Sunday, September 8, 2024

ಯುರೋಪ್ ಫ್ಯಾಷನ್ ಮಾರುಕಟ್ಟೆಯಲ್ಲಿ ಬೈಲಹೊಂಗಲದ ಮೇಕಲಮರಡಿಯ ಬ್ಯಾಗ್ ಗಳಿಗೆ ಬಾರಿ ಡಿಮ್ಯಾಂಡ್

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಬೋರ್ಡ್ ಸಹ ಇಲ್ಲದ ಗೋದಾಮಿನಲ್ಲಿ ಮಹಿಳೆಯರು ತಯಾರಿಸಿದ ಬ್ಯಾಗ್ ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿದೆ! ಇವು ಯುರೋಪ್ ಫ್ಯಾಷನ್ ಮಾರುಕಟ್ಟೆಯಲ್ಲಿ ಉತ್ತರ ಕರ್ನಾಟಕದ  ಬಿಸಿ ಬಿಸಿ ಮಿರ್ಚಿ ಭಜಿಯಂತೆ ಮಾರಾಟವಾಗುತ್ತಿವೆ.

ಮೇಕಲಮರಡಿಯಲ್ಲಿರುವ ಈ ಹಳೆಯ ಗೋದಾಮಿನಲ್ಲಿ ಕೆಲವು ವರ್ಕ್ ಶೆಡ್​ಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸೌಲಭ್ಯಗಳಿಲ್ಲ. ಇಲ್ಲಿ 42 ಮಹಿಳೆಯರು ನೆಲದ ಮೇಲೆ ಕುಳಿತು ಬ್ಯಾಗ್ ತಯಾರಿಸುತ್ತಾರೆ.

ಈ ಚೀಲಗಳ ತಯಾರಿಕೆಯಲ್ಲಿ ನೈಸರ್ಗಿಕ ಸೆಣಬು, ಹುಲ್ಲು ಮತ್ತು ಹತ್ತಿ ತುಂಡುಗಳನ್ನು ಬಳಸಲಾಗುತ್ತದೆ. ಸೆಣಬು, ಬಿದಿರು ಮತ್ತು ಹುಲ್ಲಿನ ನಾರುಗಳಿಂದ ತಯಾರಿಸಿದ ಚೀಲಗಳನ್ನು ಮಿಟಾನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ.

ಇಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರೆಲ್ಲರೂ ವಿವಿಧ ಹಳ್ಳಿಯಿಂದ ಬಂದವರು. ಇವರೆಲ್ಲ ಏನೂ ಓದದ ಅನಕ್ಷರಸ್ಥರು. ಆದರೆ ಈಗ ಆ ಅನಕ್ಷರಸ್ಥ ಮಹಿಳೆಯರು ಅಂತರಾಷ್ಟ್ರೀಯ ಮಹಿಳಾ ಪರಿಕರಗಳ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಯಶಸ್ಸು ಮಹಿಳೆಯರಿಗೆ ರಾತ್ರೋರಾತ್ರಿ ಬಂದಿದ್ದಲ್ಲ. 20 ವರ್ಷಗಳ ಹಿಂದೆ ಮೇಕಲಮರಡಿ ಗ್ರಾಮದಲ್ಲಿ ಜೋಸ್ ಎಂಬುವವರು ರೈತರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆ ಹಳ್ಳಿಯ ಕೆಲವು ಮಹಿಳೆಯರು ಈ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಿದ್ದರು.

ಈ ನೈಸರ್ಗಿಕ ಚೀಲಗಳು ಫ್ರಾನ್ಸ್, ಇಟಲಿ ಮತ್ತು ಇಂಗ್ಲೆಂಡ್​ನಲ್ಲಿಯೂ ಗ್ರಾಹಕರನ್ನು ಹೊಂದಿವೆ. ಹೊಂದಿವೆ. ಭಾರತದಲ್ಲಿಯೂ ಈ ಬ್ರಾಂಡ್​ನ ಬ್ಯಾಗ್​ಗಳಿಗೆ ಅಪಾರ ಸಂಖ್ಯೆಯ ಗ್ರಾಹಕರಿದ್ದಾರೆ.

