Sunday, September 8, 2024

ಶಿಕ್ಷಣ ಸಚಿವ ನಾಗೇಶ್‌ ಹೇಳಿಕೆಯಿಂದ ಸರ್ಕಾರದ ನಿರ್ಲಕ್ಷ್ಯ ಬಟಾ ಬಯಲು:ಎಎಪಿ ಅಧ್ಯಕ್ಷ ಪೃಥ್ವಿ ರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ಹಾಗೂ ಶಾಲೆಗಳಲ್ಲಿ 24 ಸಾವಿರ ಕೊಠಡಿಗಳ ಕೊರತೆ ಇರುವುದನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು, ಶಿಕ್ಷಣ ಕ್ಷೇತ್ರದ ಕುರಿತು ಸರ್ಕಾರದ ತೀವ್ರ ನಿರ್ಲಕ್ಷ್ಯ ಇದರಿಂದ ಸಾಬೀತಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪೃಥ್ವಿ ರೆಡ್ಡಿ, “ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 47 ಸಾವಿರ ಹುದ್ದೆಗಳು ಖಾಲಿ ಇರುವುದನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ಕೇವಲ 15 ಸಾವಿರ ಹುದ್ದೆಗಳಿಗೆ ಮಾತ್ರ ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಪ್ರಕ್ರಿಯೆ ನಡೆಸುತ್ತಿದೆ. 15 ಸಾವಿರ ಶಿಕ್ಷಕರ ನೇಮಕವು ಸ್ವತಂತ್ರ ಭಾರತದ ಇತಿಹಾಸದಲ್ಲೇ ದೊಡ್ಡ ದಾಖಲೆ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಸಚಿವರು ಈ ಹೇಳಿಕೆಯು ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರಿಗೆ ಮಾಡಿದ ಅಪಮಾನ” ಎಂದು ಹೇಳಿದರು.

“ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲದಿರುವುದು ಕೂಡ ಬೆಳಕಿಗೆ ಬಂದಿದೆ. ಶಿಕ್ಷಕರ ಕೊರತೆಯಿಂದಾಗಿ ಈಗಿರುವ ಶಿಕ್ಷಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ವ್ಯತ್ಯಯ ಉಂಟಾಗಿ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ರಾಜ್ಯಾದ್ಯಂತ 24 ಸಾವಿರ ಶಾಲಾ ಕೊಠಡಿಗಳ ಅಗತ್ಯವಿದ್ದರೂ ಕೇವಲ 8100 ಕೊಠಡಿಗಳನ್ನು ಮಾತ್ರ ನಿರ್ಮಿಸುವುದಾಗಿ ಸಚಿವ ನಾಗೇಶ್‌ ಹೇಳಿದ್ದಾರೆ. ಶಿಕ್ಷಣ ಇಲಾಖೆಯಲ್ಲೂ 40% ಭಷ್ಟಾಚಾರ ನಡೆಯುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ಸರ್ಕಾರ ನಿರ್ಮಿಸಲಿರುವ ಶಾಲಾ ಕೊಠಡಿಗಳ ಕಾಮಗಾರಿಗಳಲ್ಲಿ ಕೂಡ ಅಕ್ರಮ ನಡೆಯುವ ಸಾಧ್ಯತೆಯಿದೆ” ಎಂದು ಹೇಳಿದರು.

“ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯವೆಂಬುದನ್ನು ಪಕ್ಷವು ದೆಹಲಿಯಲ್ಲಿ ತೋರಿಸಿಕೊಟ್ಟಿದೆ. ದೆಹಲಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಮೂಲಸೌಕರ್ಯಗಳಿದ್ದು, ಹಲವು ಸರ್ಕಾರಿ ಶಾಲೆಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿವೆ. ಸ್ಮಾರ್ಟ್‌ ತರಗತಿಗಳು, ಈಜುಕೊಳಗಳು, ದೇಶಭಕ್ತಿ ಪಠ್ಯಕ್ರಮ, ಬ್ಯುಸಿನೆಸ್‌ ಬ್ಲಾಸ್ಟರ್ಸ್‌ ಯೋಜನೆ, ಶಿಕ್ಷಕರಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಮುಂತಾದ ಹಲವು ಸುಧಾರಣೆಗಳನ್ನು ದೆಹಲಿ ಸರ್ಕಾರ ತಂದಿದೆ. ಅಲ್ಲಿನ ಕೆಲವು ಸರ್ಕಾರಿ ಶಾಲೆಗಳಿಗೆ ಹೋದರೆ ಪಂಚತಾರಾ ಹೋಟೆಲ್‌ಗೆ ಹೋದ ಅನುಭವವಾಗುತ್ತದೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಗೆ ದೆಹಲಿ ಶಿಕ್ಷಣ ಇಲಾಖೆಯ ಸಾಧನೆಯ ಶೇ. 1ರಷ್ಟು ಸುಧಾರಣೆ ತರಲೂ ಸಾಧ್ಯವಾಗಿಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಜಿಲ್ಲೆ

ರಾಜ್ಯ

error: Content is protected !!