮತ್ತು ಬಾಬಾಸಾಹೇಬ ಒಂದಾಗಿ ಚುನಾವಣೆ ಎದುರಿಸಿದರೆ ಈ ಬಾರಿ ಕಿತ್ತೂರು ಕೈ ವಶವಾಗಲಿದ್ದು ಒಡಕು ಮುಂದುವರೆದರೆ ಪುನಃ ಕಮಲದ ತೆಕ್ಕೆಗೆ ಅಧಿಕಾರದ ಹೋಳಿಗೆ ಜಾರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಈವರೆಗೂ ಕೈ ಟಿಕೇಟ್ ಯಾರಿಗೆ ಅನ್ನೋದು ಗೌಪ್ಯವಾಗಿಯೇ ಇರುವುದರಿಂದ ಈ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡರಾದ ಎಂ.ಬಿ.ಪಾಟೀಲ ಹಾಗು ವಿನಯ ಕುಲಕರ್ಣಿ ಅವರ ಹೆಗಲಿಗೆ ನೀಡಿದ್ದು, ಬಾಬಾಸಾಹೇಬ ಪಾಟೀಲ ಮತ್ತು ವಿನಯ ಕುಲಕರ್ಣಿ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು ಈ ಬಾರಿ ಬಾಬಾಸಾಹೇಬ ಅವರಿಗೆ ಟಿಕೇಟ್ ಪಡೆಯಲು ಸುಲಭವಾಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಾರೆ ಕಿತ್ತೂರು ಕಾಂಗ್ರೆಸ್ ಒಡೆದ ಮನೆಯಾಗಿದ್ದಂತೂ ಸುಳ್ಳಲ್ಲ ಮಾವ ಅಳಿಯನ ಕಿತ್ತಾಟದಿಂದಾಗಿ ಕಿತ್ತೂರು ಕೈ ವಶವಾಗುವುದು ಅಷ್ಟು ಸುಲಭ ಸಾಧ್ಯವಲ್ಲ. ಹೀಗಾಗಿ ಪಕ್ಷದ ವರಿಷ್ಠರು ಜಿಲ್ಲೆಯ ಮುಖಂಡರು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

ಜಿಲ್ಲೆ

ರಾಜ್ಯ

error: Content is protected !!