Tuesday, May 28, 2024

ನನ್ನ ಬಂಧಿಸಿ, ಇಲ್ಲ ಪ್ರಧಾನಿ ಕ್ಷಮೆ ಕೇಳಲಿ: ಮನೀಶ್ ಸಿಸೋಡಿಯಾ.

ನವದೆಹಲಿ,ಸೆ.15: ಬಿಜೆಪಿ ಸ್ಟಿಂಗ್ ಆಪರೇಷನ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸೋಮವಾರದೊಳಗೆ ಸಿಬಿಐ ನನ್ನನ್ನು ಬಂಧಿಸಬೇಕು. ಇಲ್ಲದಿದ್ದರೆ, ಪ್ರಧಾನಿ ನನ್ನಲ್ಲಿ ಕ್ಷಮೆಯಾಚಿಸಬೇಕು ಎಂದಿದ್ದಾರೆ.

ಬಿಜೆಪಿ ಗುರುವಾರ ಆಮ್ ಆದ್ಮಿ ಪಕ್ಷದ ವಿರುದ್ಧ ಮತ್ತೊಂದು “ಸ್ಟಿಂಗ್ ಆಪರೇಷನ್” ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಬಕಾರಿ ಹಗರಣದ ಆರೋಪಿಯೊಬ್ಬರು ಈಗ ರದ್ದಾಗಿರುವ ಅಬಕಾರಿ ನೀತಿಯನ್ನು ಕೆಲವರಿಗೆ ಲಾಭ ಪಡೆಯುವ ರೀತಿಯಲ್ಲಿ ರೂಪಿಸಲಾಗಿದೆ ಎಂದು ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, “ಸಿಬಿಐ ನನ್ನ ಮನೆ ಮೇಲೆ ದಾಳಿ ಮಾಡಿದೆ ಆದರೆ ಏನೂ ಸಿಕ್ಕಿಲ್ಲ. ಅವರು ನನ್ನ ಲಾಕರ್ ಅನ್ನು ಸಹ ಹುಡುಕಿದರು. ಆದರೆ, ಅಲ್ಲಿಯೂ ಏನೂ ಸಿಗಲಿಲ್ಲ. ಇದೀಗ ಬಿಜೆಪಿ ಈ ಸ್ಟಿಂಗ್ ಆಪರೇಷನ್ ಹೊರ ತಂದಿದೆ. ಈ ಬಗ್ಗೆಯೂ ಸಿಬಿಐ ಮತ್ತು ಇಡಿ ತನಿಖೆ ನಡೆಸಬೇಕು” ಎಂದಿದ್ದಾರೆ. ಈ ಆರೋಪ ಸರಿಯಾಗಿದ್ದರೆ ಸೋಮವಾರದೊಳಗೆ ನನ್ನನ್ನು ಬಂಧಿಸಬೇಕು. ಇಲ್ಲದಿದ್ದರೆ, ಸೋಮವಾರದೊಳಗೆ ಈ ನಕಲಿ ಸ್ಟಿಂಗ್ ಆಪರೇಷನ್‌ಗಾಗಿ ಪ್ರಧಾನಿ ನನ್ನಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಯ್ದ ಕೆಲವರಿಗೆ ಸಹಾಯ ಮಾಡಲು ದೆಹಲಿಯ ಎಎಪಿ ಸರ್ಕಾರವು ತನ್ನ ಮದ್ಯ ನೀತಿಯನ್ನು ರೂಪಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪಕ್ಕೆ “ಸ್ಟಿಂಗ್ ಆಪರೇಷನ್” ವಿಡಿಯೋವನ್ನು ಬಿಡುಗಡೆ ಮಾಡಿದೆ. ಗುತ್ತಿಗೆಗಾಗಿ ಎಎಪಿ ಹಣ ತೆಗೆದುಕೊಂಡಿದೆ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಯು ರಹಸ್ಯವಾಗಿ ರೆಕಾರ್ಡ್ ಮಾಡಿದ ವಿಡಿಯೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಸಿರುವ ವ್ಯಕ್ತಿಯೊಬ್ಬರು ದೆಹಲಿ ಸರ್ಕಾರವು ಕೆಲವು ವ್ಯಕ್ತಿಗಳಿಗೆ ಸಹಾಯ ಮಾಡಲು ಉದ್ದೇಶಪೂರ್ವಕವಾಗಿ ಸಣ್ಣ ಗುತ್ತಿಗೆದಾರರನ್ನು ಅಬಕಾರಿ ನೀತಿಯಿಂದ ದೂರವಿಟ್ಟಿದೆ ಎಂದು ಹೇಳಿದ್ದಾರೆ.