ಎನ್​ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದ ಜೋಸ್, ಮೇಕಲಮರಡಿ ಗ್ರಾಮದಲ್ಲಿಯೇ ವಾಸವಿದ್ದರು. ಜಲಾನಯನ ಅಭಿವೃದ್ಧಿ ಮತ್ತು ಸುಧಾರಿತ ಕೃಷಿ ಪದ್ಧತಿಯಲ್ಲಿ ರೈತರಿಗೆ ತರಬೇತಿ ನೀಡುತ್ತಿದ್ದರು. ಅಲ್ಲದೆ ಜೋಸ್ ಗ್ರಾಮದ ಬಡ ಮಹಿಳೆಯರಿಗೆ ಸ್ಥಿರ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಯೋಚಿಸಿದರು. ಇದಕ್ಕಾಗಿ ಅವರು ತಮ್ಮ ಸ್ನೇಹಿತ ಕರಕುಶಲಿ ಎನ್.ಬಿ.ಗೋಪಿಕೃಷ್ಣ ಅವರನ್ನು ಭೇಟಿ ಮಾಡಿದರು.

ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನು ಬಳಸಿ ಬೆಲೆಬಾಳುವ ಉತ್ಪನ್ನಗಳನ್ನು ತಯಾರಿಸುವಂತೆ ಗೋಪಿಕೃಷ್ಣ ಮಹಿಳೆಯರಿಗೆ ಸಲಹೆ ನೀಡಿದರು. ಹೀಗಾಗಿ ಈ ಬ್ರಾಂಡ್ ಅನ್ನು ಭಾರತೀಯ ಮತ್ತು ವಿದೇಶಿ ಧನಸಹಾಯ ಸಂಸ್ಥೆಗಳ ಆರ್ಥಿಕ ಬೆಂಬಲದೊಂದಿಗೆ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಪ್ರಾರಂಭಿಸಲಾಯಿತು.

ಮೊದಲ ಮೂರು ವರ್ಷ ಮಹಿಳೆಯರು ಸಾಕಷ್ಟು ಕಷ್ಟ ಪಡುತ್ತಿದ್ದರು. ನಂತರ ಫೈಬರ್ ಸಂಸ್ಕರಣೆಯಲ್ಲಿ ಪರಿಣತಿ ಪಡೆದರು, ವಿವಿಧ ರೀತಿಯ ಚೀಲಗಳು ಮತ್ತು ಬಿಡಿಭಾಗಗಳನ್ನು ತಯಾರಿಸಿದರು. ಚೀಲಗಳು, ಟೋಪಿಗಳು, ಲಾಂಡ್ರಿ ಬುಟ್ಟಿಗಳು, ಬೆಲ್ಟ್​ ಮತ್ತು ಪರ್ಸ್​ಗಳಂತಹ ಅನೇಕ ರೀತಿಯ ಪರಿಕರಗಳನ್ನು ತಯಾರಿಸಲಾಗುತ್ತಿದೆ.

ಈ ಅನಕ್ಷರಸ್ಥ ಮಹಿಳೆಯರು ಉತ್ಪಾದಿಸುವ ಬ್ಯಾಗ್​ಗಳನ್ನು ವೆಬ್​ಸೈಟ್ ಮೂಲಕವೂ ಆರ್ಡರ್ ಮಾಡಬಹುದು! ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮೇಕಲಮರಡಿಯ ಮಹಿಳೆಯರು ತಮ್ಮ ಉತ್ಪನ್ನಗಳನ್ನು ಜಗತ್ತಿಗೆ ಪ್ರದರ್ಶಿಸಲು www.mitan.in ಎಂಬ ವೆಬ್​ಸೈಟ್ ಪ್ರಾರಂಭಿಸಿದ್ದಾರೆ, ಈ ವೆಬ್​ಸೈಟ್​ನಲ್ಲೂ ಆರ್ಡರ್ ಮಾಡಬಹುದು.

ಜಿಲ್ಲೆ

ರಾಜ್ಯ

error: Content is protected !!