ಸಿಬಿಐ ಬಂಧಿಸದಿದ್ದರೇ, ಪ್ರಧಾನಿ ಕ್ಷಮೆ ಕೇಳಲಿ

ವಿಡಿಯೋ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಕ್ರಿಯೆಯಾಗಿ ಬಿಜೆಪಿಗೆ ಸವಾಲು ಎಸೆದರು. “ಬಿಜೆಪಿ ಈ ಸೋಕಾಲ್ಡ್ ಸ್ಟಿಂಗ್ ಅನ್ನು ಸಿಬಿಐಗೆ ನೀಡಬೇಕು, ಅದು ಹೇಗಾದರೂ ಪಕ್ಷದ ಬಾಹ್ಯ ಏಜೆನ್ಸಿಯಂತೆ ಕೆಲಸ ಮಾಡುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ಅಂದರೆ, ಸೋಮವಾರದ ಒಳಗೆ ಈ ‘ಕುಟುಕು’ ಕಾರ್ಯಾಚರನೆಯಲ್ಲಿ ಭ್ರಷ್ಟಾಚಾರದ ಪುರಾವೆಗಳಿದ್ದರೆ ಸಿಬಿಐ ನನ್ನನ್ನು ಬಂಧಿಸಬೇಕು” ಎಂದಿದ್ದಾರೆ. “ಅವರು ನನ್ನನ್ನು ಬಂಧಿಸದಿದ್ದರೇ, ಇದು ಬಿಜೆಪಿಯಿಂದ ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನವಾಗಿದೆ ಎಂಬುದಕ್ಕೆ ಪುರಾವೆಯಾಗುತ್ತದೆ. ಕೇವಲ ನಮ್ಮನ್ನು ಕೆಣಕುವ ಪ್ರಯತ್ನ ಇದು” ಎಂದಿದ್ದಾರೆ.

ನಿಮ್ಮ ಕೆಲಸ, ಪ್ರಾಮಾಣಿಕತೆಯ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಸಿಸೋಡಿಯಾ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ “ವಾಹ್, ಮನೀಷ್! ಒಬ್ಬ ಪ್ರಾಮಾಣಿಕ ಮತ್ತು ಧೈರ್ಯಶಾಲಿ ವ್ಯಕ್ತಿ ಮಾತ್ರ ಇಂತಹ ಸವಾಲನ್ನು ನೀಡಲು ಸಾಧ್ಯ. ನಿಮ್ಮ ಸವಾಲನ್ನು ಬಿಜೆಪಿ ಸ್ವೀಕರಿಸುತ್ತದೆ ಎಂಬ ನಂಬಿಕೆ ನನಗಿದೆ. ನಿಮ್ಮ ಕೆಲಸ ಮತ್ತು ಪ್ರಾಮಾಣಿಕತೆಯ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತದೆ. ಅವರು ನಿವು ಮಾಡಿರುವ ಶಿಕ್ಷಣದ ಕೆಲಸದಿಂದ ಹೆದರುತ್ತಾರೆ. ಹೀಗಾಗಿ ಅದನ್ನು ನಿಲ್ಲಿಸಲು ಬಯಸುತ್ತಾರೆ. ನೀನು ನಿನ್ನ ಕೆಲಸವನ್ನು ಮಾಡುತ್ತಾ ಇರು” ಎಂದು ಹುರಿದುಂಬಿಸಿದ್ದಾರೆ.

ಗೋವಾ ಮತ್ತು ಪಂಜಾಬ್‌ ಚುನಾವಣೆಯಲ್ಲಿ ಹಣ ಬಳಕೆ

ಗೋವಾ ಮತ್ತು ಪಂಜಾಬ್‌ನಲ್ಲಿ ಎಎಪಿ ಚುನಾವಣಾ ಪ್ರಚಾರಕ್ಕಾಗಿ ಗುತ್ತಿಗೆದಾರರಿಂದ ಲಂಚವನ್ನು ಬಳಸಲಾಗಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸುಧಾಂಶು ತ್ರಿವೇದಿ, “ಸೋಷಿಯಲ್ ಮೀಡಿಯಾದಲ್ಲಿ ಸ್ಟಿಂಗ್ ಆಪರೇಷನ್ ವಿಡಿಯೋ ಹರಿದಾಡುತ್ತಿದೆ. ಈ ಸ್ಟಿಂಗ್ ವಿಡಿಯೋ ಈಗಾಗಲೇ ಸಾರ್ವಜನಿಕವಾಗಿದೆ. ಇದನ್ನು ಬಿಜೆಪಿ ಮಾಡಿಸಿಲ್ಲ” ಎಂದು ಅವರು ಹೇಳಿದರು.

“ಮದ್ಯದ ಹಗರಣದ ಹಣವನ್ನು ಗೋವಾ ಮತ್ತು ಪಂಜಾಬ್ (ವಿಧಾನಸಭಾ) ಚುನಾವಣೆಗಳಲ್ಲಿ ಹೇಗೆ ಬಳಸಲಾಗಿದೆ ಎಂಬುದನ್ನೂ ಈ ವಿಡಿಯೋ ತೋರಿಸುತ್ತದೆ. ಯಾರಾದರೂ ನಿಮ್ಮಿಂದ ಹಣಕ್ಕೆ ಬೇಡಿಕೆಯಿಟ್ಟರೆ ಸ್ಟಿಂಗ್ ವಿಡಿಯೋ ಮಾಡಿ ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿದ್ದರು. ಅದರ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ. ಅವರ ಆ ಭರವಸೆಗಳು ಎಲ್ಲಿವೆ?” ಎಂದು ಪ್ರಶ್ನಿಸಿದ್ದಾರೆ.

ಜುಲೈನಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಹೊಸ ಅಬಕಾರಿ ನೀತಿಯ ಬಗ್ಗೆ ತನಿಖೆಗೆ ಆದೇಶಿಸಿದ ನಂತರ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ದಾಳಿ ನಡೆಸಿ ಪ್ರಕರಣದ ಆರೋಪಿ ಎಂದು ಹೆಸರಿಸಿದೆ. ಅದೇ ತಿಂಗಳು, ಅರವಿಂದ್ ಕೇಜ್ರಿವಾಲ್ ಸರ್ಕಾರವು ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ಬಂದ ನೀತಿಯನ್ನು ಹಿಂತೆಗೆದುಕೊಂಡಿತು.

 

 

 

 

 

 

 

 

 

 

 

 

 

(oneindia)

ಜಿಲ್ಲೆ

ರಾಜ್ಯ

error: Content is protected !!